ಖ್ಯಾತ ಕವಿ, ವಿಮರ್ಶಕ ಸುಬ್ರಾಯ ಚೊಕ್ಕಾಡಿ. 
ಉಡುಪಿ

ಎಸ್​ವಿಪಿ ಪ್ರಶಸ್ತಿಗೆ ಕವಿ, ವಿಮರ್ಶಕ ಸುಬ್ರಾಯ ಚೊಕ್ಕಾಡಿ ಆಯ್ಕೆ

* ಸಾಹಿತ್ಯ, ಸಂಶೋಧನಾ ಕ್ಷೇತ್ರದಲ್ಲಿ ಗಣನೀಯ ಸಾಧನೆ

ಉಡುಪಿ: ಸುಳ್ಯ ತಾಲೂಕಿನ ಖ್ಯಾತ ಕವಿ ಹಾಗೂ ವಿಮರ್ಶಕ ಸುಬ್ರಾಯ ಚೊಕ್ಕಾಡಿ ಅವರು ಕನ್ನಡದ ಖ್ಯಾತ ಕವಿ ಎಸ್​.ವಿ. ಪರಮೇಶ್ವರ ಭಟ್ಟ (ಎಸ್​ವಿಪಿ) ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 
ಕನ್ನಡ ಸಾಹಿತ್ಯ, ಅನುವಾದ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಹಿತಿಗಳಿಗೆ ಎಸ್​ವಿಪಿ ಪ್ರತಿಷ್ಠಾನದಿಂದ ಈ ಪ್ರಶಸ್ತಿ ನೀಡಲಾಗುತ್ತಿದೆ. 2026ನೇ ಸಾಲಿನಿಂದ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಉಡುಪಿ ಮೂಲಕ ನೀಡಲಾಗುತ್ತಿದೆ ಎಂದು ಕೇಂದ್ರದ ಆಡಳಿತಾಧಿಕಾರಿ ಡಾ. ಬಿ.ಜಗದೀಶ್​ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಿಕ್ಷಕರಾಗಿ ಸುದೀರ್ಘ ಸೇವೆ

ಸುಬ್ರಾಯ ಚೊಕ್ಕಾಡಿ 1940ರ ಜೂನ್​ 29ರಂದು ಸುಳ್ಯ ತಾಲೂಕಿನ ಚೊಕ್ಕಾಡಿ ಎಂಬ ಗ್ರಾಮದಲ್ಲಿ ಜನಿಸಿದರು. ತಂದೆ ಯಕ್ಷಗಾನ ಭಾಗವತರಾದ ಗಣಪಯ್ಯ ಮತ್ತು ತಾಯಿ ಸುಬ್ಬಮ್ಮ. ಸುಬ್ರಾಯ ಚೊಕ್ಕಾಡಿ ಕನ್ನಡದಲ್ಲಿ ಎಂಎ ಪದವಿ ಗಳಿಸಿದ್ದು ಸುಳ್ಯ, ಪೈಲೂರು, ಕುಕ್ಕುಜಡ್ಕ ಶಾಲೆಗಳಲ್ಲಿ ಒಟ್ಟು 39 ವರ್ಷ ಸಹಾಯಕ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದಾರೆ.

'ಸುಮನಸಾ' ವಿಚಾರ ವೇದಿಕೆ

ಕವಿಗಳಾದ ಗೋಪಾಲಕೃಷ್ಣ ಅಡಿಗ, ಅನಂತಮೂರ್ತಿ, ಲಂಕೇಶ ಮುಂತಾದವರ ಸಂಪರ್ಕದಲ್ಲಿದ್ದರು. ಲಂಕೇಶ ಅವರ ಮೊದಲ ನಾಟಕ ಪ್ರಕಟಿಸಿದ ಹೆಗ್ಗಳಿಕೆಯೂ ಚೊಕ್ಕಾಡಿಯವರದ್ದು. ಸಾಹಿತ್ಯದ ಹೊಸ ವಿಚಾರಗಳನ್ನು ಚರ್ಚಿಸುವುದಕ್ಕೆ ಹಳ್ಳಿಯಲ್ಲಿ 'ಸುಮನಸಾ' ವಿಚಾರ ವೇದಿಕೆ ಕಟ್ಟಿ ಬೆಳೆಸಿ ಹತ್ತಾರು ಉತ್ತಮ ಕೃತಿಗಳ ಪ್ರಕಟಣೆಗೆ ಕಾರಣರಾದರು.

ಸಾಹಿತ್ಯ ಕೃಷಿ

ಕಾವ್ಯ, ನಾಟಕ, ಯಕ್ಷಗಾನ, ಹರಿಕಥೆ, ಸಂಘಟನೆ, ಶಿಕ್ಷಣ, ಸಾಮಾಜಿಕ ಹೋರಾಟ, ಪ್ರಕಾಶನ, ಕೃಷಿ ಇತ್ಯಾದಿಯಾಗಿ ಅವರೊಬ್ಬ ಸಕ್ರಿಯ ಸರ್ವಾಂತರ್ಯಾಮಿ. ಅವರು ರಚಿಸಿದ ಕವನ ಸಂಕಲನಗಳಲ್ಲಿ ತೆರೆ, ಬೆಟ್ಟವೇರಿದ ಮೇಲೆ, ನಿಮ್ಮವೂ ಇರಬಹುದು, ಮೊನ್ನೆ ಸಿಕ್ಕವರು, ಇದರಲ್ಲಿ ಅದು, ಇತ್ಯಾದಿ. ಮೊದಲ ಕವನ ಸಂಕಲನ ತೆರೆ. ಸಂತೆಮನೆ (ಕಾದಂಬರಿ), ಬೇರುಗಳು (ಕಥಾ ಸಂಕಲನ), ಕಾವ್ಯ ಸಮೀಕ್ಷೆ, ಕೃತಿ ಶೋಧ, ಒಳ ಹೊರಗು, ಸಮಾಲೋಕ, ಅವಲೋಕನ ವಿಮರ್ಶಾ ಕೃತಿಗಳು. ಒಂದು ಸಂಪಾದಿತ ಕೃತಿ (ದ.ಕ. ಕಾವ್ಯ) ಪ್ರಕಟಿಸಿದ್ದಾರೆ.

ಸಿನಿಮಾಗಳಿಗೆ ಗೀತೆ ರಚನೆ

ಸುಬ್ರಾಯ ಚೊಕ್ಕಾಡಿ ಅವರ ಬರಹಗಳ ಆಧಾರಿತ ಕ್ಯಾಸೆಟ್​ ಹಾಗೂ ಸಿಡಿಗಳಲ್ಲಿ ಮಿಲನ, ಮಾನಸ, ಬೆಣ್ಣೆ ಕದ್ದ ನಮ್ಮ ಕೃಷ್ಣ, ವನಸಿರಿ, ಅನುರಾಗ, ಸಲ್ಲಾಪ, ಹುಣ್ಣಿಮೆ, ನೂಪುರ, ಸಿರಿಗನ್ನಡ, ದೀಪ, ಭಾವ ಚಿತ್ತಾರ, ನಿನ್ನ ಬಾಂದಳದಂತೆ ಪ್ರಖ್ಯಾತಗೊಂಡಿವೆ. ಕೆಲವು ಚಲನಚಿತ್ರಗಳಿಗೂ ಗೀತೆ ಬರೆದಿದ್ದಾರೆ. 

ವಿವಿಧ ಸಮ್ಮೇಳನಗಳಲ್ಲಿ ಅಧ್ಯಕ್ಷತೆ

ಸುಬ್ರಾಯ ಚೊಕ್ಕಾಡಿ ಅವರು ಅಖಿಲ ಭಾರತ 69ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿಯ ಅಧ್ಯಕ್ಷತೆ, ದೆಹಲಿ ಆಕಾಶವಾಣಿ ಏರ್ಪಡಿಸಿದ್ದ ಸರ್ವಭಾಷಾ ಕವಿಸಮ್ಮೇಳನ ಅಧ್ಯಕ್ಷತೆ, ಸುಳ್ಯ ತಾಲೂಕು ಐದನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ದ.ಕ.ಜಿಲ್ಲಾ 15ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, 2ನೇ ವಿಶ್ವ ಕನ್ನಡ ಸಮ್ಮೇಳನ ಬೆಳಗಾವಿ ಕವಿಗೋಷ್ಠಿ ಹೀಗೆ ಹಲವಾರು ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ. ಚೊಕ್ಕಾಡಿ ಅವರಿಗೆ ಸಂದ ಗೌರವ, ಪ್ರಶಸ್ತಿಗಳಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಮೃತ್ಯುಂಜಯ ಸಾರಂಗಮಠ ಪ್ರಶಸ್ತಿ, ಮುದ್ದಣ ಕಾವ್ಯ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಸಾಹಿತ್ಯ ಕಲಾನಿಧಿ ಪ್ರಶಸ್ತಿ, ಸಂದೇಶ ಸಾಹಿತ್ಯ ಪ್ರಶಸ್ತಿ, ಲಷ್ಕರಿ ಪ್ರಶಸ್ತಿ, ಮುಳಿಯ ಪ್ರಶಸ್ತಿ, ಕೆ.ಎಸ್​. ನರಸಿಂಹ ಸ್ವಾಮಿ ಕಾವ್ಯ ಪ್ರಶಸ್ತಿ, ನುಡಿಸಿರಿ ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ, ಸ್ವರ್ಣ ಸಾಧನಾ ಪ್ರಶಸ್ತಿ ಹೀಗೆ ಅನೇಕ ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ.