ಭಾರತೀಯ ವೈದ್ಯಪದ್ಧತಿ ರಾಷ್ಟ್ರೀಯ ಆಯೋಗದ ಅಧ್ಯಕ್ಷೆ ಡಾ. ಮನೀಷಾ ಉಪೇಂದ್ರ ಕೊಥೇಕರ್ ಉದ್ಘಾಟಿಸಿದರು.  
ಉಡುಪಿ

ಮೂಲ ಆಯುರ್ವೇದ ಪದ್ಧತಿಯಂತೆ ರೋಗನಿರ್ಣಯ ಅಗತ್ಯ: ಡಾ. ಮನೀಷಾ

ಆಟೋಇಮ್ಯೂನ್​ ಕಾಯಿಲೆಗಳ ನಿರ್ವಹಣೆಯಲ್ಲಿ ಆಯುರ್ವೇದದ ವೈಜ್ಞಾನಿಕ ಸಾಧ್ಯತೆ ಬಗ್ಗೆ ಅನ್ವೇಷಣೆ ನಿಟ್ಟಿನಲ್ಲಿ ಕುತ್ಪಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಆಯೋಜಿಸಿದ್ದ ಕ್ಷಮತ್ವಂ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ

ಉಡುಪಿ: ಆಟೋ ಇಮ್ಯೂನ್​ ಕಾಯಿಲೆಗಳ ಚಿಕಿತ್ಸೆಯಲ್ಲಿ ಆಯುರ್ವೇದ ವೈದ್ಯರು ಕೇವಲ ರೋಗಲಕ್ಷಣಗಳ ಆಧಾರದ ಮೇಲೆ ಚಿಕಿತ್ಸೆ ನೀಡದೆ, ಆಯುರ್ವೇದದ ಮೂಲ ಸಿದ್ಧಾಂತಗಳ ಪ್ರಕಾರ ರೋಗರ್ನಿಣಯ ಮಾಡುವುದು ಅತ್ಯಗತ್ಯ ಎಂದು ಭಾರತೀಯ ವೈದ್ಯಪದ್ಧತಿ ರಾಷ್ಟ್ರೀಯ ಆಯೋಗದ ಅಧ್ಯಕ್ಷೆ ಡಾ. ಮನೀಷಾ ಉಪೇಂದ್ರ ಕೊಥೇಕರ್​ ಹೇಳಿದರು.

ಬುಧವಾರ ಭಾವಪ್ರಕಾಶ ಸಭಾಂಗಣದಲ್ಲಿ ಆಟೋಇಮ್ಯೂನ್​ ಕಾಯಿಲೆಗಳ ನಿರ್ವಹಣೆಯಲ್ಲಿ ಆಯುರ್ವೇದದ ವೈಜ್ಞಾನಿಕ ಸಾಧ್ಯತೆ ಬಗ್ಗೆ ಅನ್ವೇಷಣೆ ನಿಟ್ಟಿನಲ್ಲಿ ಕುತ್ಪಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಆಯೋಜಿಸಿದ್ದ ಕ್ಷಮತ್ವಂ 2026 ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದರು.

ಅನ್ಯ ವೈದ್ಯಕಿಯ ಪದ್ಧತಿಯ ರೋಗರ್ನಿಣಯವನ್ನು ಯಥಾವತ್ತಾಗಿ ಸ್ವೀಕರಿಸಿ ಚಿಕಿತ್ಸೆ ನೀಡಿದರೆ ಅದು ಕೇವಲ ಲಕ್ಷಣಾಧಾರಿತ ಚಿಕಿತ್ಸೆಯಾಗುತ್ತದೆ. ಅದಕ್ಕೆ ಬದಲಾಗಿ 'ದಶವಿಧ ಪರೀಕ್ಷಾ' ವಿಧಾನದ ಮೂಲಕ ರೋಗರ್ನಿಣಯ ಮಾಡಿ ಚಿಕಿತ್ಸೆ ನೀಡಿದರೆ ರೋಗಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಸಂಯೋಜಿತ ಆರೋಗ್ಯ ರಕ್ಷಣೆ ಮತ್ತು ಆಯುರ್ವೇದ

ಇಂದಿನ ದಿನಗಳಲ್ಲಿ ಸ್ವಯಂ ನಿರೋಧಕ ಕಾಯಿಲೆಗಳು ಜಾಗತಿಕವಾಗಿ ದೊಡ್ಡ ಸವಾಲಾಗಿ ಪರಿಣಮಿಸಿವೆ. ಅಲೋಪಥಿಯಲ್ಲಿ ಈ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆಯುತ್ತಿವೆ. ಆದರೆ ಸಂಯೋಜಿತ ಆರೋಗ್ಯ ರಕ್ಷಣೆಯಲ್ಲಿ ಆಯುರ್ವೇದದ ಕೊಡುಗೆ ಅತ್ಯಂತ ಪ್ರಮುಖವಾಗಿದೆ. ಆಯುರ್ವೇದದ ಸಾಂಪ್ರದಾಯಿಕ ಜ್ಞಾನವನ್ನು ಆಧುನಿಕ ವೈಜ್ಞಾನಿಕ ಸಂಶೋಧನೆ ಹಾಗೂ ಜಾಗತಿಕ ಆರೋಗ್ಯ ಸೇವೆಗಳೊಂದಿಗೆ ಸಂಯೋಜಿಸುವ ಅಗತ್ಯವಿದೆ ಎಂದು ಹೇಳಿದರು.

ಆಯುರ್ವೇದ ಸಿದ್ಧಾಂತ ಆಧಾರದಲ್ಲೇ ಸಂಶೋಧನೆ

ಕೇಂದ್ರ ಆಯುಷ್​ ಇಲಾಖೆ ಆಯುರ್ವೇದ ಸಲಹೆಗಾರ ಡಾ. ಕೌಸ್ತುಭ್​ ಉಪಾಧ್ಯಾಯ ಮಾತನಾಡಿ, ಆಯುರ್ವೇದದಲ್ಲಿ ತಿಳಿಸಲಾಗಿರುವ ಮೂಲ ತತ್ವ ಹಾಗೂ ಸಿದ್ಧಾಂತಗಳಿಗೆ ಧಕ್ಕೆಯಾಗದಂತೆ ವೈಜ್ಞಾನಿಕ ಸಂಶೋಧನೆಗಳು ನಡೆಯಬೇಕಾದ ಅಗತ್ಯವಿದೆ. ಇಂದು ವ್ಯಾಪಕವಾಗಿ ಚರ್ಚೆಯಾಗುತ್ತಿರುವ ಆಟೋಇಮ್ಯೂನ್​ ಕಾಯಿಲೆಗಳ ಕಲ್ಪನೆ ಆಯುರ್ವೇದಕ್ಕೆ ಹೊಸದೇನಲ್ಲ. ಬೃಹತ್ರಯಿ ಹಾಗೂ ಮಾಧವ ನಿಧಾನದಂತಹ ಪ್ರಾಚಿನ ಗ್ರಂಥಗಳಲ್ಲಿ ಈ ಬಗ್ಗೆ ವಿಸ್ತಾರವಾಗಿ ವಿವರಿಸಲಾಗಿದೆ. ನಮ್ಮ ಜೀವನಶೈಲಿ ಬದಲಾದಂತೆ ರೋಗಗಳ ಸ್ವರೂಪವೂ ಬದಲಾಗುತ್ತಾ ಬಂದಿದೆ ಎಂದರು.

ಎಸ್​ಡಿಎಂ ಆಯುರ್ವೇದ ಸಂಸ್ಥೆಗಳ ನಿರ್ದೇಶಕ ಪ್ರೊ. ಡಾ. ಪ್ರಸನ್ನ ಎನ್​. ರಾವ್​ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ರಾಜ್ಯ ಆಯುಷ್​ ಇಲಾಖೆಯ ಆಯುಕ್ತ ಡಾ. ಸುನಿಲ್​ ಪನ್ವಾರ್​, ಆಯುರ್ವೇದ ರಷ್ಯಾ&ಇಂಡಿಯಾ ಅಸೋಸಿಯೇಶನ್​ ಅಧ್ಯಕ್ಷೆ ಡಾ. ಅನಿತಾ ಕರಿಲಿಯೊ ಅರ್ಕಾಸ್​, ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಡಾ. ಪ್ರಸನ್ನ ಎನ್​. ಮೊಗಸಾಲೆ ಹಾಗೂ ಡಾ. ಅರ್ಹಂತ್​ ಕುಮಾರ್​ ಎ. ಉಪಸ್ಥಿತರಿದ್ದರು.

ಸಭೆಯಲ್ಲಿ ಎಸ್​ಡಿಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಸಂದೇಶವನ್ನು ವಾಚಿಸಲಾಯಿತು. ಪ್ರೊಫೆಸರ್​ ಎಮೆರಿಟಸ್​ ಡಾ. ಶ್ರೀನಿವಾಸ್​ ಹೆಜಮಾಡಿ ಸಮ್ಮೇಳನದ ಮುಖ್ಯ ಭಾಷಣ ಮಾಡಿದರು. ಎಸ್​ಡಿಎಂ ಆಯುರ್ವೇದ ಕಾಲೇಜು ಪ್ರಾಂಶುಪಾಲೆ ಡಾ. ಮಮತಾ ಕೆ.ವಿ. ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಡಾ. ಅರುಣ್​ ಹಾಗೂ ಡಾ. ಶುಭಾ ಪಿ.ಯು. ನಿರ್ವಹಿಸಿದರು. ಡಾ. ಅಶೋಕ್​ ಕುಮಾರ್​ ಬಿ.ಎನ್​. ವಂದಿಸಿದರು.

ಕಾಲೇಜಿನ ಉಪಪ್ರಾಂಶುಪಾಲರಾದ ಡಾ. ನಿರಂಜನ್​ ರಾವ್​ ಹಾಗೂ ಡಾ. ನಾಗರಾಜ್​ ಎಸ್​., ಹಾಸನ ಎಸ್​ಡಿಎಂ ಆಯುರ್ವೇದ ಕಾಲೇಜು ಪ್ರಾಂಶುಪಾಲೆ ಡಾ. ಶೈಲಜಾ, ಬೆಂಗಳೂರಿನ ಎಸ್​ಡಿಎಂ ಆಯುರ್ವೇದ ಕಾಲೇಜು ಪ್ರಾಂಶುಪಾಲ ಡಾ. ಜಗದೀಶ್​ ಕೆ. ಭಾಗವಹಿಸಿದ್ದರು.