ಉಡುಪಿಯಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರವನ್ನು ವಿನಯಕುಮಾರ ಸೊರಕ ಉದ್ಘಾಟಿಸಿದರು. ರಮೇಶ ಕಾಂಚನ್​, ಅಶೋಕ ಕೊಡವೂರು, ಕಿಶನ್​ ಹೆಗ್ಡೆ ಕೊಳ್ಕೆಬೈಲು, ಪ್ರಸಾದರಾಜ ಕಾಂಚನ್​, ದಿನೇಶ ಹೆಗ್ಡೆ ಮೊಳಹಳ್ಳಿ, ಮಂಜುನಾಥ ಸುಣಗಾರ ಇತರರಿದ್ದರು. 
ಉಡುಪಿ

ಅಂಗವಿಕಲರ ಸೇವೆ, ರಕ್ತದಾನ ಅತ್ಯಮೂಲ್ಯ ಕಾರ್ಯ

* ಮಾಜಿ ಸಚಿವ ವಿನಯಕುಮಾರ ಸೊರಕೆ ಅನಿಸಿಕೆ

* ರಮೇಶ ಕಾಂಚನ್​ ಜನ್ಮದಿನದ ಕಾರ್ಯಕ್ರಮ ಉದ್ಘಾಟನೆ

ಉಡುಪಿ: ರಕ್ತದಾನವು ಅತ್ಯಮೂಲ್ಯವಾದ ಸೇವಾ ಕಾರ್ಯವಾಗಿದೆ. ಇದರಿಂದ ಇನ್ನೊಬ್ಬರ ಜೀವ ಉಳಿಸಿದ ಮಹತ್ಕಾರ್ಯ ಮಾಡಿದಂತಾಗುತ್ತದೆ. ಅಂಗವಿಕಲರಿಗೆ ಪೌಷ್ಟಿಕ ಆಹಾರ ವಿತರಿಸುವ ಮೂಲಕ ಅವರಲ್ಲಿ ಆತ್ಮಸ್ಥೈರ್ಯ ತುಂಬುವುದೂ ಸಹ ಸಮಾಜಮುಖಿ ಕಾರ್ಯವೇ ಆಗಿದೆ. ತನ್ನ ಜನ್ಮದಿನದ ನಿಮಿತ್ತ ಇಂತಹ ಮಾದರಿ ಕಾರ್ಯಕ್ರಮ ಆಯೋಜಿಸಿರುವ ರಮೇಶ ಕಾಂಚನ್​ ಮಾದರಿಯಾಗಿದ್ದಾರೆ ಎಂದು ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷ ವಿನಯಕುಮಾರ ಶ್ಲಾಘಿಸಿದರು.

ಉಡುಪಿ ಅಜ್ಜರಕಾಡು ಪುರಭವನದಲ್ಲಿ ಉಡುಪಿ ಬ್ಲಾಕ್​ ಕಾಂಗ್ರೆಸ್​ ಸಮಿತಿ ಹಾಗೂ ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಜಂಟಿ ಆಶ್ರಯದಲ್ಲಿ ರಮೇಶ ಕಾಂಚನ್​ ಅವರ ಜನ್ಮದಿನದ ನಿಮಿತ್ತ ಗುರುವಾರ (ಆ.29) ಆಯೋಜಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಹಾಗೂ ಅಂಗವಿಕಲರಿಗೆ ಪೌಷ್ಟಿಕ ಆಹಾರ ವಿತರಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಾಂಗ್ರೆಸ್​ ಮುಖಂಡ ಮುನಿಯಾಲು ಉದಯಕುಮಾರ ಶೆಟ್ಟಿ ಮಾತನಾಡಿ, ಪಕ್ಷ ಸಂಘಟನೆ ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸುವುದನ್ನು ರಮೇಶ ಕಾಂಚನ್​ ಅವರಿಂದ ಕಲಿಯಬೇಕು ಎಂದರು.

ಜನ್ಮದಿನದನಿಮಿತ್ತ ರಮೇಶ ಕಾಂಚನ್​ ಅವರನ್ನು ಸನ್ಮಾನಿಸಲಾಯಿತು.

ಸನ್ಮಾನ

ರಮೇಶ ಕಾಂಚನ್​ ಅವರು ಪ್ರಸ್ತುತ ಉಡುಪಿ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷರಾಗಿ ಹಾಗೂ ಗ್ಯಾರಂಟಿ ಯೋಜನೆಗಳ ಉಡುಪಿ ತಾಲೂಕು ಅನುಷ್ಠಾನ ಸಮಿತಿಯ ಅಧ್ಯಕ್ಷರಾಗಿದ್ದಾರೆ. ತಾಪಂ ಸದಸ್ಯರಾಗಿ, ಎರಡು ಬಾರಿ ನಗರಸಭಾ ಸದಸ್ಯರಾಗಿ ಹಾಗೂ ವಿರೋಧ ಪಕ್ಷದ ನಾಯಕರಾಗಿದ್ದ ಅವರ ರಾಜಕೀಯ ಹಾಗೂ ಸಾಮಾಜಿಕ ಸೇವೆ ಗುರುತಿಸಿ ಶಾಲು ಹೊದಿಸಿ, ಪೇಟ ತೊಡಿಸಿ ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ನಿರ್ಗಮಿತ ಕಾಂಗ್ರೆಸ್​ ಜಿಲ್ಲಾಧ್ಯಕ್ಷ ಅಶೋಕ ಕೊಡವೂರು ಹಾಗೂ ನೂತನ ಜಿಲ್ಲಾಧ್ಯಕ್ಷ ಕಿಶನ್​ ಹೆಗ್ಡೆ ಕೊಳ್ಕೆಬೈಲು ಅವರನ್ನು ಗೌರವಿಸಲಾಯಿತು.

ರಕ್ತದಾನಿಗಳಿಗೆ ವಿನಯಕುಮಾರ ಸೊರಕೆ ಹಾಗೂ ರಮೇಶ ಕಾಂಚನ್​ ಅಭಿನಂದನೆ ಸಲ್ಲಿಸಿದರು.

ಕಾಂಗ್ರೆಸ್​ ಮುಖಂಡರಾದ ದಿನೇಶ ಹೆಗ್ಡೆ ಮೊಳಹಳ್ಳಿ, ಪ್ರಸಾದರಾಜ ಕಾಂಚನ್​, ಕೆಪಿಸಿಸಿ ಮೀನುಗಾರರ ವಿಭಾಗದ ರಾಜ್ಯಾಧ್ಯಕ್ಷ ಮಂಜುನಾಥ ಸುಣಗಾರ, ಕುಶಲಕರ್ಮಿ ವಿಭಾಗದ ರಾಜ್ಯಾಧ್ಯಕ್ಷ ಆರ್​. ಪ್ರಸನ್ನ ಕುಮಾರ, ಭುಜಂಗ ಶೆಟ್ಟಿ, ಪ್ರಶಾಂತ ಜತ್ತನ್ನ, ರಾಜು ಪೂಜಾರಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಕೆಪಿಸಿಸಿ ಸದಸ್ಯ ದಿನೇಶ ಪುತ್ರನ್​, ಉಡುಪಿ ಜಿಲ್ಲಾಸ್ಪತ್ರೆಯ ಜಿಲ್ಲಾ ಸರ್ಜನ್​ ಡಾ. ಅಶೋಕ ಎಚ್​., ದಿವಾಕರ ಕುಂದರ್​, ಮಹಿಳಾ ಕಾಂಗ್ರೆಸ್​ ಜಿಲ್ಲಾಧ್ಯಕ್ಷೆ ಜ್ಯೋತಿ ಹೆಬ್ಬಾರ, ಮಮತಾ ಶೆಟ್ಟಿ, ಪ್ರಚಾರ ಸಮಿತಿ ಅಧ್ಯಕ್ಷ ಅಲೆವೂರು ಹರೀಶ ಕಿಣಿ, ಅನಿತಾ ಬಾಬು ಪೂಜಾರಿ ಇನ್ನಿತರರು ಉಪಸ್ಥಿತರಿದ್ದರು.

ಅಂಗವಿಕಲರಿಗೆ ಪೌಷ್ಟಿಕ ಆಹಾರದ ಕಿಟ್​ ವಿತರಿಸಲಾಯಿತು.

ನೂರಾರು ಯುವಕರು ಹಾಗೂ ಕಾಂಗ್ರೆಸ್​ ಕಾರ್ಯಕರ್ತರು ರಕ್ತದಾನ ಮಾಡಿದರು. 200 ಮಂದಿ ಅಂಗವಿಕಲರಿಗೆ ಪೌಷ್ಟಿಕ ಆಹಾರದ ಕಿಟ್​ ವಿತರಿಸಲಾಯಿತು.

ಉಡುಪಿ ಬ್ಲಾಕ್​ ಕಾಂಗ್ರೆಸ್​ ಸಮಿತಿ ಉಪಾಧ್ಯಕ್ಷ ಸತೀಶ ಕೊಡವೂರು ಸ್ವಾಗತಿಸಿದರು. ದಯಾನಂದ ಮಾಸ್ಟರ್​ ಕಾರ್ಯಕ್ರಮ ನಿರೂಪಿಸಿದರು.