ಶಾರದಾ ವಿದ್ಯಾನಿಕೇತನ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿಗಳು ನಡೆಸಿದ ತರಕಾರಿ ಮಾರಾಟದ ಸಂದರ್ಭ ಸಂಸ್ಥೆ ಅಧ್ಯಕ್ಷ ಡಾ.ಎಂ.ಬಿ.ಪುರಾಣಿಕ್, ನಿರ್ದೇಶಕ ಸಮೀರ್ ಪುರಾಣಿಕ್ ಮೊದಲಾದವರು ಉಪಸ್ಥಿತರಿದ್ದರು. 
ಉಡುಪಿ

ತಾತ್ಕಾಲಿಕ ಮಾರುಕಟ್ಟೆಯಾದ ಶಾಲಾವರಣ

ಇಂದಿರಾ ಎನ್ ಕೆ
ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಬಗೆ ಬಗೆಯ ತರಕಾರಿಗಳು, ದರ ಹೇಳುತ್ತಾ ಗ್ರಾಹಕರನ್ನು ಸೆಳೆಯಲು ಪ್ರಯತ್ನಿಸುತ್ತಿರುವ ಮಕ್ಕಳು.... ಇದು ಯಾವುದೇ ಮಾರುಕಟ್ಟೆಯ ಕಥೆಯಲ್ಲ. ತಲಪಾಡಿಯ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಶಾಲೆಯಲ್ಲಿ ಕಂಡುಬಂದ ಅಪೂರ್ವ ಚಿತ್ರಣ!.
ಮಕ್ಕಳಲ್ಲಿ ಕೃಷಿ ಬೆಳೆಯುವ, ವ್ಯಾಪಾರದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಶಾಲೆಯಲ್ಲಿ ನಡೆದ ಕಾರ್ಯಕ್ರಮ ವಿಶೇಷವಾಗಿ ಆಕರ್ಷಣೆಗೆ ಪಾತ್ರವಾಯಿತು. ಮಕ್ಕಳಲ್ಲಿ ಕೃಷಿ ಬಗ್ಗೆ ಜಾಗೃತಿ, ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಈ ಶಾಲೆ ತೋಟದಲ್ಲಿ ಕೃಷಿ ಚಟುವಟಿಕೆಗಳನ್ನು ಹಿಂದಿನಿಂದಲೂ ನಡೆಸಿಕೊಂಡು ಬರಲಾಗಿದೆ. ಅದರ ಭಾಗವಾಗಿ ಈ ಬಾರಿಯ ವಿದ್ಯಾರ್ಥಿಗಳು ತಾವೇ ಬೆಳೆದ ವಿವಿಧ ಬಗೆಯ ತರಕಾರಿಗಳನ್ನು ತಾವೇ ಮಾರಾಟ ಮಾಡಿ ಗಮನ ಸೆಳೆದರು. ಬೆಂಡೆಕಾಯಿ, ಬದನೆಕಾಯಿ, ಕಾಯಿ ಮೆಣಸು, ಸೌತೆಕಾಯಿ, ಬಸಳೆ, ತೊಂಡೆಕಾಯಿ, ಕುಂಬಳಕಾಯಿ, ಹಲಸಿನಕಾಯಿ, ಸೋರೆಕಾಯಿ ಮುಂತಾದ ತರಕಾರಿಗಳನ್ನು ವಿದ್ಯಾರ್ಥಿಗಳೇ ಕಟಾವು ಮಾಡಿ ಮಾರಾಟಕ್ಕೆ ಸಿದ್ಧಪಡಿಸಿದರು.
ಶಿಕ್ಷಕ-ಶಿಕ್ಷಕೇತರರು ವಿದ್ಯಾರ್ಥಿಗಳ ಪ್ರಯತ್ನ ಮೆಚ್ಚಿ ಹೆಚ್ಚಿನ ಸಂಖ್ಯೆಯಲ್ಲಿ ತರಕಾರಿ ಖರೀದಿಸಿದರು. ಸಂಸ್ಥೆ ಅಧ್ಯಕ್ಷ ಡಾ.ಎಂ.ಬಿ.ಪುರಾಣಿಕ್. ನಿರ್ದೇಶಕ ಸಮೀರ್ ಪುರಾಣಿಕ್ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದರು. ಈ ಕಾರ್ಯಕ್ರಮದ ಮೂಲಕ ಮಕ್ಕಳಿಗೆ ಕೃಷಿಯ ಮಹತ್ವ, ವ್ಯಾಪಾರ, ಹಣಕಾಸಿನ ನಿರ್ವಹಣೆ, ವ್ಯಾಪಾರ ಕೌಶಲಗಳ ಬಗ್ಗೆ ಪ್ರಾಯೋಗಿಕ ಜ್ಞಾನ ಲಭಿಸಿತು.

ಶಿಕ್ಷಕ-ಶಿಕ್ಷಕೇತರರಿಗೆ ಮಾರಾಟ

ಶಾಲಾಡಳಿತ ಮಂಡಳಿ ಸಹಕಾರದಲ್ಲಿ, ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಶಾಲೆ ಆವರಣದಲ್ಲಿ ಟಾರ್ಪಾಲು ಹಾಕಿ ತರಕಾರಿಗಳನ್ನು ಮಾರುಕಟ್ಟೆ ಮಾದರಿಯಲ್ಲಿ ರಾಶಿ ಹಾಕಿದರು. ವಿದ್ಯಾರ್ಥಿಗಳು ತಾವೇ ವ್ಯಾಪಾರಿಗಳ ರೀತಿಯಲ್ಲಿ ಪ್ರತ್ಯೇಕವಾಗಿ ಕುಳಿತು ಗ್ರಾಹಕರನ್ನು ತಮ್ಮತ್ತ ಸೆಳೆದು ತೂಕ ಮಾಡಿ ಪ್ಯಾಕ್ ಮಾಡಿ ಬೆಲೆ ನಿಗದಿಪಡಿಸಿ ಶಿಕ್ಷಕ-ಶಿಕ್ಷಕೇತರರಿಗೆ ಮಾರಾಟ ಮಾಡಿದರು.