ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪಪೂ ಕಾಲೇಜಿನಲ್ಲಿ ಮಕ್ಕಳ ಸಂತೆಯನ್ನು ಸುಧಾಕರ ಆಚಾರ್ಯ ಉದ್ಘಾಟಿಸಿದರು. 
ಉಡುಪಿ

ಆರ್ಥಿಕ ಅಭಿವೃದ್ಧಿಗೆ ಸ್ವಉದ್ಯೋಗ ಸಹಕಾರಿ

ಇಂದಿರಾ ಎನ್ ಕೆ
ಕುಂದಾಪುರ: ಯಾವುದೇ ಸರ್ಕಾರಕ್ಕಾಗಲೀ, ಸಂಸ್ಥೆಗಾಗಲೀ ನೂರಕ್ಕೆ ನೂರರಷ್ಟು ಉದ್ಯೋಗ ನೀಡಲು ಸಾಧ್ಯವಿಲ್ಲ. ಬಹಳಷ್ಟು ಮಂದಿಗೆ ಸ್ವಂತ ಉದ್ಯೋಗ ಮಾಡಲು ಅನುಭವದ ಕೊರತೆ ಇದೆೆ. ವಿದ್ಯಾರ್ಥಿಗಳಿಗೆ ಈ ಹಂತದಲ್ಲಿ ಸ್ವಉದ್ಯೋಗ ಬಗ್ಗೆ ಮಾಹಿತಿ ಮತ್ತು ಅನುಭವ ದೊರೆತರೆ ಭವಿಷ್ಯದಲ್ಲಿ ಸ್ವಂತ ಉದ್ಯೋಗ ಮಾಡಲು ಸಹಕಾರಿಯಾಗುತ್ತದೆ. ದೇಶದ ಆರ್ಥಿಕ ಅಭಿವೃದ್ಧಿಗೂ ಸಹಾಯವಾಗುತ್ತದೆ ಎಂದು ಬೈಂದೂರು ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಸುಧಾಕರ ಆಚಾರ್ಯ ತ್ರಾಸಿ ಹೇಳಿದರು.
ಜಿ.ಎಸ್.ವಿ.ಎಸ್.ಅಸೋಸಿಯೇಷನ್ ಪ್ರವರ್ತಿತ ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪಪೂ ಕಾಲೇಜಿನಲ್ಲಿ ಮಕ್ಕಳ ಸಂತೆ- ಬಿಸಿನೆಸ್ ಡೇ ಕಾರ್ಯಕ್ರಮವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.
ಕಾಲೇಜು ಪ್ರಾಂಶುಪಾಲೆ ಕವಿತಾ ಎಂ.ಸಿ. ಅಧ್ಯಕ್ಷತೆ ವಹಿಸಿದ್ದರು. ಗುಜ್ಜಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಗಣೇಶ ನಾಯಕ್, ಹಸಿ ಮೀನು ವ್ಯಾಪಾರಸ್ಥರ ಸಂಘ ಅಧ್ಯಕ್ಷ ರಾಘವೇಂದ್ರ ಖಾರ್ವಿ, ಎಸ್.ವಿ. ವಿದ್ಯಾಸಂಸ್ಥೆಗಳ ಸಂಚಾಲಕ ಎನ್.ಸದಾಶಿವ ನಾಯಕ್, ಜಿ.ಎಸ್.ವಿ.ಎಸ್. ಅಸೋಸಿಯೇಷನ್ ಸದಸ್ಯರಾದ ಕೆ.ರಾಮನಾಥ ನಾಯಕ್, ಎಂ.ನಾಗೇಂದ್ರ ಪೈ, ಎಸ್.ವಿ.ಎಸ್. ಶಾಲೆಗಳ ಹಳೇ ವಿದ್ಯಾರ್ಥಿ ಸಂಘ ಕಾರ್ಯದರ್ಶಿ ಭಾಸ್ಕರ ಎಚ್.ಜಿ., ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲ ಗೋಪಾಲ ದೇವಾಡಿಗ, ಆಂಗ್ಲ ಮಾಧ್ಯಮ ಶಾಲಾ ಮುಖ್ಯಶಿಕ್ಷಕ ರಾಘವೇಂದ್ರ ಶೇರುಗಾರ್ ಇದ್ದರು. ಉಪನ್ಯಾಸಕ ನರೇಂದ್ರ ಎಸ್.ಗಂಗೊಳ್ಳಿ ಸ್ವಾಗತಿಸಿ, ನಿರೂಪಿಸಿದರು. ಉಪನ್ಯಾಸಕ ವೆಂಕಟೇಶಮೂರ್ತಿ ಮತ್ತು ಅಕ್ಷಯಾ ಸನ್ಮಾನಿತರನ್ನು ಪರಿಚಯಿಸಿದರು.

ಸಾಧಕರಿಗೆ ಗೌರವಾರ್ಪಣೆ

ಕೆನರಾ ಬ್ಯಾಂಕ್ ಗಂಗೊಳ್ಳಿ ಶಾಖೆ ವ್ಯವಸ್ಥಾಪಕ ವಾಸು ದೇವಾಡಿಗ, ಮುಳುಗು ತಜ್ಞ ದಿನೇಶ ಖಾರ್ವಿ, ಪತ್ರಕರ್ತ ಬಿ.ರಾಘವೇಂದ್ರ ಪೈ, ಕರಾಟೆ ಪಟು ಟಿ.ಶಶಾಂಕ ಶೆಣೈ, ತುರ್ತು ಚಿಕಿತ್ಸಾ ವಾಹನಗಳ ಚಾಲಕರಾದ ಇಬ್ರಾಹಿಂ ಗಂಗೊಳ್ಳಿ, ಸಚಿನ್ ಖಾರ್ವಿ, ಮಹಮ್ಮದ್ ಸಿಯಾನ್, ಪ್ಯಾಟ್ರಿಕ್ ವಿಲ್ಸನ್ ರೆಬೆರೊ, ಇಮಾಮ್ ಸಾಬಿ, ನವೀನ್ ಎಂ. ಅವರನ್ನು ಗೌರವಿಸಲಾಯಿತು. ಸಂತೆಯಲ್ಲಿ ಮಕ್ಕಳು ವಿವಿಧ ಉತ್ಪನ್ನ, ಆಹಾರ ತಿನಿಸುಗಳನ್ನು ಮಾರಾಟ ಮಾಡಿ ಸಂಭ್ರಮಿಸಿದರು. ಭೂತದ ಮನೆ, ಹಳ್ಳಿ ಮನೆ, ಸಾಲುಮರದ ತಿಮ್ಮಕ್ಕ ನರ್ಸರಿ ಪ್ರಮುಖ ಆಕರ್ಷಣೆಯಾಗಿತ್ತು.