ಅಲೆಗಳು ಅಪ್ಪಳಿಸುವ ಸನಿಹದಲ್ಲೇ ನಿಂತು ಎಂಜಾಯ್ ಮಾಡುತ್ತಿರುವ ಪ್ರವಾಸಿಗರು. 
ಉಡುಪಿ

ಮೋಜು-ಮಸ್ತಿಗೆ ಸೆಲ್ಫಿ ಆಪತ್ತು

ಇಂದಿರಾ ಎನ್ ಕೆ

ರಾಘವೇಂದ್ರ ಪೈ ಗಂಗೊಳ್ಳಿ

ನದಿ ಹಾಗೂ ಕಡಲ ಮಧ್ಯದಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ ಸನಿಹವೇ ಇರುವ ತ್ರಾಸಿ- ಮರವಂತೆ ಬೀಚ್‌ನ ಅತ್ಯಪೂರ್ವ ಸೊಬಗನ್ನು ಕಣ್ತುಂಬಿಕೊಳ್ಳಲು ದೂರದ ಊರುಗಳಿಂದ ಪ್ರತಿ ನಿತ್ಯ ಸಾವಿರಾರು ಮಂದಿ ಬರುತ್ತಾರೆ. ಮಳೆಗಾಲ ಸಮಯದಲ್ಲಿ ಅಲೆಗಳ ಅಬ್ಬರ ಹೆಚ್ಚುತ್ತಿದ್ದು, ಅದರ ಮಧ್ಯೆಯೂ ಅಪಾಯಕಾರಿ ಸ್ಥಳದಲ್ಲಿ ನಿಂತು ಪ್ರವಾಸಿಗರು ಸೆಲ್ಫಿ ತೆಗೆಯುವುದು, ಮಳೆ ಸುರಿಯುತ್ತಿದ್ದರೂ ಲೆಕ್ಕಿಸದೆ ಮಕ್ಕಳು, ಮಹಿಳೆಯರ ಸಹಿತ ಅನೇಕರು ತಡೆಗೋಡೆಯಲ್ಲಿ ಹಾಗೂ ನೀರಿಗಿಳಿದು ವಿಹರಿಸುತ್ತಿರುವುದು ಕಂಡುಬಂದಿದೆ.

ತ್ರಾಸಿ- ಮರವಂತೆ ಚತುಷ್ಪಥ ಹೆದ್ದಾರಿಯುದಕ್ಕೂ ನಿರ್ಮಿಸಿದ ತಡೆಗೋಡೆಗೆ ಅಲೆಗಳು ಬಂದು ಅಪ್ಪಳಿಸುತ್ತಿರುವ ದೃಶ್ಯ ಕಣ್ಣಿಗೆ ಮುದ ನೀಡುತ್ತಿದ್ದು, ಅದನ್ನು ಹತ್ತಿರದಿಂದ ಕಂಡು ಜತೆಗೊಂದು ಸೆಲ್ಫಿ ತೆಗೆಯುವ ಎಂದು ಜನರು ತೀರ ಸನಿಹವೇ ಹೋಗುತ್ತಿದ್ದಾರೆ. ಕಡಲ್ಕೊರೆತಕ್ಕಾಗಿ ಹಾಕಲಾದ ಕಲ್ಲು, ಬಂಡೆಗಳ ತುದಿಯವರೆಗೆ ಹೋಗಿ ಭಾರಿ ಅಲೆಗಳು ಅಪ್ಪಳಿಸುವ ಸನಿಹದಲ್ಲೇ ಫೋಟೋ ತೆಗೆಯುತ್ತಿರುವುದು, ಅಬ್ಬರದ ಅಲೆಗಳಿದ್ದರೂ ಅದಕ್ಕೆ ಬೆನ್ನು ಹಾಕಿ ಸೆಲ್ಫಿ ಕ್ಲಿಕ್ಕಿಸುವುದು, ಕಡಲಿಗಿಳಿದು ಅಲೆಗಳ ಜತೆ ಆಟವಾಡುತ್ತಿರುವುದು ಭೀತಿ ಹುಟ್ಟಿಸುವಂತಿದೆ. ಇಲ್ಲಿನ ಕಡಲ ತೀರದಲ್ಲಿ ಸುರಕ್ಷತಾ ದೃಷ್ಟಿಯಿಂದ ಸಂಬಂಧಪಟ್ಟ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು, ಗೃಹ ರಕ್ಷಕದ ದಳದವರು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಪ್ರವಾಸಿಗರ ದಂಡು

ವಾರದ ರಜಾ ದಿನಗಳಲ್ಲಿ ಮಾತ್ರವಲ್ಲದೆ ಬೇರೆ ದಿನಗಳಲ್ಲಿಯೂ ಪ್ರವಾಸಿಗರ ದಂಡು ಕಂಡು ಬರುತ್ತಿದ್ದು, ಕರಾವಳಿಯ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿ ಬಂದ ಉತ್ತರ ಕರ್ನಾಟಕ ಭಾಗದವರು ವಾಪಸ್ ತೆರಳುವಾಗ ಹೆದ್ದಾರಿಯಲ್ಲೇ ಇರುವ ಮರವಂತೆಯ ಕಡಲ ಕಿನಾರೆಯ ಸೊಬಗನ್ನು ಸವಿದು ತೆರಳುತ್ತಿದ್ದಾರೆ.
ಸ್ನೇಹಿತರು, ಸಂಬಂಧಿಕರೊಂದಿಗೆ ಮೈಮರೆತು ಅಪಾಯ ಲೆಕ್ಕಿಸದೆ ನೀರಿಗಿಳಿಯುತ್ತಿದ್ದು, ಇಲ್ಲಿ ಈಗ ಯಾರೂ ಕೇಳುವವರೆ
ಇಲ್ಲದಂತಾಗಿದೆ. ದಡದಿಂದ 90 ಮೀ. ಉದ್ದಕ್ಕಿರುವ ತಡೆಗೋಡೆ ಮೇಲೆ ನಿಲ್ಲುವುದು, ಸ್ನಾನ ಮಾಡುವುದು ಹಾಗೂ ಫೋಟೋ ತೆಗೆದುಕೊಳ್ಳುವುದು ಅಪಾಯಕಾರಿಯಾಗಿದೆ. ಮಳೆಗಾಲದಲ್ಲಿ ಸಮುದ್ರದ ಅಲೆಗಳು ಅತ್ಯಂತ ಅಪಾಯಕಾರಿಯಾಗಿದ್ದು, ಅದರ ಅಬ್ಬರವನ್ನು ಅಂದಾಜಿಸುವುದು ಕೂಡ ಕಷ್ಟ.

ಮಳೆಗಾಲದ ಸಮಯದಲ್ಲಿ ಪ್ರವಾಸಿಗರು ಕಡಲಿಗಿಳಿಯದಂತೆ ಮತ್ತು ತಡೆಗೋಡೆ ಮೇಲೆ ನಿಲ್ಲದಂತೆ ಎಚ್ಚರಿಸುವ ಪ್ರಯತ್ನ ನಡೆಯುತ್ತಿದೆ. ಪೊಲೀಸ್, ಗೃಹರಕ್ಷಕ ದಳದ ಸಿಬ್ಬಂದಿ ಹಾಗೂ ಕರಾವಳಿ ಕಾವಲು ಪೊಲೀಸ್ ಠಾಣೆ ಸಿಬ್ಬಂದಿ ಗಸ್ತು ತಿರುಗುತ್ತಿದ್ದು, ಪ್ರವಾಸಿಗರ ಸುರಕ್ಷತೆಗೆ ಸಾಧ್ಯವಾದ ಎಲ್ಲ ಕ್ರಮಗಳನ್ನು ಇಲಾಖೆ ಕೈಗೊಳ್ಳುತ್ತಿದೆ. ಪ್ರವಾಸಿಗರು ತಮ್ಮ ಸುರಕ್ಷತೆ ಕಡೆಗೆ ಹೆಚ್ಚಿನ ಗಮನ ನೀಡಬೇಕು.

— ಪವನ್ ನಾಯಕ್ ಉಪನಿರೀಕ್ಷಕರು, ಗಂಗೊಳ್ಳಿ ಪೊಲೀಸ್ ಠಾಣೆ