ಪ್ರಶಸ್ತಿ ಸ್ವೀಕರಿಸುತ್ತಿರುವ ಅನೀಶಾ ಆರೋಲ್ ಡಿಸೋಜ.
ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಯೂತ್ ಗೇಮ್ಸ್ ಕೌನ್ಸಿಲ್ ಆಫ್ ಇಂಡಿಯಾ ದೆಹಲಿಯ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ಓಪನ್ ಯೂತ್ ಗೇಮ್ಸ್‌ನಲ್ಲಿ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಹಾಗೂ ಎಸ್‌ಡಿಎಂ ಕ್ರೀಡಾ ಸಂಘದ ವಿದ್ಯಾರ್ಥಿನಿ ಅನೀಶಾ ಆರೋಲ್ ಡಿಸೋಜ ಗುಂಡೆಸೆತ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿರುವ ಅನೀಶಾ ಮಾ.26ರಿಂದ 30ರವರೆಗೆ ನೇಪಾಳದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯಮಟ್ಟದ ಯೂತ್ ಗೇಮ್ಸ್‌ಗೆ ಆಯ್ಕೆಯಾಗಿದ್ದಾರೆ.
ಜಿಲ್ಲಾಮಟ್ಟದಲ್ಲಿ ನೂತನ ಕೂಟ ದಾಖಲೆ: 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅನೀಶ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಸ್ಕೂಲ್ ಒಲಿಂಪಿಕ್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಗುಂಡೆಸೆತ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಮೈಸೂರಿನಲ್ಲಿ ಆಯೋಜಿಸಲಾದ ರಾಜ್ಯಮಟ್ಟದ ಕಿಡ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲೂ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದರು. ಪಂಜದಲ್ಲಿ ನಡೆದ ದ.ಕ. ಜಿಲ್ಲಾಮಟ್ಟದ ಅಥ್ಲೆಟಿಕ್ಸ್‌ನಲ್ಲಿ 17 ವಯೋಮಾನದ ಬಾಲಕಿಯರ ಗುಂಡು ಎಸೆತದಲ್ಲಿ ಬೆಳ್ತಂಗಡಿ ತಾಲೂಕನ್ನು ಪ್ರತಿನಿಧಿಸಿ ಸುಮಾರು 11.43 ಮೀ. ದೂರಕ್ಕೆ ಎಸೆದು ಕೂಟದಲ್ಲೇ ನೂತನ ದಾಖಲೆ ನಿರ್ಮಿಸಿದ್ದರು.
ಚಿಕ್ಕಮಗಳೂರು ಜಿಲ್ಲೆಯ ಬಸರಿಕಟ್ಟೆಯ ಕ್ಲೆಮೆಂಟ್ ಡಿಸೋಜ ಮತ್ತು ಆಶಾ ಡಿಸೋಜ ದಂಪತಿ ಮಗಳಾದ ಅನೀಶಾ ಎರಡು ವರ್ಷ ಸತತವಾಗಿ ಜಾರ್ಖಂಡ್ ಹಾಗೂ ಲಕ್ನೋದಲ್ಲಿ ನಡೆದ ಅಂಡರ್ 14 ವಿಭಾಗದ ರಾಷ್ಟ್ರಮಟ್ಟದ ಗುಂಡು ಎಸೆತದಲ್ಲಿ 4ನೇ ಸ್ಥಾನ ಪಡೆದಿದ್ದರು. ಜತೆಗೆ ಎರಡು ಬಾರಿ ರಾಜ್ಯಮಟ್ಟದ ಚಕ್ರ ಎಸೆತದಲ್ಲಿ ಭಾಗವಹಿಸಿದ್ದಾರೆ. ಉಜಿರೆಯ ಎಸ್‌ಡಿಎಂ ಪಪೂ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ಸಂದೇಶ್ ಬಿ.ಪೂಂಜ ಹಾಗೂ ಶಾಲೆಯ ದೈಹಿಕ ಶಿಕ್ಷಕ ಸುಭಾಷ್‌ಚಂದ್ರ ತರಬೇತಿ ನೀಡಿದ್ದಾರೆ.
ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳು ಶಿಸ್ತು, ಸಂಸ್ಕಾರ, ಮೌಲ್ಯಯುತ ಮತ್ತು ಗುಣಮಟ್ಟದ ಶಿಕ್ಷಣ ನೀಡುವುದರ ಜತೆಗೆ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಕ್ರೀಡೆಗೂ ವಿಶೇಷ ಪ್ರೋತ್ಸಾಹ ಮತ್ತು ಸಹಕಾರ ನೀಡುತ್ತಿವೆ. ಈಗಾಗಲೇ ನೂರಾರು ಮಂದಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಅನೀಶಾ ಸಾಧನೆ ಎಸ್‌ಡಿಎಂ ಸಂಸ್ಥೆಯ ಸಾಧನೆಯ ಗರಿಮೆ ಹೆಚ್ಚಿಸಿದೆ.
ಮಗಳು ಚಿಕ್ಕಮಗಳೂರಿನ ಚಿಕ್ಕ ಹಳ್ಳಿಯಿಂದ ದೆಹಲಿ ತಲುಪಿ ಇಂದು ಭಾರತ ಪ್ರತಿನಿಧಿಸುವ ಸಲುವಾಗಿ ನೇಪಾಳದತ್ತ ಹೆಜ್ಜೆಹಾಕುತ್ತಿರುವುದು ಹೆಮ್ಮೆ ತಂದಿದೆ. ಈ ಸಾಧನೆ ಶ್ರೀ ಧರ್ಮಸ್ಥಳ ಶಿಕ್ಷಣ ಸಂಸ್ಥೆಯ ಶಾಲೆ ಹಾಗು ಕ್ರೀಡಾ ಸಂಘದಿಂದ ಸಾಧ್ಯವಾಗಿದೆ. ಸಂಸ್ಥೆಯಿಂದ ನಿರಂತರ ದೊರೆಯುತ್ತಿರುವ ಶಿಕ್ಷಕರ ಪ್ರೋತ್ಸಾಹ, ತರಬೇತುದಾರರ ಮಾರ್ಗದರ್ಶನ, ಆಡಳಿತ ಮಂಡಳಿಗೆ ಕೃತಜ್ಞತೆ ಸಲ್ಲಿಸುತ್ತೇವೆ.