ಮಟ್ಟು ಪ್ರದೇಶದಲ್ಲಿ ಕಡಲ್ಕೊರೆತದಿಂದ ತಾತ್ಕಾಲಿಕ ತಡೆಗೋಡೆ ಸಮುದ್ರ ಪಾಲಾಗಿದೆ.
ಪಡುಬಿದ್ರಿ: ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಟ್ಟು ಕಡಲತೀರ ಪ್ರದೇಶದಲ್ಲಿ ಕಡಲ್ಕೊರೆತದಿಂದ ನೂರಾರು ಮೀಟರ್ ಭೂಭಾಗ ಕುಸಿದು ಸಮುದ್ರ ಪಾಲಾಗುತ್ತಿದೆ.
ಸಮುದ್ರ ಒತ್ತುವರಿ ಪ್ರದೇಶದಲ್ಲಿ ಕೊರೆತ ಹೆಚ್ಚಾಗಿದ್ದು, ಹೈಮಾಸ್ಟ್ ದೀಪದ ಕಂಬವೂ ಧರೆಗುರುಳಿದೆ. ಸಮೀಪದ ಮೀನುಗಾರಿಕಾ ರಸ್ತೆ ಅಪಾಯದ ಅಂಚಿನಲ್ಲಿದೆ. ಪ್ರವಾಸಿ ತಾಣವಾಗಿರುವ ಮಟ್ಟು ಸಮುದ್ರ ಕಿನಾರೆಯಲ್ಲಿ ತೆಂಗಿನಮರಗಳೂ ಸೇರಿದಂತೆ ಹೆಚ್ಚಿನ ಭೂಭಾಗ ಈಗಾಗಲೇ ಸಮುದ್ರದಲ್ಲಿ ಕೊಚ್ಚಿಕೊಂಡು ಹೋಗಿವೆ. ಈ ಭಾಗದಲ್ಲಿ ಅಳವಡಿಸಲಾಗಿದ್ದ ಕಲ್ಲಿನ ತಡೆ ವ್ಯವಸ್ಥೆ ನೀರು ಪಾಲಾಗಿದೆ.
ಮಟ್ಟು ಭಾಗದಲ್ಲಿ ಮತ್ತೆ ಕಡಲ್ಕೊರೆತ ತೀವ್ರಗೊಂಡಿದ್ದು, ಅಪಾರ ಪ್ರಮಾಣದ ಭೂಭಾಗ ಸಮುದ್ರ ಪಾಲಾಗುತ್ತಿದೆ. ಈ ಕುರಿತು ಕಳೆದ ವರ್ಷವೇ ಸ್ಥಳೀಯರು ಮತ್ತು ಗ್ರಾಮಸ್ಥರು ಜಿಲ್ಲಾಡಳಿತದ ಗಮನಕ್ಕೆ ತಂದಿದ್ದರು. ಆದರೂ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದ ಕಾರಣ ಇದೀಗ ಕಡಲ್ಕೊರೆತ ಮತ್ತಷ್ಟು ತೀವ್ರಗೊಂಡು ಭೂಭಾಗ ಸಮುದ್ರದಲ್ಲಿ ಕೊಚ್ಚಿಕೊಂಡು ಹೋಗುತ್ತಿದೆ ಎಂದು ಸ್ಥಳೀಯರಾದ ಯಶೋಧರ್ ಮಟ್ಟು ಆರೋಪಿಸಿದ್ದಾರೆ.