ಮಾಳ ಘಾಟ್‌ನಲ್ಲಿ ನಡೆದ ಸರಣಿ ಅಪಘಾತದಲ್ಲಿ ವಾಹನಗಳು ಜಖಂಗೊಂಡಿರುವುದು.
ಕಾರ್ಕಳ: ರಾಷ್ಟ್ರೀಯ ಹೆದ್ದಾರಿ169ರ ಕಾರ್ಕಳ- ಮಾಳ ಘಾಟಿಯಲ್ಲಿ ಸೋಮವಾರ ಸಂಭವಿಸಿದ ಸರಣಿ ಅಪಘಾತದಲ್ಲಿ ಹಲವರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸೋಮವಾರ ಮಧ್ಯಾಹ್ನ ಟಿಪ್ಪರ್ ಮತ್ತು ಕಾರಿನ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ, ರಸ್ತೆಯ ಮೇಲೆ ಡೀಸೆಲ್ ಹಾಗೂ ಆಯಿಲ್ ಸೋರಿಕೆಯಾಗಿತ್ತು. ರಸ್ತೆ ಜಾರುವಂತಾಗಿದ್ದರಿಂದ, ಹಿಂದಿನಿಂದ ಬಂದ ಎರಡು ಕಾರುಗಳು ಚಾಲಕರ ನಿಯಂತ್ರಣ ತಪ್ಪಿ ಪರಸ್ಪರ ಡಿಕ್ಕಿ ಹೊಡೆದವು. ಈ ಪೈಕಿ ಒಂದು ಕಾರು ರಸ್ತೆಯಲ್ಲೇ ಪಲ್ಟಿಯಾಗಿದ್ದು, ವಾಹನದಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಪಘಾತದಿಂದಾಗಿ ಘಾಟ್ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಕೆಲಕಾಲ ಅಡಚಣೆ ಉಂಟಾಗಿತ್ತು.
ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಕಾರ್ಕಳ ಗ್ರಾವಾಂತರ ಠಾಣಾ ಪೊಲೀಸರು, ರಸ್ತೆ ಮೇಲೆ ಸುರಿದಿದ್ದ ಡೀಸೆಲ್ ಮತ್ತು ಆಯಿಲ್‌ನಿಂದ ಉಂಟಾಗಿದ್ದ ಜಾರುವಿಕೆಯನ್ನು ತಡೆಯಲು ಮರಳನ್ನು ಹಾಕಿಸಿ, ರಸ್ತೆಯನ್ನು ಸ್ವಚ್ಛಗೊಳಿಸಿದರು. ನಂತರ ಸಂಚಾರ ಸುಗಮಗೊಳಿಸಲಾಯಿತು.