ಉಡುಪಿ ಮಣಿಪಾಲದ ಕೆಎಂಸಿಯಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣವನ್ನು ಪ್ರೊ. ಅಜಾಜ್ ನಬಿ ಕೌಲ್ ಉದ್ಘಾಟಿಸಿದರು. ಡಾ. ಕವಿತಾ ಸರವು, ಡಾ. ಕವಿತಾ ಶೆಟ್ಟಿಗಾರ್, ಡಾ. ಏಂಜಲ್ ಮಿರಾಕ್ಲಿನ್, ಡಾ. ಅರವಿಂದ್ ಎನ್. ಪ್ರಭು, ಡಾ. ಮುರಳೀಧರ್ ವರ್ಮ ಇದ್ದರು.
ಕೆಎಂಸಿಯ ಡಾ. ಕವಿತಾ ಸರವು ಮಾಹಿತಿ
* ಮಣಿಪಾಲದಲ್ಲಿ ಮಿದುಳು ಕಾಯಿಲೆ ವಿಚಾರ ಸಂಕಿರಣ
ಉಡುಪಿ: ಮಿದುಳಿನ ಸೋಂಕು ಅನೇಕ ಬಾರಿ ಗಮನಕ್ಕೆ ಬರುವುದಿಲ್ಲ. ಅಥವಾ ತಡವಾಗಿ ತಿಳಿಯುತ್ತದೆ. ಇದರಿಂದ ಚಿಕಿತ್ಸೆಯ ಅಮೂಲ್ಯ ಸಮಯ ವ್ಯರ್ಥವಾಗುತ್ತದೆ. ಬದಲಾಗುತ್ತಿರುವ ಹವಾಮಾನ ಮತ್ತು ಮಳೆಯ ಮಾದರಿಗಳಿಂದ ಹಲವು ಸೋಂಕುಗಳು ಹರಡುತ್ತವೆ. ಆರಂಭದಲ್ಲೇ ರೋಗ ನಿರ್ಣಯ, ಉತ್ತಮ ಪ್ರಯೋಗಾಲಯವಿದ್ದರೆ ಅನೇಕ ಜೀವ ಉಳಿಸಬಹುದು ಎಂದು ಕೆಎಂಸಿ, ಮಾಹೆಯ ಸಾಂಕ್ರಾಮಿಕ ರೋಗಗಳ ವಿಭಾಗದ ಮುಖ್ಯಸ್ಥೆ ಡಾ. ಕವಿತಾ ಸರವು ತಿಳಿಸಿದರು.
ಮಣಿಪಾಲದಲ್ಲಿ ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯ, ಮಣಿಪಾಲ ಸೆಂಟರ್ ಫಾರ್ ಇನ್ಫೆಕ್ಷಿಯಸ್ ಡಿಸೀಸಸ್ ಸೊಸೈಟಿ ವತಿಯಿಂದ ಹಾಗೂ ಸಾಂಕ್ರಾಮಿಕ ರೋಗಗಳ ವಿಭಾಗ ಹಾಗೂ ಐಸಿಎಂಆರ್ ಕ್ಲೈಂಬ್ ಇಂಡಿಯಾ ಅಧ್ಯಯನ ತಂಡದ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಮಿದುಳಿನ ಸೋಂಕುಗಳ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಸಿಐಡಿಎಸ್ ಟ್ರಾಪಿಕಲ್ ಇನ್ಫೆಕ್ಷಿಯಸ್ ಡಿಸೀಸಸ್ ಉಪಸಮಿತಿಯ ಅಧ್ಯಕ್ಷ ಹಾಗೂ ಸ್ಕಿಮ್ಸ್, ಕಾಶ್ಮೀರದ ಸಾಂಕ್ರಾಮಿಕ ರೋಗಗಳ ವಿಭಾಗದ ಮುಖ್ಯಸ್ಥ ಪ್ರೊ. ಅಜಾಜ್ ನಬಿ ಕೌಲ್ ಉದ್ಘಾಟಿಸಿ ಮಾತನಾಡಿದರು.
ಕೆಎಂಸಿ ಮಣಿಪಾಲ ಕ್ಯಾಂಪಸ್ನ ಡಾ. ಅರವಿಂದ್ ಎನ್. ಪ್ರಭು, ಡಾ. ಮುರಳೀಧರ್ ವರ್ಮ, ಡಾ. ಪೃಥ್ವಿಶ್ರೀ ರವೀಂದ್ರ ಮತ್ತು ಕೆಎಂಸಿ ಮಂಗಳೂರು ಕ್ಯಾಂಪಸ್ನ ಡಾ. ಶರತ್ ಪಿ.ಎಸ್. ಪಾಲ್ಗೊಂಡಿದ್ದರು.
ಅಧೀನಾ ಜೋಮನ್ ಕಾರ್ಯಕ್ರಮ ನಿರೂಪಿಸಿದರು. ಗೌತಮಿ ಎ. ವಂದಿಸಿದರು.
ತಜ್ಞರಿಂದ ವೈಜ್ಞಾನಿಕ ಗೋಷ್ಠಿ
ವಿಚಾರ ಸಂಕಿರಣದಲ್ಲಿ ತಜ್ಞರು ವೈಜ್ಞಾನಿಕ ಗೋಷ್ಠಿ ನಡೆಸಿದರು. ಡಾ. ಕವಿತಾ ಸರವು ಅವರು ಭಾರತದಲ್ಲಿ ಮೆನಿಂಗೊಎನ್ಸೆಫಲೈಟಿಸ್ಗೆ ಚಿಕಿತ್ಸಾ ವಿಧಾನದ ಕುರಿತು, ಮಾಹೆಯ ಎಂಸಿಎಚ್ಪಿಯ ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞಾನ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಕವಿತಾ ಶೆಟ್ಟಿಗಾರ್ ಅವರು ಮೆನಿಂಗೊಎನ್ಸೆಫಲೈಟಿಸ್ ಉಂಟುಮಾಡುವ ರೋಗಾಣುಗಳ ಆರಂಭಿಕ ಪತ್ತೆಗಾಗಿ ಆಣ್ವಿಕ ರೋಗ ನಿರ್ಣಯ ವಿಧಾನಗಳ ಕುರಿತು, ವೆಲ್ಲೂರಿನ ಕ್ರಿಶ್ಚಿಯನ್ ವೈದ್ಯಕೀಯ ಮಹಾವಿದ್ಯಾಲಯದ ನರವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಏಂಜಲ್ ಮಿರಾಕ್ಲಿನ್ ಅವರು ಲಿಂಫೋಸೈಟಿಕ್ ಮೆನಿಂಜೈಟಿಸ್ ಹಾಗೂ ಕ್ಷಯರೋಗ ಮತ್ತು ಇತರ ಸಂಬಂಧಿತ ವಿಷಯ ಕುರಿತು ಮಾತನಾಡಿದರು.