ಪಣಿಯಾಡಿ ಪ್ರಶಸ್ತಿಗೆ ಅಯ್ಕೆಯಾದ ಸಾಹಿತಿ ಸುಲೋಚನಾ ಪಿ.ಕೆ.
* ಪುತ್ತೂರಿನ ಸಾಹಿತಿ ಸುಲೋಚನಾ ಪಿ.ಕೆ. ಅವರ ಕೃತಿ
ಉಡುಪಿ: ಉಡುಪಿ ತುಳುಕೂಟದ ವತಿಯಿಂದ ನೀಡಲಾಗುವ 'ಎಸ್.ಯು. ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿ'ಗೆ ಪುತ್ತೂರಿನ ಸಾಹಿತಿ ಸುಲೋಚನಾ ಪಿ.ಕೆ. ಅವರ ದಧೂಟಿ ಬನ' ಕಾದಂಬರಿ ಆಯ್ಕೆಯಾಗಿದೆ.
ತುಳು ಭಾಷೆ ಚಳವಳಿಯ ಪ್ರವರ್ತಕರಾಗಿದ್ದ ದಿ. ಎಸ್.ಯು. ಪಣಿಯಾಡಿ ಸ್ಮರಣಾರ್ಥ ಈ ಪ್ರಶಸ್ತಿ ನೀಡಲಾಗುತ್ತಿದ್ದು, ಇನ್ನೂ ಮುದ್ರಣಗೊಳ್ಳದ ತುಳು ಕಾದಂಬರಿಕಾರರಿಗೆ ಉಡುಪಿ ತುಳುಕೂಟವು 31 ವರ್ಷದಿಂದ ಈ ಪುರಸ್ಕಾರ ನೀಡುತ್ತಿದೆ. ಪ್ರಶಸ್ತಿಯು 10 ಸಾವಿರ ರೂ. ನಗದು, ಪ್ರಶಸ್ತಿ ಪತ್ರ, ಫಲಕ ಒಳಗೊಂಡಿದೆ.
ಸಾಹಿತಿ ಸುಲೋಚನಾ ಅವರು ಪುತ್ತೂರು ತಾಲೂಕು ಉಪತಹಸೀಲ್ದಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ 'ಸತ್ಯದರ್ಶನ' ಕೃತಿಗೆ ಜಿ.ಪಿ. ರಾಜರತ್ನಂ ದತ್ತಿ ಪ್ರಶಸ್ತಿ ಲಭಿಸಿದೆ. 'ಅಮ್ಮನ ಮಾತ್ ಭಸ್ಮ ಕಟ್ಟಿದ ತಗಡ್ನ ತಾಯತಾತ್' ಕೃತಿಗೆ ಅರೆಭಾಷೆ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಕೊಡುವ ಮೊದಲು, ಸೊನ್ನೆ ಕವನಸಂಕಲನ, ಶ್ರೀ ಸಾಯಿ ಶತನಮನ ಭಜನಾಮೃತ, ಮೂಗಿಯ ಮನದೊಳು ಕಾದಂಬರಿ, ಸಖಿ ವಚನ ಕೃತಿಗಳು ಪ್ರಕಟಗೊಂಡಿವೆ.
ಪಣಿಯಾಡಿ ಕಾದಂಬರಿ ಸ್ಪರ್ಧೆಯ ತೀರ್ಪುಗಾರರಾಗಿ ಸಾಹಿತಿಗಳಾದ ಡಾ. ವಿ.ಕೆ. ಯಾದವ್, ವಾಸಂತಿ ಅಂಬಲಪಾಡಿ, ಪುಷ್ಪಪ್ರಸಾದ್ ಸಹಕರಿಸಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭವು ಸೆಪ್ಟೆಂಬರ್ನಲ್ಲಿ ಉಡುಪಿಯಲ್ಲಿ ನಡೆಯಲಿದೆ ಎಂದು ಉಡುಪಿ ತುಳುಕೂಟದ ಅಧ್ಯಕ್ಷ ಬಿ.ಜಯಕರ್ ಶೆಟ್ಟಿ ಇಂದ್ರಾಳಿ, ಪ್ರಧಾನ ಕಾರ್ಯದರ್ಶಿ ಗಂಗಾಧರ್ ಕಿದಿಯೂರು, ಪಣಿಯಾಡಿ ಕಾದಂಬರಿ ಪ್ರಶಸ್ತಿ ಸಂಚಾಲಕ ಪ್ರಕಾಶ್ಸುವರ್ಣ ಕಟಪಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.