ಉಜಿರೆ ರಸ್ತೆಯಲ್ಲಿ ಚಂರಡಿ ನೀರು ಹರಿಯುತ್ತಿರುವುದು.  
ಉಡುಪಿ

ಉಜಿರೆಯಲ್ಲಿ ರಸ್ತೆಯಲ್ಲೇ ಹರಿದ ಚರಂಡಿ ನೀರು

ಬೆಳ್ತಂಗಡಿ: ಉಜಿರೆ ಪೇಟೆಯಿಂದ ಬೆಳ್ತಂಗಡಿ ಕಡೆಗೆ ಸಾಗುವ ರಾಷ್ಟ್ರೀಯ ಹೆದ್ದಾರಿಯ ಪೆಟ್ರೋಲ್ ಬಂಕ್ ಸಮೀಪ ಬುಧವಾರ ಚರಂಡಿ ನೀರು ರಸ್ತೆಯಲ್ಲೇ ಹರಿದು ವಾಹನ ಸವಾರರು ಹಾಗೂ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಿದರು.
ರಸ್ತೆ ಬದಿಯ ಚರಂಡಿ ಬ್ಲಾಕ್ ಆಗಿರುವುದರಿಂದ ಮಳೆ ನೀರು ಸರಾಗವಾಗಿ ಹರಿಯದೆ ರಸ್ತೆಯ ಮೇಲೆಯೇ ಹರಿದು ಸಂಚಾರಕ್ಕೂ ಅಡಚಣೆ ಉಂಟಾಯಿತು.

ಪುಂಜಾಲಕಟ್ಟೆ- ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿಯ ಈ ಭಾಗದಲ್ಲಿ ಚರಂಡಿ ಕಾಮಗಾರಿ ಅರ್ಧಂಬರ್ಧ ನಡೆದಿದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಚರಂಡಿಗಳು ತುಂಬಿ, ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಕಸ-ಕಡ್ಡಿಗಳು ನೀರಿನ ಹರಿವಿಗೆ ಅಡ್ಡಿಯಾಗಿವೆ. ಪರಿಣಾಮ ಚರಂಡಿಯ ಕೊಳಕು ನೀರು ರಸ್ತೆಯಲ್ಲೇ ಹರಿದು, ರಸ್ತೆಯ ಬಹುಭಾಗ ಜಲಾವೃತಗೊಂಡಿತ್ತು.
ಚರಂಡಿಯ ನೀರು ರಸ್ತೆ ಬದಿಯ ಹಲವು ಅಂಗಡಿಗಳ ಮುಂಭಾಗಕ್ಕೆ ನುಗ್ಗಿತ್ತು. ಕೊಳಚೆ ನೀರು ರಸ್ತೆಯಲ್ಲೇ ನಿಂತಿದ್ದರಿಂದ ದುರ್ವಾಸನೆ ಹರಡಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡೇ ಸಂಚರಿಸುವಂತಾಯಿತು.
ಚರಂಡಿಯನ್ನು ತಕ್ಷಣ ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಭಾರಿ ಮಳೆ ಬಂದಾಗ ಸಮಸ್ಯೆ ಮತ್ತಷ್ಟು ಉಲ್ಬಣಿಸುವ ಸಾಧ್ಯತೆ ಇದೆ ಎಂದು ಸ್ಥಳೀಯರು ಸಂಬಂಧಪಟ್ಟ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.