ಕುಂದಾಪುರ ತಾಪಂ ಸಭಾಂಗಣದಲ್ಲಿ ಪಶುಪಾಲನಾ ಇಲಾಖೆ, ಆರೋಗ್ಯ ಇಲಾಖೆ, ಅರಣ್ಯ ಇಲಾಖೆ ಹಾಗೂ ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳ ಸಮನ್ವಯ ಸಭೆ ನಡೆಯಿತು. ಪ್ರಮುಖರಾದ ಡಾ.ರೆಡ್ಡಪ್ಪ, ಡಾ.ವಸಂತ ಕುಮಾರ್ ಶೆಟ್ಟಿ ಮತ್ತಿತರರಿದ್ದರು. 
ಉಡುಪಿ

ಕಾಡಂಚಿನ ಗ್ರಾಮಗಳಲ್ಲಿ ಹಂದಿಗಳ ಸರಣಿ ಸಾವು

ವಿಜಯವಾಣಿ ಸುದ್ದಿಜಾಲ ಕುಂದಾಪುರ

ಕುಂದಾಪುರ ಹಾಗೂ ಬೈಂದೂರು ಭಾಗದ ಕಾಡಂಚಿನ ಗ್ರಾಮಗಳಲ್ಲಿನ ಕಾಡು ಹಂದಿಗಳು, ಸೇನಾಪುರದಲ್ಲಿ ಸಾಕು ಹಂದಿಗಳು ಸರಣಿಯಾಗಿ ಮೃತಪಟ್ಟಿದ್ದು, ಹಂದಿ ಸ್ಯಾಂಪಲ್‌ಗಳನ್ನು ಮಂಗಳೂರು ಹಾಗೂ ಬೆಂಗಳೂರಿನ ಭಾರತೀಯ ಪ್ರಾಣಿ ಆರೋಗ್ಯ ಮತ್ತು ಜೈವಿಕ ಸಂಸ್ಥೆಗೆ ಕಳುಹಿಸಿಕೊಡಲಾಗಿತ್ತು. ಪರೀಕ್ಷೆಯಲ್ಲಿ ಹಂದಿಗಳ ಸಾವಿಗೆ ಆಫ್ರಿಕನ್ ಸ್ಟೈನ್ ಫೀವರ್ ಕಾರಣ ಎಂದು ದೃಢಪಟ್ಟಿದೆ ಎಂದು ಉಡುಪಿ ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ರೆಡ್ಡಪ್ಪ ತಿಳಿಸಿದ್ದಾರೆ.
ಕುಂದಾಪುರ ತಾಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಪಶುಪಾಲನಾ ಇಲಾಖೆ, ಆರೋಗ್ಯ ಇಲಾಖೆ, ಅರಣ್ಯ ಇಲಾಖೆ ಹಾಗೂ ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳ ಸಮನ್ವಯ ಸಭೆಯಲ್ಲಿ ಮಾಹಿತಿ ನೀಡಿದರು.
ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆ ಪ್ರಾದೇಶಿಕ ಸಂಶೋಧನಾ ಅಧಿಕಾರಿ ಡಾ.ವಸಂತ ಕುಮಾರ್ ಶೆಟ್ಟಿ ಮಾತನಾಡಿ, ಆಫ್ರಿಕನ್ ಸ್ಟೈನ್ ಫೀವರ್ ವೈರಸ್‌ನಿಂದ ಬರುವ ರೋಗವಾಗಿದ್ದು, ಇದು ಹಂದಿಗಳಿಗೆ ಮಾತ್ರ ಬರುವ ರೋಗ. ಮನುಷ್ಯರಿಗೆ ಬರುವುದಿಲ್ಲ. ಮಾರ್ಗಸೂಚಿ ಪ್ರಕಾರ ಜಿಲ್ಲಾಡಳಿತ ಹಾಗೂ ಇನ್ನಿತರ ಇಲಾಖೆಗಳು ಸಮನ್ವಯ ಸಾಧಿಸಿ ಮುಂದಿನ ಮೂರು ತಿಂಗಳಲ್ಲಿ ರೋಗವನ್ನು ನಿಯಂತ್ರಣಕ್ಕೆ ತರಲು ಮತ್ತು ರೋಗ ರಹಿತ ವಲಯವನ್ನಾಗಿ ಮಾಡಲು ಕ್ರಮಕೈಗೊಳ್ಳಲಾಗಿದೆ. ರೋಗ ಉಲ್ಭಣವಾಗದಂತೆ ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದರು.
ಕುಂದಾಪುರ ತಾಪಂ ಕಾರ್ಯನಿರ್ವಹಣಾಧಿಕಾರಿ ಮಹೇಶ ಕೆ.ಜಿ. ಅಧ್ಯಕ್ಷತೆ ವಹಿಸಿದ್ದರು. ಹೊಸಾಡು ಪಿಡಿಒ ಶೋಭಾ, ಕುಂದಾಪುರ ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಅರುಣ್ ಹೆಗ್ಡೆ, ಕುಂದಾಪುರ ತಾಲೂಕು ಆರೋಗ್ಯ ಅಧಿಕಾರಿ ಡಾ.ಪ್ರೇಮಾನಂದ ಮಾತನಾಡಿದರು. ಕುಂದಾಪುರ ವಲಯ ಅರಣ್ಯ ಉಪಸಂರಕ್ಷಣಾಧಿಕಾರಿ ಸಂದೇಶ, ಆರೋಗ್ಯ, ಪಂಚಾಯತ್‌ರಾಜ್, ಅರಣ್ಯ ಇಲಾಖೆ ಮತ್ತು ಪಶುಪಾಲನಾ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಸರ್ಕಾರದಿಂದ ಪರಿಹಾರ

ಹಂದಿಗಳ ಸಾವಿಗೆ ಕಾರಣವಾದ ಆಫ್ರಿಕನ್ ಸ್ಟೈನ್ ಫೀವರ್‌ಗೆ ಯಾವುದೇ ರೀತಿಯ ಚಿಕಿತ್ಸೆ ಅಥವಾ ಲಸಿಕೆ ಇಲ್ಲ. ಮುಂಜಾಗ್ರತಾ ಕ್ರಮವಾಗಿ ರೋಗ ಕಂಡು ಬಂದ ಪ್ರದೇಶದ ಸುತ್ತಮುತ್ತಲಿನ ಒಂದು ಕಿ.ಮೀ. ವ್ಯಾಪ್ತಿಯನ್ನು ರೋಗಪೀಡಿತ ವಲಯ ಮತ್ತು 10 ಕಿ.ಮೀ. ವ್ಯಾಪ್ತಿಯನ್ನು ಸರ್ವೇಕ್ಷಣಾ ವಲಯ ಎಂದು ಘೋಷಿಸಲಾಗಿದೆ. ಕಾಯಿಲೆ ಇಲ್ಲದಿದ್ದರೆ ರೋಗರಹಿತ ವಲಯ ಎಂದು ಘೋಷಣೆ ಮಾಡಲಾಗುವುದು. ರೋಗಪೀಡಿತ ಪ್ರದೇಶದಲ್ಲಿರುವ ಹಂದಿಗಳನ್ನು ಮಾನವೀಯವಾಗಿ ಕೊಲ್ಲಲಾಗುವುದು ಮತ್ತು ಅನುಮೋದಿತ ವಿಧಾನದಲ್ಲಿ ಸುರಕ್ಷಿತ ವಿಲೇವಾರಿ ಮಾಡಲಾಗುವುದು. ಸ್ಟಾೃಂಪ್ ಮಾಡುವ ಹಂದಿಗಳಿಗೆ ಸರ್ಕಾರದಿಂದ ಪರಿಹಾರ ನೀಡಲಾಗುವುದು. ಸಹಾಯಕ ನಿರ್ದೇಶಕರ ನೇತೃತ್ವದಲ್ಲಿ ತಂಡ ರಚಿಸಲಾಗಿದ್ದು, ಈ ಬಗ್ಗೆ ನಿಗಾ ವಹಿಸಲಿದೆ ಎಂದು ಡಾ.ರೆಡ್ಡಪ್ಪ ತಿಳಿಸಿದ್ದಾರೆ.

ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಬೆಳ್ಳೆಯಲ್ಲಿ 4 ವರ್ಷಗಳ ಹಿಂದೆ ಹಂದಿ ಫಾರ್ಮ್ ಒಂದರಲ್ಲಿ ಈ ರೋಗ ಕಂಡುಬಂದಿತ್ತು. ದ.ಕ. ಜಿಲ್ಲೆಯ ಕಿನ್ನಿಗೋಳಿ, ಮೂಡುಬಿದಿರೆ ಮತ್ತು ನೀರುಮಾರ್ಗದಲ್ಲಿ ಇಂತಹ ಪ್ರಕರಣ ವರದಿಯಾಗಿದ್ದು, ಆ ಬಳಿಕ ಅಲ್ಲಿ ಕೆಲವೊಂದು ಮುನ್ನೆಚ್ಚರಿಕೆ ಕ್ರಮಕೈಗೊಂಡು, ನಿಯಂತ್ರಣಕ್ಕೆ ತರಲಾಗಿತ್ತು. ಆ ಬಳಿಕ ಯಾವುದೇ ಹೊಸ ಪ್ರಕರಣಗಳು ಕಂಡು ಬಂದಿರಲಿಲ್ಲ. ಕಾಡಿನಲ್ಲಿ ಬೆಳಕಿಗೆ ಬಂದ ಪ್ರಥಮ ಪ್ರಕರಣ ಇದಾಗಿದೆ.

— ಡಾ.ವಸಂತ ಕುಮಾರ್ ಶೆಟ್ಟಿ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆ ಪ್ರಾದೇಶಿಕ ಸಂಶೋಧನಾ ಅಧಿಕಾರಿ