ಉಡುಪಿಯಲ್ಲಿ ಹಿರಿಯ ಕ್ರೀಡಾಪಟು, ವಾಲಿಬಾಲ್ ತರಬೇತುದಾರ ಪಾಂಗಾಳ ವಾಸುದೇವ ನಾಯಕ್ ಹಾಗೂ ನಂದಿನಿ ದಂಪತಿಯನ್ನು ಸನ್ಮಾನಿಸಲಾಯಿತು. ಸಂತೋಷ್ ಶೆಟ್ಟಿ, ವಿಜಯ್ ಹೆಗ್ಡೆ, ಸತ್ಯಜಿತ್ ಶೆಟ್ಟಿ, ಜಿನರಾಜ್ ಎಮಾರ್ಳ್, ಶರತ್ ಕುಮಾರ್, ನಯನಾ ಗಣೇಶ್, ಸ್ಪೈಕರ್ಸ್ ತಂಡದ ಸದಸ್ಯರು, ಹಳೆಯ ವಿದ್ಯಾರ್ಥಿಗಳು ಇದ್ದರು.
* ಉದ್ಯಮಿ ಸಂತೋಷ್ ಶೆಟ್ಟಿ ಶ್ಲಾಘನೆ
* ವಾಲಿಬಾಲ್ ತರಬೇತುದಾರ ವಾಸುದೇವ್ಗೆ ಸನ್ಮಾನ
ಉಡುಪಿ: ವಾಲಿಬಾಲ್ ಕ್ರೀಡೆಗೆ ಭದ್ರ ಅಡಿಪಾಯ ಹಾಕಿದ ಹಿರಿಯ ಕ್ರೀಡಾಪಟು ಹಾಗೂ ತರಬೇತುದಾರ ಬಬ್ಬಣ್ಣ ಅವರು ಸ್ಥಾಪಿಸಿದ ಸ್ಪೈಕರ್ಸ್ ತಂಡವು ಉಡುಪಿ ಜಿಲ್ಲೆಯ ಕ್ರೀಡಾ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದೆ. ಯುವಜನರಲ್ಲಿ ಕ್ರೀಡಾಸಕ್ತಿ ಬೆಳೆಸುವಲ್ಲಿ ಅವರ ಪಾತ್ರ ಸದಾ ಸ್ಮರಣೀಯ ಎಂದು ಉದ್ಯಮಿ ಸಂತೋಷ್ ಶೆಟ್ಟಿ ಶ್ಲಾಘಿಸಿದರು.
ಉಡುಪಿ ರೆಸಿಡೆನ್ಸಿ ಸಭಾಂಗಣದಲ್ಲಿ ಸ್ಪೈಕರ್ಸ್ ತಂಡದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಕ್ರೀಡಾಪಟು, ವಾಲಿಬಾಲ್ ತರಬೇತುದಾರ ಪಾಂಗಾಳ ವಾಸುದೇವ ನಾಯಕ್ (ಬಬ್ಬಣ್ಣ) ಅವರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅನನ್ಯ ಸಾಧನೆ
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ವಿಜಯ್ ಹೆಗ್ಡೆ, ಸತ್ಯಜಿತ್ ಶೆಟ್ಟಿ, ಜಿನರಾಜ್ ಎಮಾರ್ಳ್, ಶರತ್ ಕುಮಾರ್ ಇತರರು ಮಾತನಾಡಿ, ಬಬ್ಬಣ್ಣ ಅವರ ಕ್ರೀಡಾ ಸಾಧನೆ ಹಾಗೂ ವ್ಯಕ್ತಿತ್ವ ಶ್ರೇಷ್ಠವಾಗಿದೆ. ನೂರಾರು ಕ್ರೀಡಾಪಟುಗಳ ಬದುಕಿಗೆ ದಿಕ್ಕು ತೋರಿದ ಮಾರ್ಗದರ್ಶಕರಾಗಿದ್ದಾರೆ. ಜಿಲ್ಲೆಯಲ್ಲಿ ವಾಲಿಬಾಲ್ ಕ್ರೀಡೆಯ ಬೆಳವಣಿಗೆಯಲ್ಲಿ ಅವರ ಕೊಡುಗೆ ಅನನ್ಯ. ಅನೇಕ ಪ್ರತಿಭಾವಂತ ಆಟಗಾರರು ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಅವರ ಮಾರ್ಗದರ್ಶನವೇ ಕಾರಣವಾಗಿದೆ ಎಂದರು.
ಕುರ್ಕಾಲು ವಾಲಿಬಾಲ್ ತಂಡ, ಬೈಲೂರು ಮಿತ್ರ ಮಂಡಳಿ, ಕುಂದಾಪುರ ವಾಲಿಬಾಲ್ ತಂಡ, ಸ್ಪೈಕರ್ಸ್ ತಂಡದ ಸದಸ್ಯರು, ಹಳೆಯ ವಿದ್ಯಾರ್ಥಿಗಳು, ಕ್ರೀಡಾಪಟುಗಳು ಮತ್ತು ಅಭಿಮಾನಿಗಳು ಉಪಸ್ಥಿತರಿದ್ದರು.
ನಯನಾ ಗಣೇಶ್ ಅಭಿನಂದನಾ ಪತ್ರ ವಾಚಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಅರುಣ್ ಶೆಟ್ಟಿ ವಂದಿಸಿದರು. ವಿನೋದ್ ಗುರುಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.
"
ಕ್ರೀಡೆಯು ವ್ಯಕ್ತಿತ್ವ ವಿಕಸನಕ್ಕೆ ಅತ್ಯುತ್ತಮ ಮಾಧ್ಯಮವಾಗಿದೆ. ನನಗೆ ದೊರೆತಿರುವ ಈ ಸನ್ಮಾನವು ಇನ್ನಷ್ಟು ಯುವ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡಲು ಪ್ರೇರಣೆ ನೀಡಿದೆ. ಕ್ರೀಡಾ ಕ್ಷೇತ್ರದಲ್ಲಿ ನನಗೆ ಬೆಂಬಲ ನೀಡಿದ ಸಹ ಆಟಗಾರರು, ವಿದ್ಯಾರ್ಥಿಗಳು ಹಾಗೂ ಸ್ನೇಹಿತರನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳುತ್ತೇನೆ.
— ಪಾಂಗಾಳ ವಾಸುದೇವ ನಾಯಕ್ (ಬಬ್ಬಣ್ಣ). ಹಿರಿಯ ಕ್ರೀಡಾಪಟು.