ಉಡುಪಿಯ ಎಸ್​ಡಿಎಂ ಆಯುರ್ವೇದ ಕಾಲೇಜ್​ನಲ್ಲಿ 'ಕ್ಷಮತ್ವಂ' ಸಮ್ಮೇಳನದ ಸಮಾರೋಪ ನಡೆಯಿತು. ಡಾ. ಪ್ರದೀಪ್​ ಕುಮಾರ್​ ಪ್ರಜಾಪತಿ, ಡಾ. ಸಿದ್ದಣ್ಣಗೌಡ ಎ. ಪಾಟೀಲ್​, ಮಮತಾ ಕೆ.ವಿ., ಡಾ. ನಿರಂಜನ್​ ರಾವ್​, ಪ್ರಸನ್ನ ಎನ್​. ಮೊಗಸಾಲೆ, ಡಾ. ನಾಗರಾಜ್​ ಎಸ್​. ಇತರರಿದ್ದರು. RANJAN
ಉಡುಪಿ

ಆಟೋಇಮ್ಯೂನ್​ ಕಾಯಿಲೆ ಚಿಕಿತ್ಸೆಯಲ್ಲಿದೆ ತೀವ್ರ ಸವಾಲು

* ಎಐಐಎ ನಿರ್ದೇಶಕ ಡಾ. ಪ್ರದೀಪ್​ ಕುಮಾರ್​ ಪ್ರಜಾಪತಿ ಅನಿಸಿಕೆ

* ಎಸ್​ಡಿಎಂ ಕಾಲೇಜ್​ನಲ್ಲಿ 'ಕ್ಷಮತ್ವಂ' ಸಮ್ಮೇಳನ ಸಮಾರೋಪ

ಉಡುಪಿ: ಆಟೋಇಮ್ಯೂನ್​ ಕಾಯಿಲೆಗಳ ಚಿಕಿತ್ಸೆಯು ಅತ್ಯಂತ ಸವಾಲಿನದ್ದಾಗಿದೆ. ಈ ಕಾಯಿಲೆಗಳಿಗೆ ಸಂಬಂಧಿಸಿದ ವಿವಿಧ ಆಯಾಮ ಮತ್ತು ದೃಷ್ಟಿಕೋನಗಳನ್ನು 'ಕ್ಷಮತ್ವಂ' ವೇದಿಕೆಯಲ್ಲಿ ಒಗ್ಗೂಡಿಸಿರುವುದು ಶ್ಲಾಘನೀಯ. ಇಂತಹ ಮಹತ್ವದ ವಿಷಯದ ಸಮ್ಮೇಳನ ನಡೆದಿರುವುದು ಅರ್ಥಪೂರ್ಣ ಎಂದು ನವದೆಹಲಿಯ ಆಯುಷ್​ ಸಚಿವಾಲಯದ ಅಖಿಲ ಭಾರತ ಆಯುರ್ವೇದ ಸಂಸ್ಥೆ (ಎಐಐಎ)ಯ ನಿರ್ದೇಶಕ ಡಾ. ಪ್ರದೀಪ್​ ಕುಮಾರ್​ ಪ್ರಜಾಪತಿ ತಿಳಿಸಿದರು.

ಉಡುಪಿಯ ಕುತ್ಪಾಡಿಯಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜ್​, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಜಾಗತಿಕ ಮಟ್ಟದ ಜ್ಞಾನ, ಸಂಶೋಧನೆ ಹಾಗೂ ವಿವಿಧ ತಜ್ಞರ ಅನುಭವಗಳನ್ನು ಪ್ರತಿಪಾದಿಸುವ 'ಆಟೋಇಮ್ಯೂನ್​' ಕಾಯಿಲೆಗಳ ಸಮಗ್ರ ಚರ್ಚೆಯ 'ಕ್ಷಮತ್ವಂ' ಅಂತಾರಾಷ್ಟ್ರೀಯ ಸಮ್ಮೇಳನದ ಸಮಾರೋಪದಲ್ಲಿ ಮಾತನಾಡಿದರು.

ಜ್ಞಾನವಾಗಲಿ ವಿವೇಕ

ಬೆಂಗಳೂರಿನ ರಾಜೀವ್​ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ಆರ್​ಜಿಯುಎಚ್​ಎಸ್​)ದ ಅಧ್ಯಯನ ಮಂಡಳಿ ಅಧ್ಯಕ್ಷ ಡಾ. ಸಿದ್ದಣ್ಣಗೌಡ ಎ. ಪಾಟೀಲ್​ ಮಾತನಾಡಿ, 'ಕ್ಷಮತ್ವಂ'ನಲ್ಲಿ ಲಭಿಸಿದ ಜ್ಞಾನವು ಸಮ್ಮೇಳನದ ಸಭಾಂಗಣಕ್ಕೆ ಸೀಮಿತವಾಗದೆ ಸಮಾಜ ತಲುಪಬೇಕು. ಆ ನಿಟ್ಟಿನಲ್ಲಿ ಎಸ್​ಡಿಎಂ ಸಂಸ್ಥೆ ಹೊಸ ದಿಕ್ಕು ತೋರಿಸಿದೆ. ಕಲಿತ ಜ್ಞಾನವನ್ನು ಜೀವನದಲ್ಲಿ ಹಾಗೂ ವೃತ್ತಿಯಲ್ಲಿ ಅನುಷ್ಠಾನಗೊಳಿಸಿದಾಗ ಅದು ವಿವೇಕವಾಗಿ ಪರಿವರ್ತನೆ ಆಗುತ್ತದೆ ಎಂದರು.

ಎಸ್​ಡಿಎಂನ ಕ್ಲಿನಿಕಲ್​ ವಿಭಾಗದ ಉಪಪ್ರಾಂಶುಪಾಲ ಡಾ. ನಿರಂಜನ್​ ರಾವ್​, ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಪ್ರಸನ್ನ ಎನ್​. ಮೊಗಸಾಲೆ ಉಪಸ್ಥಿತರಿದ್ದರು.

'ಕ್ಷಮತ್ವಂ'ನ ಮುಖ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಎಸ್​ಡಿಎಂ ಕಾಲೇಜ್​ ಆಫ್​ ಆಯುರ್ವೇದ ಮೆಡಿಕಲ್​ ಸೈನ್ಸಸ್​ ಆ್ಯಂಡ್​ ರಿಸರ್ಚ್​ ಸೆಂಟರ್​ನ ಪ್ರಾಂಶುಪಾಲೆ ಡಾ. ಮಮತಾ ಕೆ.ವಿ. ಅಧ್ಯಕ್ಷತೆ ವಹಿಸಿದ್ದರು.

ಎಸ್​ಡಿಎಂನ ಶೈಕ್ಷಣಿಕ ವಿಭಾಗದ ಉಪಪ್ರಾಂಶುಪಾಲ ಡಾ. ನಾಗರಾಜ್​ ಎಸ್​. ಸ್ವಾಗತಿಸಿದರು. ಡಾ. ಪದ್ಮಕಿರಣ್​ ಸಿ. ಅವರು ಸಮ್ಮೇಳನದ ವೈಜ್ಞಾನಿಕ ವರದಿ ಮಂಡಿಸಿದರು. ಡಾ. ಅರುಣಕುಮಾರ್​ ಮತ್ತು ಡಾ. ಶುಭಾ ಪಿ.ಯು. ಕಾರ್ಯಕ್ರಮ ನಿರೂಪಿಸಿದರು. ಡಾ. ಅರ್ಹಂತ್​ ಕುಮಾರ್​ ಎ. ವಂದಿಸಿದರು.

ಒಟ್ಟು 522 ಸಂಶೋಧನಾ ಸಾರಾಂಶ ಮಂಡನೆ

ದೇಶ-ವಿದೇಶಗಳಿಂದ 1,400ಕ್ಕೂ ಅಧಿಕ ಮಂದಿ ನೋಂದಣಿ ಮಾಡಿದ್ದು, 25 ವಿವಿಧ ದೇಶಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಒಟ್ಟು 522 ಸಂಶೋಧನಾ ಸಾರಾಂಶ ಮಂಡನೆಯಾಗಿದ್ದು, 40 ಸಮಾನಾಂತರ ಅಧಿವೇಶನ ನಡೆದವು. ದೇಶದ ವಿವಿಧ ಭಾಗಗಳ 27 ಕಾಲೇಜ್​ಗಳ ಪ್ರತಿನಿಧಿಗಳು ಅತ್ಯುತ್ತಮ ಪ್ರಬಂಧಗಳ ಗೌರವಕ್ಕೆ ಪಾತ್ರರಾದರು. ಅತ್ಯುತ್ತಮ ಸಂಶೋಧನಾ ಪ್ರಬಂಧಗಳ ಪ್ರಶಸ್ತಿಗಳನ್ನು ಡಾ. ರಾಕೇಶ್​ ಘೋಷಿಸಿದರು. ಸಮ್ಮೇಳನಕ್ಕೂ ಮುನ್ನ ನಡೆದ ಪ್ರಾಯೋಗಿಕ ತರಬೇತಿ ಕಾರ್ಯಕ್ರಮವು ವಿವಿಧ ದೇಶಗಳ ಪ್ರತಿನಿಧಿಗಳಿಗೆ ವಿಶೇಷ ಅನುಭವ ಒದಗಿಸಿದವು.

ಎಸ್​ಡಿಎಂ ಈಗ ಕೇವಲ ಒಂದು ಸಂಸ್ಥೆಯಲ್ಲ. ಅದೀಗ ಬ್ರ್ಯಾಂಡ್​ ಆಗಿ ರೂಪುಗೊಂಡಿದೆ. ಒಂಬತ್ತು ತಿಂಗಳ ನಿರಂತರ ಯೋಜನೆ, ಪರಿಶ್ರಮ ಮತ್ತು ತಂಡದ ಬದ್ಧತೆಯ ಫಲವಾಗಿ 'ಕ್ಷಮತ್ವಂ' ನಮ್ಮ ಮುಂದೆ ಯಶಸ್ವಿಯಾಗಿ ನಿಂತಿದೆ. ಜಾಗತಿಕ ಮಟ್ಟದ ಅಂಕಿ-ಅಂಶ ಅವಲೋಕಿಸಿದಾಗ ಆಟೋಇಮ್ಯೂನ್​ ಕಾಯಿಲೆ ಪ್ರಮಾಣ ಗಮನಾರ್ಹವಾಗಿದ್ದು ಅದಕ್ಕೆ ಈ ಸಮ್ಮೇಳನವು ತಕ್ಕಮಟ್ಟಿಗೆ ಪರಿಹಾರವಾಗಿಯೂ ಕಂಡುಬಂತು.
> ಡಾ. ಮಮತಾ ಕೆ.ವಿ. ಎಸ್​ಡಿಎಂ ಕಾಲೇಜ್​ನ ಪ್ರಾಂಶುಪಾಲೆ.