ವಿಜಯವಾಣಿ ಸುದ್ದಿಜಾಲ ಕಾರ್ಕಳ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಈ ಬಾರಿ ಕಂಬಳ ನಡೆಯಲಿದ್ದು, ದಸರಾ ಕಂಬಳಕ್ಕಾಗಿ ಕೋಣಗಳ ಆಯ್ಕೆ ಪ್ರಕ್ರಿಯೆ ಭರದಿಂದ ಸಾಗಿದೆ. ಕಾರ್ಕಳ ಮಿಯ್ಯಾರಿನ ಕಂಬಳ ಕರೆಯಲ್ಲಿ ನಡೆದ ಜೂನಿಯರ್ ಕೋಣಗಳ ಆಯ್ಕೆ ಶಿಬಿರಕ್ಕೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬರೋಬ್ಬರಿ 180 ಜೋಡಿ ಕೋಣಗಳು ಶುಕ್ರವಾರ ಭಾಗವಹಿಸಿದ್ದವು.
ಒಟ್ಟು ಆರು ವಿಭಾಗಗಳಲ್ಲಿ 160 ಜೋಡಿ ಕೋಣಗಳನ್ನು ಆಯ್ಕೆ ವಾಡಲಾಗುತ್ತಿದೆ. ಈಗಾಗಲೇ ನಾಲ್ಕು ವಿಭಾಗಗಳಲ್ಲಿ 82 ಜೋಡಿ ಕೋಣಗಳ ಆಯ್ಕೆ ಪೂರ್ಣಗೊಂಡಿದ್ದು, ಉಳಿದ ವಿಭಾಗಗಳ ಪ್ರಕ್ರಿಯೆ ಮುಂದುವರಿದಿದೆ. ಹಗ್ಗ ಹಿರಿಯ, ಹಗ್ಗ ಕಿರಿಯ, ನೇಗಿಲು ಹಿರಿಯ, ನೇಗಿಲು ಕಿರಿಯ, ಹಲಗೆ, ಕನೆ ಹಲಗೆ ಹೀಗೆ ಒಟ್ಟು 6 ವಿಭಾಗಗಳಲ್ಲಿ ಮೈಸೂರಿನಲ್ಲಿ ಕಂಬಳ ನಡೆಯಲಿದೆ.
ತುಳುನಾಡಿನ ಕಂಬಳದಂತೆಯೇ ಟೈಮಿಂಗ್ ಹಾಗೂ ಪಾರದರ್ಶಕತೆಯ ತೀರ್ಪಿಗಾಗಿ ಆಧುನಿಕ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ. ಆಯ್ಕೆ ಪ್ರಕ್ರಿಯೆಯಲ್ಲಿ ಕಂಬಳ ಸಮಿತಿ ಪ್ರಮುಖರಾದ ವಿಜಯ ಕುವಾರ್ ಕಂಗಿನಮನೆ, ಉದಯ್ ಎಸ್.ಕೋಟ್ಯಾನ್, ಮುಚ್ಚೂರು ಕಲ್ಕುಡೆ ಲೋಕೇಶ ಶೆಟ್ಟಿ, ಯಡ್ತೂರು ರಾಜೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ದಸರಾ ಕಂಬಳದಲ್ಲಿ ಪಾಲ್ಗೊಳ್ಳಲು ತುಳುನಾಡಿನಿಂದ ಹೊರಡುವ ಕೋಣಗಳು ಅ.17ರಂದು ಬೆಳಗ್ಗೆ 8 ಗಂಟೆಗೆ ಪುತ್ತೂರಿನಿಂದ ಮೆರವಣಿಗೆ ಮೂಲಕ ಪ್ರಯಾಣ ಬೆಳೆಸಲಿವೆ. ಮಧ್ಯಾಹ್ನ 12 ಗಂಟೆಗೆ ಕುಶಾಲನಗರ ತಲುಪಲಿದ್ದು, ವಾರ್ಗ ಮಧ್ಯೆ ಸಂಪಾಜೆ ಹಾಗೂ ಸುಳ್ಯ ಸೇರಿದಂತೆ ವಿವಿಧೆಡೆ ರೈತರು ಕೋಣಗಳ ಸ್ವಾಗತಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಕುಶಾಲನಗರದಿಂದ ಮಧ್ಯಾಹ್ನ 3ಕ್ಕೆ ಹೊರಟು, ಸಂಜೆ 6.30ರ ಸುವಾರಿಗೆ ಮೈಸೂರು ತಲುಪುವ ನಿರೀಕ್ಷೆಯಿದೆ.
ಮೈಸೂರಿನಲ್ಲಿ ಈಗಾಗಲೇ ಕಂಬಳಕ್ಕೆ ಎಲ್ಲ ಸಿದ್ದತೆಗಳು ನಡೆದಿದ್ದು, ಕಂಬಳದ ಕರೆಯ ತಯಾರಿಯೂ ಆಗಿದೆ. ಪಾರ್ಕಿಂಗ್ ವ್ಯವಸ್ಥೆ ಜತೆಗೆ ಕಂಬಳದ ಕೋಣಗಳಿಗೆ ಹಾಗೂ ಅದರೊಂದಿಗೆ ಬರುವವರಿಗೂ ಸಕಲ ವ್ಯವಸ್ಥೆ ವಾಡಲಾಗಿದೆ. ಮೈಸೂರಿನಲ್ಲಿ ನೀರಿಲ್ಲ ಎಂಬ ಅಪಸ್ವರದ ನಡುವೆ ಕಂಬಳದ ನೀರಿಗಾಗಿ ಈಗಾಗಲೇ ಬೋರ್‌ವೆಲ್ ವ್ಯವಸ್ಥೆ ವಾಡಲಾಗಿದೆ. ಹೀಗಾಗಿ ಯಾವುದೇ ಡ್ಯಾಂ ಅಥವಾ ಕೆರೆಯ ನೀರು ಬಳಕೆ ವಾಡುವುದಿಲ್ಲ. ಕೋಣಗಳ ಬಳಕೆಗೆ ಬೇಕಾಗುವ ನೀರಿನ ವ್ಯವಸ್ಥೆಯನ್ನು ತುಳುನಾಡಿನಿಂದಲೇ ವಾಡಲಾಗಿದೆ. ಹೀಗಾಗಿ ಎಲ್ಲೂ ನೀರಿನ ಕೊರೆತೆಯಾಗುವುದಿಲ್ಲ ಎಂದು ರಾಜ್ಯ ಕಂಬಳ ಸಮಿತಿ ತಿಳಿಸಿದೆ.
ತುಳುನಾಡಿನ ಸಾಂಸ್ಕೃತಿಕ ಪರಂಪರೆಯನ್ನು ರಾಜ್ಯದ ಇತರ ಭಾಗಗಳಿಗೆ ಹಾಗೂ ಜಾಗತಿಕ ಮಟ್ಟಕ್ಕೂ ತಲುಪಿಸುವ ಮೂಲ ಉದ್ದೇಶದಿಂದ ಈ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ. ಕಂಬಳ ಯಾವುದೇ ಜಾತಿ, ಮತ ಹಾಗೂ ಪಕ್ಷಭೇದವಿಲ್ಲದೆ ನಡೆಯುವ ಸಮಸ್ತ ತುಳುನಾಡಿನ ನೆಚ್ಚಿನ ಕ್ರೀಡೆ. ಇದನ್ನು ಬೇರೆ ಜಿಲ್ಲೆಗಳಲ್ಲಿ ಆಯೋಜಿಸುವುದರಿಂದ ಇದರ ಸಾಂಸ್ಕೃತಿಕ ಮಹತ್ವ ಎಂದಿಗೂ ಕಡಿಮೆಯಾಗುವುದಿಲ್ಲ.ಬೆಳಪು ದೇವಿಪ್ರಸಾದ್ ಶೆಟ್ಟಿ ರಾಜ್ಯ ಕಂಬಳ ಅಸೋಸಿಯೇಷನ್ ಅಧ್ಯಕ್ಷ