ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದ ಸರ್ವೀಸ್ ರಸ್ತೆ ಹೊಂಡಗಳಿಂದ ಕೂಡಿರುವುದು. 
ಉಡುಪಿ

ಸರ್ವೀಸ್ ರಸ್ತೆ ಸಮಸ್ಯೆ

ರವೀಂದ್ರ ಕೋಟ
ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಸರ್ವೀಸ್ ರಸ್ತೆ ಹೊಂಡಗಳಿಂದ ಸವಾರರಿಗೆ ಕಂಟಕವಾಗಿ ಪರಿಣಮಿಸಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಒಳಪಟ್ಟ ಸಾಸ್ತಾನ ಕೆ.ಕೆ.ಆರ್.ಕಂಪನಿ ನಿರ್ವಹಣೆಯಲ್ಲಿರುವ ಕುಂದಾಪುರದಿಂದ ಹೆಜಮಾಡಿ ಟೋಲ್‌ನವರೆಗಿನ ರಸ್ತೆಯ ಹಲವು ಭಾಗಗಳಲ್ಲಿ ಬಾಕಿ ಉಳಿದ ಸರ್ವೀಸ್ ರಸ್ತೆ ಕಾಮಗಾರಿ ಪ್ರಾರಂಭಗೊಂಡು ವರುಷ ಕಳೆದರೂ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಪರಿಣಾಮ ಸರ್ವೀಸ್ ರಸ್ತೆ ಹೊಂಡಗಳಿಂದ ಕೂಡಿದ್ದು, ವಾಹನ ಸವಾರರ ಜೀವಕ್ಕೆ ಕಂಟಕವಾಗಿದೆ.
ಈ ಬಗ್ಗೆ ಸಾಮಾಜಿಕ ಕಾರ್ಯಕರ್ತರೊಬ್ಬರು ಪ್ರಶ್ನಿಸಿದ್ದು, ಟೋಲ್ ನಿರ್ವಹಣೆಯ ಕೆ.ಕೆ.ಆರ್. ಕಂಪನಿ ಹಾರಿಕೆಯ ಉತ್ತರ ನೀಡಿದೆ ಎನ್ನಲಾಗಿದೆ.
ಮಂದಗತಿಯಲ್ಲಿ ಕಾಮಗಾರಿ
ಸಾಸ್ತಾನ ಟೋಲ್ ವ್ಯಾಪ್ತಿಯ ಸರ್ವೀಸ್ ರಸ್ತೆ ನಿರ್ಮಾಣ ಕಾಮಗಾರಿ ತೆಕ್ಕಟ್ಟೆ, ಕುಂಭಾಶಿ, ಸಾಲಿಗ್ರಾಮ ವ್ಯಾಪ್ತಿಯಲ್ಲಿ ಅರೆಬರೆಯಾಗಿ ನಡೆದಿದ್ದು, ಪ್ರಸ್ತುತ ಕಾಮಗಾರಿ ಸ್ಥಗಿತಗೊಂಡಿದೆ. ಹೆಚ್ಚಿನ ಭಾಗದಲ್ಲಿ ಸಾರ್ವಜನಿಕರಿಗೆ ಸಂಚಾರಕ್ಕೆ ಪುಟ್‌ಪಾತ್ ಇಲ್ಲವಾಗಿದೆ. ಸರ್ವೀಸ್ ರಸ್ತೆ ಖಾಸಗಿ ಸ್ಥಳದಾರರ ಕಾಂಪೌಂಡ್‌ವರೆಗೆ ವಿಸ್ತರಣೆಗೊಂಡಿದ್ದು, ಪಾದಚಾರಿಗಳಿಗೆ ದಾರಿಯೇ ಇಲ್ಲದಂತಾಗಿದೆ ಎಂಬ ಆರೋಪವೂ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.

ಅಪಘಾತ ವಲಯ

ಸಾಸ್ತಾನ ಭಾಗದಲ್ಲಿ ಸರ್ವಿಸ್ ರಸ್ತೆ ಇಲ್ಲದೆ ಹೆದ್ದಾರಿಯ ವಿರುದ್ಧ ದಿಕ್ಕಿನಲ್ಲಿ ವಾಹನಗಳು ಸಂಚರಿಸುತ್ತಿದ್ದು, ಅಪಾಯಕಾರಿಯಾಗಿದೆ. ಪಾಂಡೇಶ್ವರ ಸಂಪರ್ಕಿಸುವ ಹೆದ್ದಾರಿ ಅಕ್ಕಪಕ್ಕದಲ್ಲಿ ಭಾರಿ ಗಾತ್ರದ ಹೊಂಡ-ಗುಂಡಿಗಳು ಈಗಾಗಲೇ ಮರಣ ಮೃದಂಗ ಬಾರಿಸುತ್ತಿದ್ದು, ಸಾಕಷ್ಟು ಅಪಘಾತಗಳಿಗೆ ಸಾಕ್ಷಿಯಾಗಿದೆ. ಈ ಬಗ್ಗೆ ಹೆದ್ದಾರಿ ಜಾಗೃತಿ ಸಮಿತಿ ಗಮನ ಸೆಳೆದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಥವಾ ಟೋಲ್ ನಿರ್ವಹಣಾ ಸಂಸ್ಥೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂಬುದು ಸ್ಥಳೀಯರು ಅಸಮಾಧಾನವಾಗಿದೆ.

ಹೊಂಡಕ್ಕೆ ಕಲ್ಲು

ಸಾಮಾಜಿಕ ಕಾರ್ಯಕರ್ತರೋರ್ವರು ಟೋಲ್ ಸಿಬ್ಬಂದಿಗೆ ಕರೆ ಮಾಡಿ ನವೀಕೃತ ರಸ್ತೆಯಲ್ಲಿ ಹೊಂಡ ಸೃಷ್ಟಿಯಾಗಿದೆ ಎಂದು ದೂರಿದ್ದು, ಕೂಡಲೇ ಆ ಹೊಂಡವನ್ನು ಕಲ್ಲಿನಿಂದ ಮುಚ್ಚಲಾಗಿದೆ. ಆದರೆ ರಾತ್ರಿ ಸಂಚರಿಸುವ ದ್ವಿಚಕ್ರ ವಾಹನ ಸವಾರರಿಗೆ ಈ ಕಲ್ಲುಗಳು ಮತ್ತಷ್ಟು ಅಪಾಯವನ್ನು ತಂದೊಡ್ಡಿದೆ.

ಸಾಸ್ತಾನದ ಭಾಗದಲ್ಲಿ ಸರ್ವೀಸ್ ರಸ್ತೆ ಇಲ್ಲದಿರುವುದರಿಂದ ಶಾಲಾ ಮಕ್ಕಳು ರಸ್ತೆಯಲ್ಲೇ ಸಂಚರಿಸುತ್ತಿರುವುದು ಅನಿವಾರ್ಯವಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರಂತರ ವಾಹನಗಳ ಓಡಾಟವಿದ್ದು, ಶಾಲಾ ಮಕ್ಕಳಿಗೆ ಅಪಾಯಕಾರಿಯಾಗಿದೆ. ಶ್ರೀವೇ ಸರ್ವೀಸ್ ರಸ್ತೆ ನಿರ್ಮಿಸಬೇಕು. ರಸ್ತೆ ಹೊಂಡಗಳಿಗೆ ತುರ್ತಾಗಿ ಮುಕ್ತಿ ನೀಡಬೇಕು.

— ಪ್ರತಾಪ್ ಶೆಟ್ಟಿ ಸಾಸ್ತಾನ ಹೆದ್ದಾರಿ ಜಾಗೃತಿ ಸಮಿತಿ ಮಾಜಿ ಅಧ್ಯಕ್ಷ

ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆ ಅಗತ್ಯವಾಗಿದ್ದು, ಆದರೆ ಕಾಮಗಾರಿ ಮಂದಗತಿಯಲ್ಲಿ ಸಾಗಿರುವುದು ಬೇಸರದ ಸಂಗತಿ. ನಡೆದ ಕಾಮಗಾರಿಯಲ್ಲಿ ಲೋಪವಾಗಿದ್ದು, ಸಾಲಿಗ್ರಾಮ ಸರ್ವೀಸ್ ರಸ್ತೆಯಲ್ಲಿ ಭಾರಿ ಗಾತ್ರದ ಹೊಂಡಗಳು ನಿರ್ಮಾಣಗೊಂಡು ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ಕಂಟಕವಾಗಿದೆ. ಈ ಬಗ್ಗೆ ಗಮನ ಸೆಳೆದರೂ ಪ್ರಯೋಜನವಾಗಿಲ್ಲ. ಶೀಘ್ರವೇ ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಅಥವಾ ರಸ್ತೆ ನಿರ್ವಹಣೆ ಹೊಣೆ ಹೊತ್ತಿರುವ ಟೋಲ್ ಕಂಪನಿ ಕ್ರಮಕೈಗೊಳ್ಳಬೇಕಾಗಿದೆ.

— ಶ್ರೀಕಾಂತ್ ಶೆಣೈ ಕೋಟ ಸಾಮಾಜಿಕ ಕಾರ್ಯಕರ್ತ

ಸಾಸ್ತಾನದಿಂದ ಪಾಂಡೇಶ್ವರ ಕಡೆಗೆ ಹೋಗುವ ಪಾದಚಾರಿ ರಸ್ತೆಯು ಹೊಂಡಗಳಿಂದ ಕೂಡಿದ್ದು, ಶಾಲಾ ಮಕ್ಕಳಿಗೆ ಹಾಗೂ ಸ್ಥಳೀಯರಿಗೆ ಬಹಳ ತೊಂದರೆಯಾಗಿದೆ. ಕೂಡಲೇ ಸಂಬಂಧಪಟ್ಟವರು ಮುಂದೆ ಎದುರಾಗುವ ಸಮಸ್ಯೆಯನ್ನು ಬಗೆಹರಿಸುವುದರ ಜತೆಗೆ ಬಹಳ ಅಗತ್ಯವಾಗಿರುವ ಸರ್ವೀಸ್ ರಸ್ತೆಯ ಕಾಮಗಾರಿಯನ್ನು ಆದಷ್ಟು ಬೇಗ ಪ್ರಾರಂಭಿಸಲು ಆಗ್ರಹಿಸುತ್ತೇನೆ.

— ಮಡಿ ವಿಶ್ವನಾಥ ಖಾರ್ವಿ ಕೋಡಿತಲೆ