ಸ್ಟ್ರೇಡಿಸ್ ಕಂಪನಿ ನೇರ ಸಂದರ್ಶನ ಆಯ್ಕೆ ಪ್ರಕ್ರಿಯೆಯ ಸಭಾ ಕಾರ್ಯಕ್ರಮದಲ್ಲಿ ಒಕ್ಕಲಿಗ ಗೌಡ ಸೇವಾ ಸಂಘದ ಕಡಬ ತಾಲೂಕು ಅಧ್ಯಕ್ಷ ಸುರೇಶ್ ಬೈಲು ಮಾತನಾಡಿದರು. ಕಂಪನಿ ಸ್ಥಾವರ ಮುಖ್ಯಸ್ಥ ಶೈಲೇಶ್ ವ್ಯಾಸ್, ಕಾರ್ಯಕ್ರಮ ಸಂಯೋಜಕ ಶೀನಪ್ಪ ಗೌಡ, ಹಿರಿಯರಾದ ಜನಾರ್ದನ ಗೌಡ ಮೊದಲಾದವರು ಇದ್ದರು. 
ಉಡುಪಿ

ಅವಕಾಶಗಳ ಸದ್ಬಳಕೆಯಿಂದ ಆತ್ಮವಿಶ್ವಾಸ ವೃದ್ಧಿ

ಕಡಬ: ಲಕ್ಷಾಂತರ ರೂ. ಖರ್ಚು ಮಾಡಿ ಶಿಕ್ಷಣ ಪಡೆಯುವ ಪ್ರಸಕ್ತ ಕಾಲಘಟ್ಟದಲ್ಲಿ ಉದ್ಯೋಗ ಮಾಡಿಕೊಂಡು ಉಚಿತವಾಗಿ ವಸತಿ, ಊಟ, ಶಿಕ್ಷಣ ಜತೆಗೆ ಶಿಷ್ಯ ವೇತನದೊಂದಿಗೆ 4 ವರ್ಷದ ಪದವಿ ಪಡೆದ ಬಳಿಕ ಕಂಪನಿಯಲ್ಲಿಯೇ ಉದ್ಯೋಗ ನೀಡುವ ಕಾರ್ಯ ಸ್ಟ್ರೇಡಿಸ್ ಕಂಪನಿ ಮಾಡುತ್ತಿದ್ದು, ಇಂಥ ಅಪೂರ್ವ ಅವಕಾಶವನ್ನು ವಿದ್ಯಾರ್ಥಿಗಳು ಸದುಪಯೋಗಿಸಬೇಕು ಎಂದು ಒಕ್ಕಲಿಗ ಗೌಡ ಸೇವಾ ಸಂಘ ಕಡಬ ತಾಲೂಕು ಅಧ್ಯಕ್ಷ ಸುರೇಶ್ ಬೈಲು ಹೇಳಿದರು.
ಕಡಬ ತಾಲೂಕಿನ ಬಲ್ಯ ಗ್ರಾಮದ ಹೊಸಮಠ ಸೇತುವೆ ಬಳಿಯಿರುವ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಒಕ್ಕಲಿಗ ಗೌಡ ಸೇವಾ ಸಂಘ ಕಡಬ ತಾಲೂಕು ಸಹಯೋಗದಲ್ಲಿ ಭಾನುವಾರ ಸ್ಟ್ರೇಡಿಸ್ ಕಂಪನಿಯಿಂದ ಬ್ಯಾಚುಲರ್ ಫಾರ್ಮಾಸ್ಯೂಟಿಕಲ್ ಮ್ಯಾನುಫ್ಯಾಕ್ಚರಿಂಗ್ ಟೆಕ್ನಾಲಜಿ ಪದವಿ ಶಿಕ್ಷಣಕ್ಕೆ ಆಯ್ಕೆ ಪ್ರಕ್ರಿಯೆಯ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪಡೆದ ಶಿಕ್ಷಣಕ್ಕೆ ಸಮರ್ಪಕ ಸಂಬಳ, ಉದ್ಯೋಗ ದೊರೆಯುತ್ತಿಲ್ಲ ಎನ್ನುವ ಪ್ರಸಕ್ತ ಕಾಲಘಟ್ಟದಲ್ಲಿ ಕಂಪನಿಯೇ ಮುಂದೆ ಬಂದು ಔದ್ಯೋಗಿಕ ಅವಕಾಶ ಕಲ್ಪಿಸುತ್ತಿದೆ. ಕರಾವಳಿಯ ಮಕ್ಕಳು ಜೀವನದಲ್ಲಿ ನಿಯತ್ತಿನಿಂದ ಇದ್ದರೂ ಆತ್ಮವಿಶ್ವಾಸದ ಕೊರತೆಯಿದೆ. ಇಂಥ ಅವಕಾಶದಿಂದ ಆತ್ಮವಿಶ್ವಾಸದ ಜೀವನ ಸಾಗಿಸಲು ಸಾಧ್ಯ ಎಂದರು.
ಕಂಪನಿಯ ಸ್ಥಾವರ ಮುಖ್ಯಸ್ಥ ಶೈಲೇಶ್ ವ್ಯಾಸ್ ಉದ್ಘಾಟಿಸಿದರು. ಬಾಶ್ ಕಂಪನಿ ಮಾನವ ಸಂಪನ್ಮೂಲ ನಿವೃತ್ತ ವ್ಯವಸ್ಥಾಪಕ, ಕಾರ್ಯಕ್ರಮ ಸಂಯೋಜಕ ಶೀನಪ್ಪ ಗೌಡ ಮಾಳ, ಕಂಪನಿ ಪ್ರಮುಖರಾದ ಪ್ರಭು ಎಚ್., ದೀಪಕ್ ಎಸ್., ಬಸವರಾಜಪ್ಪ, ಮಂಜುನಾಥ್ ಜಿ.ಎಚ್.ಎಸ್., ಮೋಹನ್ ಕುಮಾರ್, ಒಕ್ಕಲಿಗ ಗೌಡ ಸೇವಾ ಸಂಘದ ಹಿರಿಯರಾದ ಜನಾರ್ದನ ಗೌಡ ಉಪಸ್ಥಿತರಿದ್ದರು. ಒಕ್ಕಲಿಗ ಗೌಡ ಸೇವಾ ಸಂಘ ಸಲಹಾ ಸಮಿತಿ ಸದಸ್ಯ ಡಾ.ಶಿವಕುಮಾರ್ ಸ್ವಾಗತಿಸಿದರು. ಉಪಾಧ್ಯಕ್ಷ ತಮ್ಮಯ್ಯ ಗೌಡ ವಂದಿಸಿದರು. ವ್ಯವಸ್ಥಾಪಕ ಅಶೋಕ್ ಶೇಡಿ ನಿರೂಪಿಸಿದರು.

ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಅವರಲ್ಲಿನ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಇಂಥ ಅವಕಾಶ ಸೃಷ್ಟಿಸಿದೆ. ಕಂಪನಿಯಲ್ಲಿ ಉತ್ಪಾದಿಸುವ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಮಾತ್ರೆಗಳ ಗುಣಮಟ್ಟ ಕಾಯ್ದುಕೊಳ್ಳುವುದಕ್ಕಾಗಿ ಪರಿಣತ ಸಿಬ್ಬಂದಿ ಅವಶ್ಯಕತೆಯಿದ್ದು, ನೇಮಕ ಮಾಡಿಕೊಂಡು ಪದವಿ ಶಿಕ್ಷಣ ನೀಡಿ ಅಲ್ಲೇ ಉದ್ಯೋಗ ನೀಡಲಾಗುತ್ತಿದೆ.

— ಶೈಲೇಶ್ ವ್ಯಾಸ್, ಕಂಪನಿಯ ಸ್ಥಾವರ ಮುಖ್ಯಸ್ಥ