ಉಡುಪಿ ಮಣಿಪುರದಲ್ಲಿ ಆಯೋಜಿಸಿದ್ದ ಪ್ರಜಾಸೇವಾ ಸಭೆಯಲ್ಲಿ ಗುರ್ಮೆ ಸುರೇಶ ಶೆಟ್ಟಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು. ಸ್ವರೂಪಾ ಟಿ.ಕೆ., ಅಬೀದ್​ ಗದ್ಯಾಳ, ಎಸ್​.ಎಸ್​. ಕಾದ್ರೊಳ್ಳಿ, ಸುಧಾಕರ ನಾಯಕ, ಗುರುರಾಜ, ವಿಜಯಾ, ಶಶಿಕಾಂತ ವಿಭುದೆ, ಮಹೇಶ ಪಿ.ಎಸ್​. ಇದ್ದರು. 
ಉಡುಪಿ

ಜನಸಾಮಾನ್ಯರ ಸೇವೆ ಭಗವಂತ ಕೊಟ್ಟ ಅವಕಾಶ

* ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ ಅನಿಸಿಕೆ

* ಪ್ರಜಾಸೇವಾ ಆಂದೋಲನ ಸಭೆ ಉದ್ಘಾಟನೆ

ಉಡುಪಿ: ಆಡಳಿತವನ್ನು ಜನರ ಮನೆಬಾಗಿಲಿಗೆ ಕರೆದೊಯ್ಯುವ ಉದ್ದೇಶದಿಂದಾಗಿ ರಾಜ್ಯ ಸರ್ಕಾರವು ಮಹತ್ವಾಕಾಂಕ್ಷಿಯ ಪ್ರಜಾಸೇವಾ ಆಂದೋಲನ ಸಭೆ ಪ್ರಾರಂಭಿಸಿದೆ. ಜನಸಾಮಾನ್ಯರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಆದ್ಯತೆಯ ಮೇಲೆ ಬಗೆಹರಿಸುವುದು ಅಧಿಕಾರಿಗಳ ಕೆಲಸ. ಇದು ಸಮಾಜದ ಋಣ ತೀರಿಸಲು ಇದು ಭಗವಂತ ಮಾಡಿಕೊಟ್ಟ ಅವಕಾಶವೆಂದು ಭಾವಿಸೋಣ ಎಂದು ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ ಹೇಳಿದರು.

ಉಡುಪಿ ಮಣಿಪುರ ಗ್ರಾಮದ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ಪ್ರಜಾಸೇವಾ ಇಲಾಖೆ ತಾಲೂಕು ಆಡಳಿತ ಉಡುಪಿ ವತಿಯಿಂದ ಶನಿವಾರ (ಅ.31) ಆಯೋಜಿಸಿದ್ದ ಉಡುಪಿ ತಾಲೂಕು ಪ್ರಜಾಸೇವಾ ಆಂದೋಲನ ಸಭೆ ಉದ್ಘಾಟಿಸಿ ಮಾತನಾಡಿದರು.

ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ ಉಡುಪಿ ತಾಲೂಕು ಪ್ರಜಾಸೇವಾ ಆಂದೋಲನ ಸಭೆ ಉದ್ಘಾಟಿಸಿದರು.

ಪಿಂಚಣಿ ಸೌಲಭ್ಯ

ಈವರೆಗೆ ನಡೆದ ಸಭೆಗಳಲ್ಲಿ ಸಾಮಾನ್ಯವಾಗಿ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆ ನಿಂತು ಹೋಗಿರುವುದು, ಸಂಧ್ಯಾ ಸುರಕ್ಷಾ, ವೃದ್ಧಾಪ್ಯ ಹಾಗೂ ವಿಧವಾ ವೇತನ ಬರುತ್ತಿಲ್ಲ ಎಂಬ ದೂರುಗಳು ನಾಗರಿಕರಿಂದ ಕೇಳಿ ಬರುತ್ತಿದೆ. ಅನರ್ಹರನ್ನು ಯೋಜನೆಗಳಿಂದ ಕೈಬಿಡುವ ನಿಟ್ಟಿನಲ್ಲಿ ಅರ್ಹ ಫಲಾನುಭವಿಗಳ ದಾಖಲೆಗಳ ಮರುಪರಿಶೀಲನೆಗೆ ಸರ್ವೇ ಕಾರ್ಯ ನಡೆಯುತ್ತಿದೆ. ಮುಂದಿನ 15 ದಿನದಲ್ಲಿ ಪಿಂಚಣಿ ಸೌಲಭ್ಯ ದೊರೆಯಲಿದೆ. ಆತಂಕ ಪಡಬೇಕಿಲ್ಲ ಎಂದರು.

ಸಭೆಗಳಲ್ಲಿ ಸಾರ್ವಜನಿಕರಿಂದ ಸ್ವೀಕೃತವಾಗುವ ಮೂಲ ಸೌಕರ್ಯಗಳಾದ ರಸ್ತೆ, ದಾರಿದೀಪ, ಕುಡಿಯುವ ನೀರು ಮತ್ತು ಮೆಸ್ಕಾಂ, ಕಂದಾಯ ಇಲಾಖೆಯಲ್ಲಿ ಅಕ್ರಮ ಸಕ್ರಮ, ನಿವೇಶನ, ಹಕ್ಕುಪತ್ರ ಸೇರಿದಂತೆ ಇನ್ನಿತರ ಅಹವಾಲುಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

2,400ಕ್ಕೂ ಹೆಚ್ಚು ಅರ್ಜಿ

ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಮಾತನಾಡಿ, ಜಿಲ್ಲೆಯಲ್ಲಿ ಸೆ.9ರಿಂದ ಪ್ರಜಾಸೇವಾ ಆಂದೋಲನ ಸಭೆ ನಡೆಯುತ್ತಿದ್ದು ಈವರೆಗೆ 2,400ಕ್ಕೂ ಹೆಚ್ಚು ಕುಂದು-ಕೊರತೆಗಳ ಅಹವಾಲು ಸ್ವೀಕಾರವಾಗಿದೆ. ಶೇ.80ರಷ್ಟು ಪರಿಹರಿಸಲಾಗಿದೆ. ಸಭೆಯಲ್ಲಿ ಸ್ವೀಕರಿಸುವ ಎಲ್ಲ ಅರ್ಜಿಗಳನ್ನು ಐಪಿಜಿಆರ್​ಎಸ್​ ಪೋರ್ಟಲ್​ನಲ್ಲಿ ಅಪ್​ಲೋಡ್​ ಮಾಡಲಾಗುವುದು. ಇದರಿಂದ ಅರ್ಜಿಗಳ ಸ್ಥಿತಿಗತಿಗಳ ಬಗ್ಗೆ ಸೂಕ್ತ ಮಾಹಿತಿ ದೊರೆಯಲಿದೆ ಎಂದರು.

ಇದೇ ಸಂದರ್ಭದಲ್ಲಿ ಅರ್ಹ ಫಲಾನುಭವಿಗಳಿಗೆ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ಮೇವಿನ ಬೀಜದ ಕಿಟ್​ ವಿತರಿಸಲಾಯಿತು. ಈ ಸಭೆಯಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ 47 ಅಹವಾಲು ಸ್ವೀಕೃತವಾಗಿದ್ದವು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್​ ಗದ್ಯಾಳ, ಎಎಸ್ಪಿ ಸುಧಾಕರ ನಾಯಕ, ಸಹಾಯಕ ಕಮಿಷನರ್​ ಮಹೇಶ ಪಿ.ಎಸ್​., ಜಿಪಂ ಉಪ ಕಾರ್ಯದರ್ಶಿ ಎಸ್​.ಎಸ್​. ಕಾದ್ರೊಳ್ಳಿ, ಸಹಾಯಕ ಆರಣ್ಯ ಸಂರಕ್ಷಣಾಧಿಕಾರಿ ಶಶಿಕಾಂತ ವಿಭುದೆ, ಉಡುಪಿ ತಹಸೀಲ್ದಾರ್​ ಗುರುರಾಜ, ತಾಪಂ ಇಒ ವಿಜಯಾ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.