‘ಬನವಾಸಿಯಲ್ಲೊಂದು ಸಿಂಧ್ಯಾ ಸಂಜೆ’ ಕಾರ್ಯಕ್ರಮ ಸಂದರ್ಭ ಪಿ.ಜಿ.ಆರ್.ಸಿಂಧ್ಯಾ ಅವರನ್ನು ಗೌರವಿಸಲಾಯಿತು. ಕರ್ನಾಟಕ ರಾಜ್ಯ ಸ್ಕೌಟಿಂಗ್ ಸಂಯೋಜಕ ಭರತ್ ರಾಜ್, ಬನವಾಸಿಯ ಡಾ.ರತ್ನಾಕರ ಮಲ್ಲಮೂಲೆ ಮೊದಲಾದವರಿದ್ದರು.  
ಉಡುಪಿ

ಸಾಮುದಾಯಿಕ ಚಿಂತನೆಗಳ ಪೂರಕ ಬೆಳವಣಿಗೆಗೆ ಸ್ಕೌಟಿಂಗ್

ಇಂದಿರಾ ಎನ್ ಕೆ
ಬದಿಯಡ್ಕ: ವ್ಯಕ್ತಿತ್ವ ರೂಪು ಮತ್ತು ಸಾಮುದಾಯಿಕ ಚಿಂತನೆಗಳ ಪೂರಕ ಬೆಳವಣಿಗೆಗೆ ಸ್ಕೌಟಿಂಗ್ ಅತ್ಯಂತ ಪರಿಣಾಮಕಾರಿ. ಆಧುನಿಕ ಸಮಾಜದ ಪಿಡುಗುಗಳಿಂದ ಮುಕ್ತರಾಗಿ ಸುಂದರ ಸಮಾಜ ಮುನ್ನಡೆಯಲು ವ್ಯಕ್ತಿ, ಸಮಾಜ ಮತ್ತು ರಾಷ್ಟ್ರ ಏಕಸೂತ್ರದಡಿ ಕಟಿಬದ್ಧವಾಗಬೇಕು. ಈ ನಿಟ್ಟಿನ ಸಮಗ್ರ ಚಿಂತನೆಗಳು ಸ್ಕೌಟಿಂಗ್ ಯೋಜನೆಯ ಆಶಯ ಎಂದು ಭಾರತ ಸ್ಕೌಟ್-ಗೈಡ್ಸ್‌ನ ಕರ್ನಾಟಕ ಆಯುಕ್ತ, ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ತಿಳಿಸಿದರು.
ಗುರುವಾರ ನೀರ್ಚಾಲು ಸಮೀಪದ ಬನವಾಸಿಗೆ ನೀಡಿದ ವಿಶೇಷ ಭೇಟಿಯ ಸಂದರ್ಭ ಸಾರ್ವಜನಿಕರೊಂದಿಗೆ ನಡೆಸಿದ ‘ಬನವಾಸಿಯಲ್ಲೊಂದು ಸಿಂಧ್ಯಾ ಸಂಜೆ’ ಸಂವಾದದಲ್ಲಿ ಮಾತನಾಡಿದರು.
ಹೊ.ವೆ.ಶೇಷಾದ್ರಿಯಂತವರಿಂದ ಪ್ರೇರಣೆ ಪಡೆದು ಸಕ್ರಿಯ ರಾಜಕಾರಣದಿಂದ ದೂರವಿರಲು ನಿರ್ಧರಿಸಿ ಬಳಿಕದ ತಮ್ಮ ಸ್ಕೌಟಿಂಗ್ ಯಾತ್ರೆಯ ಬಗ್ಗೆ ಸಮಗ್ರವಾಗಿ ಅವರು ಸಂವಾದದಲ್ಲಿ ವಿವರಿಸಿದರು. ನಿರಾಡಂಬರ, ನಿರ್ಗರ್ವ, ಸರಳ ಬದುಕು, ಸ್ವಾವಲಂಬನೆಯ ದಿನಚರಿಗಳ ಬಗ್ಗೆ ಮಾತನಾಡಿದರು. ಮಲ್ಲಮೂಲೆ ಕುಟುಂಬ, ಬನವಾಸಿ ಹಾಗೂ ಕಸಾಪ ಕೇರಳ ಗಡಿನಾಡ ಘಟಕದ ವತಿಯಿಂದ ಸಿಂಧ್ಯಾ ಅವರನ್ನು ಗೌರವಿಸಲಾಯಿತು.
ಕರ್ನಾಟಕ ರಾಜ್ಯ ಸ್ಕೌಟಿಂಗ್ ಸಂಯೋಜಕ ಭರತ್ ರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬನವಾಸಿಯ ಡಾ.ರತ್ನಾಕರ ಮಲ್ಲಮೂಲೆ ಸ್ವಾಗತಿಸಿದರು. ಕೃತಿ ಮಲ್ಲಮೂಲೆ ಪ್ರಾರ್ಥಿಸಿದರು.

ಮಲಯಾಳ ಭಾಷಾ ಮಸೂದೆ ಚರ್ಚೆ

ಕನ್ನಡ ಭಾಷಿಗರ ಮೇಲಿನ ಸವಾಲುಗಳ ಬಗೆಗೆ ಕರ್ನಾಟಕ ಸರ್ಕಾರದೊಂದಿಗೆ ಚರ್ಚಿಸಿ ಕೇರಳ ಮಲಯಾಳ ಭಾಷಾ ಮಸೂದೆ ಗಡಿನಾಡ ಕನ್ನಡಿಗರ ಮೇಲೆ ವ್ಯತಿರಿಕ್ತ ಪರಿಣಾಮ ಬೀರದಂತಹ ಕ್ರಮಕ್ಕೆ ಚರ್ಚಿಸಲಾಗುವುದು ಎಂದು ಸಿಂಧ್ಯಾ ತಿಳಿಸಿದರು.