ಅಲಂಗಾರಿನಲ್ಲಿ ಅನಂತ ಭಟ್ಟರ ಸಂಸ್ಮರಣೆ ಹಾಗೂ ಔಷಧ ಸಸ್ಯ, ಬೀಜ ಉಚಿತ ವಿತರಣೆ ಕಾರ್ಯಕ್ರಮ ಆಯೋಜಿಸಲಾಯಿತು. ಸಹಕಾರಿ ಧುರೀಣ ಎಂ.ದಯಾನಂದ ಪೈ, ಪಡುಮಾರ್ನಾಡು ದಯಾನಂದ ಭಟ್, ಜಿನೇಂದ್ರ ಹೆಗ್ಡೆ, ಅಮೃತ ಸಾವಯವ ಮಳಿಗೆಯ ಅಶೋಕ್ ಭಂಡಾರಿ ಇದ್ದರು.
ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಔಷಧ ಸಸ್ಯಗಳ ಸಂರಕ್ಷಣೆ ಹಾಗೂ ಸಾವಯವ ಕೃಷಿಗೆ ಜೀವನವಿಡೀ ಶ್ರಮಿಸಿದ ಕೀರ್ತಿಶೇಷ ಇರ್ವತ್ತೂರು ಅನಂತ ಭಟ್ಟರ ಸೇವೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸ ನಡೆಯುತ್ತಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಮೂಡುಬಿದಿರೆಯಲ್ಲಿ ಜಿಲ್ಲಾ ಮಟ್ಟದ ಸ್ವಾವಲಂಬಿ ಸಾವಯವ ಕೃಷಿ ಮೇಳ ಆಯೋಜಿಸುವ ಉದ್ದೇಶವಿದೆ ಎಂದು ಸಹಕಾರಿ ಧುರೀಣ ಎಂ.ದಯಾನಂದ ಪೈ ಹೇಳಿದರು.
ಕೀರ್ತಿಶೇಷ ಇರ್ವತ್ತೂರು ಅನಂತ ಭಟ್ಟರ ಸಂಸ್ಮರಣೆ ಅಂಗವಾಗಿ ಅಮೃತ ಸಾವಯವ ಮಳಿಗೆ ಹಾಗೂ ಸಾವಯವ ಕೃಷಿಕರ ಬಳಗ, ಮೂಡುಬಿದಿರೆ ಆಶ್ರಯದಲ್ಲಿ ಅಲಂಗಾರು ಜನತಾ ವಿವಿಧೋದ್ದೇಶ ಸಹಕಾರಿ ಸಂಘದ ವಠಾರದಲ್ಲಿ ಔಷಧ ಸಸ್ಯಗಳು, ತರಕಾರಿ ಬೀಜಗಳು ಹಾಗೂ ಗೋಕ್ರಪಾಮೃತ ಉಚಿತವಾಗಿ ವಿತರಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪಡುಮಾರ್ನಾಡು ದಯಾನಂದ ಭಟ್, ಜಿನೇಂದ್ರ ಹೆಗ್ಡೆ, ಅಮೃತ ಸಾವಯವ ಮಳಿಗೆಯ ಅಶೋಕ್ ಭಂಡಾರಿ, ಇರ್ವತ್ತೂರು ವೆಂಕಟರಮಣ ಭಟ್ ಹಾಗೂ ಮೂಡುಬಿದಿರೆಯ ವಾಸ್ತು ತಜ್ಞ ಎಂ.ರಾಘವೇಂದ್ರ ಭಂಡಾರ್ಕರ್ ಅನಂತ ಭಟ್ಟರ ಸೇವೆ ಹಾಗೂ ಸಾವಯವ ಕೃಷಿಯ ಮಹತ್ವದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು.
ಇರ್ವತ್ತೂರು ಅನಂತ ಭಟ್ಟರ ಪುತ್ರ ಇರ್ವತ್ತೂರು ವೆಂಕಟರಮಣ ಭಟ್ ನೂರಕ್ಕೂ ಹೆಚ್ಚು ಔಷಧ ಸಸ್ಯಗಳ ಪರಿಚಯ ನೀಡಿದರು. ಬಳಿಕ ಔಷಧ ಸಸ್ಯಗಳು, ತರಕಾರಿ ಬೀಜಗಳು ಹಾಗೂ ಗೋಕ್ರಪಾಮೃತ ವಿತರಿಸಲಾಯಿತು.
ರವಿಶಂಕರ್ ಗುರೂಜಿಯವರ ಆರ್ಟ್ ಆಫ್ ಲಿವಿಂಗ್ ಕೇಂದ್ರದ ಶಿಕ್ಷಕ ಉದಯ ಗೋ ಆಧಾರಿತ ಕೃಷಿಯ ಕುರಿತು ಮಾಹಿತಿ ನೀಡಿದರು. ಅಶೋಕ್ ಭಂಡಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಡುಮಾರ್ನಾಡು ದಯಾನಂದ ಭಟ್ ನಿರೂಪಿಸಿದರು. ಪೆರಿಂಜೆ ಗೋಪಾಲಕೃಷ್ಣ ಭಟ್ ವಂದಿಸಿದರು.