ಗಂಗೊಳ್ಳಿ ಸೀವಾಕ್‌ನ ರಕ್ಷಣಾ ತಡೆಗೋಡೆ ಕಲ್ಲು ಕುಸಿತ.
ರಾಘವೇಂದ್ರ ಪೈ ಗಂಗೊಳ್ಳಿ ಕುಂದಾಪುರ
ಗಂಗೊಳ್ಳಿ ಅಳಿವೆಯಲ್ಲಿ ಕಳೆದ ಎರಡು ದಿನಗಳಿಂದ ಉಂಟಾಗಿರುವ ಪ್ರಬಲ ಅಲೆಗಳ ಆರ್ಭಟಕ್ಕೆ ಸೀವಾಕ್ ಅಪಾಯಕ್ಕೆ ಸಿಲುಕಿದೆ. ರಕ್ಷಣಾ ತಡೆಗೋಡೆಯ ಭಾರಿ ಕಲ್ಲುಗಳು ಹಾಗೂ ಟೆಟ್ರಾಪೋಡ್‌ಗಳು ಸಮುದ್ರ ಪಾಲಾಗುತ್ತಿದ್ದು, 780 ಮೀಟರ್ ಉದ್ದದ ಕಾಲ್ನಡಿಗೆ ಪಥದ ಸುರಕ್ಷತೆ ಪ್ರಶ್ನಾರ್ಥಕವಾಗಿದೆ.
ತಡೆಗೋಡೆ ಹಾಗೂ ಸಿಮೆಂಟ್ ಆವರಣ ಗೋಡೆಯಲ್ಲಿ ಬಿರುಕುಗಳು ಕಾಣಿಸಿಕೊಂಡಿರುವುದರಿಂದ ಸ್ಥಳೀಯರು ತಕ್ಷಣ ದುರಸ್ತಿ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಕಳೆದ ಎರಡು ದಿನಗಳಿಂದ ಸಮುದ್ರದಲ್ಲಿ ಉಂಟಾಗಿರುವ ಪ್ರಬಲ ಅಲೆಗಳು ಸೀವಾಕ್‌ಗೆ ನಿರಂತರವಾಗಿ ಅಪ್ಪಳಿಸುತ್ತಿವೆ. ಸೀವಾಕ್‌ನ ಸಿಮೆಂಟ್ ತಡೆಬೇಲಿಯಲ್ಲೂ ಬಿರುಕುಗಳು ಕಾಣಿಸಿಕೊಂಡಿದ್ದು, ಇದೇ ಪರಿಸ್ಥಿತಿ ಮುಂದುವರಿದರೆ ಸೀವಾಕ್‌ಗೆ ಅಪಾಯ ಎದುರಾಗುವ ಸಾಧ್ಯತೆ ಇದೆ ಎಂದು ಮೀನುಗಾರರು ಎಚ್ಚರಿಸಿದ್ದಾರೆ.
2019ರಲ್ಲಿ ಅಳಿವೆಯ ಉತ್ತರ ಭಾಗದಲ್ಲಿ ಬ್ರೇಕ್ ವಾಟರ್ ನಿರ್ಮಿಸಿ, ಪ್ರವಾಸೋದ್ಯಮ ಉತ್ತೇಜನಕ್ಕಾಗಿ ಸೀವಾಕ್ ಅಭಿವೃದ್ಧಿಪಡಿಸಲಾಗಿತ್ತು. ಇದೀಗ ಅಲೆಗಳು ತಡೆಗೋಡೆಗೆ ಅಪ್ಪಳಿಸಿ ಕಾಲ್ನಡಿಗೆ ಪಥದವರೆಗೂ ಚಿಮ್ಮುತ್ತಿವೆ. ಮಳೆಗಾಲದಲ್ಲೂ ಗಾಳ ಹಾಕಲು ಹಾಗೂ ಬಲೆ ಬೀಸಿ ಮೀನು ಹಿಡಿಯಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸುವುದರಿಂದ ಸುರಕ್ಷತಾ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಬ್ರೇಕ್‌ವಾಟರ್ ವಿಸ್ತರಣೆಗೆ ಆಗ್ರಹ
2019ರಲ್ಲಿ 102 ಕೋಟಿ ರೂ. ವೆಚ್ಚದಲ್ಲಿ ಗಂಗೊಳ್ಳಿ ಅಳಿವೆಯಲ್ಲಿ ಬ್ರೇಕ್ ವಾಟರ್ ನಿರ್ಮಿಸಲಾಗಿತ್ತು. ಆದರೆ ಗಂಗೊಳ್ಳಿ ವ್ಯಾಪ್ತಿಯತ್ತ ಅದನ್ನು ವಿಸ್ತರಿಸಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಇದ್ದರೂ ಈವರೆಗೆ ಕ್ರಮ ಕೈಗೊಳ್ಳಲಾಗಿಲ್ಲ. ಈಗ ಸೀವಾಕ್‌ಗೆ ಹಾನಿ ಉಂಟಾಗಿರುವ ಹಿನ್ನೆಲೆಯಲ್ಲಿ ಬ್ರೇಕ್ ವಾಟರ್ ವಿಸ್ತರಣೆ ಅನಿವಾರ್ಯವಾಗಿದೆ ಎಂದು ಮೀನುಗಾರರು ಆಗ್ರಹಿಸಿದ್ದಾರೆ.
ತಗ್ಗದ ಅಳಿವೆಯ ಸಮಸ್ಯೆ
ಅಳಿವೆ ಸಮಸ್ಯೆ ನಿವಾರಣೆಗೆ 2024ರಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಹೂಳೆತ್ತುವ ಕಾಮಗಾರಿ ನಡೆಸಲಾಗಿತ್ತು. ಆದರೂ ಸಮುದ್ರದ ಅಲೆಗಳ ಅಬ್ಬರ ಕಡಿಮೆಯಾಗಿಲ್ಲ. ಪ್ರಸ್ತುತ ಮೀನುಗಾರಿಕೆ ನಿಷೇಧ ಜಾರಿಯಲ್ಲಿದ್ದು, ಆಗಸ್ಟ್ ಮೊದಲ ವಾರದಲ್ಲಿ ಮೀನುಗಾರಿಕೆ ಪುನರಾರಂಭವಾಗಲಿದೆ. ಅಳಿವೆಯಲ್ಲಿ ಇದೇ ರೀತಿ ಅಲೆಗಳಿದ್ದರೆ ಮೀನುಗಾರಿಕೆಗೆ ತೊಂದರೆಯಾಗುವ ಆತಂಕ ಎದುರಾಗಿದೆ.
ಅಲೆಗಳ ಹೊಡೆತದಿಂದ ಸೀವಾಕ್‌ನ ರಕ್ಷಣಾ ತಡೆಗೋಡೆ ಸಂಪೂರ್ಣ ಜರ್ಜರಿತಗೊಂಡಿದೆ. ಭಾರಿ ಕಲ್ಲುಗಳು ಸಮುದ್ರಕ್ಕೆ ಜಾರುತ್ತಿವೆ. ಪ್ರವಾಸಿಗರು ಹಾಗೂ ಮೀನುಗಾರರ ಸುರಕ್ಷತೆಗಾಗಿ ಸಂಬಂಧಿತ ಇಲಾಖೆ ತಕ್ಷಣ ದುರಸ್ತಿ ಕಾಮಗಾರಿ ಕೈಗೊಳ್ಳಬೇಕು.
— ರಾಮಪ್ಪ ಖಾರ್ವಿ, ಗಂಗೊಳ್ಳಿ
ಮೀನುಗಾರಿಕಾ ಋತು ಆರಂಭವಾಗುವ ಮುನ್ನವೇ ಬ್ರೇಕ್‌ವಾಟರ್ ವಿಸ್ತರಣೆ ಹಾಗೂ ಸೀವಾಕ್ ರಕ್ಷಣೆಗೆ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು
— ಕೃಷ್ಣ ಕೋಟಾನ್, ಮೀನುಗಾರ ಮುಖಂಡ