ಮೂಲ್ಕಿ ತಾಲೂಕು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಕುಂದುಕೊರತೆ ಸಮಿತಿ ಸಭೆ ನಡೆಯಿತು. ತಹಸೀಲ್ದಾರ್ ಪೃಥ್ವಿ ಸಾನಿಕಂ, ತಾಪಂ ಕಾರ್ಯನಿರ್ವಹಣಾಧಿಕಾರಿ ಗುರುದತ್ ಮೊದಲಾದವರಿದ್ದರು.  
ಉಡುಪಿ

ಪರಿಶಿಷ್ಟರಿಗೆ 25 ವರ್ಷದಿಂದ ಮನೆಯಿಲ್ಲ

ವಿಜಯವಾಣಿ ಸುದ್ದಿಜಾಲ ಮೂಲ್ಕಿ

ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಮೂಲ್ಕಿ ತಾಲೂಕು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಕುಂದು-ಕೊರತೆ ಸಮಿತಿ ಸಭೆ ಮೂಲ್ಕಿ ಪ್ರಜಾಸೌಧದಲ್ಲಿ ತಹಸೀಲ್ದಾರ್ ಪೃಥ್ವಿ ಸಾನಿಕಂ ಅಧ್ಯಕ್ಷತೆಯಲ್ಲಿ ನಡೆಯಿತು. ಪರಿಶಿಷ್ಟರ ವಸತಿ, ಸಮುದಾಯ ಭವನ ಕಾಮಗಾರಿ, ಚರಂಡಿ, ರಸ್ತೆ ಮುಂತಾದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಿತು.
ಪಡುಪಣಂಬೂರು ಗ್ರಾಪಂ ವ್ಯಾಪ್ತಿಯ ಬೆಳ್ಳಾಯರು ಗ್ರಾಮದಲ್ಲಿ ಪರಿಶಿಷ್ಟ ಜಾತಿ ಕಾಲನಿಯವರಿಗೆ ಮನೆ ನಿರ್ಮಾಣಕ್ಕಾಗಿ ಜಾಗ ನೀಡಲಾಗಿದ್ದು, ಇಲ್ಲಿ ಮೂಲಸೌಲಭ್ಯದ ಸಮಸ್ಯೆಗಳಿವೆ. ಇಲೆಕ್ಟ್ರಿಕ್ ಲೈನ್, ಬೀದಿದೀಪದ ವ್ಯವಸ್ಥೆ ಇಲ್ಲದಿರುವುದರಿಂದ 25 ವರ್ಷಗಳಿಂದ ಮನೆ ಕಟ್ಟಲು ಸಾಧ್ಯವಾಗಿಲ್ಲ, ಈ ಬಗ್ಗೆ ತಕ್ಷಣ ಗಮನಹರಿಸಬೇಕು ಎಂಬುದಾಗಿ ಸದಾಶಿವ ಎಂಬುವರು ಒತ್ತಾಯಿಸಿದರು. ತೋಕೂರು ಲೈಟ್‌ಹೌಸ್ ಬಳಿ ಅರ್ಧಕ್ಕೆ ನಿಂತಿರುವ ಸಮುದಾಯ ಭವನದ ಕಾಮಗಾರಿ ಪೂರ್ಣಗೊಳಿಸಲು ತಹಸೀಲ್ದಾರ್ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಬೇಕೆಂದು ಆಗ್ರಹಿಸಿದರು.
ಸಚ್ಚಿದಾನಂದ ಗೇರುಕಟ್ಟೆ ಮಾತನಾಡಿ, ಗೇರುಕಟ್ಟೆಯಿಂದ ಮೂಲ್ಕಿ ವೆಂಕಟರಮಣ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಚರಂಡಿ ವ್ಯವಸ್ಥೆ ಇಲ್ಲದೆ ಹಲವಾರು ವರ್ಷಗಳಿಂದ ಕೆಟ್ಟುಹೋಗಿದೆ. ದುರಸ್ತಿ ಮಾಡಲು ಮನವಿ ನೀಡಿದರೂ ಇದುವರೆಗೂ ದುರಸ್ತಿಯಾಗಿಲ್ಲ. ಈ ಭಾಗದಲ್ಲಿ ಹಲವಾರು ಶಾಲೆ-ಕಾಲೇಜುಗಳಿದ್ದು ಮಕ್ಕಳು, ವಾಹನ ಸವಾರರಿಗೆ ಓಡಾಡಲು ತೊಂದರೆಯಾಗಿದೆ. ಮೂಲ್ಕಿ ನಪಂ ವ್ಯಾಪ್ತಿಯ ಅಮೃತಾನಂದಮಯಿ ನಗರದ ಅಂಬೇಡ್ಕರ್ ಭವನ ಸೋರುತ್ತಿದೆ. ಈ ಭವನದಲ್ಲಿ ಅಂಗನವಾಡಿ ಇದ್ದು, ಮಕ್ಕಳು ಅಪಾಯದ ಸ್ಥಿತಿಯಲ್ಲಿದ್ದಾರೆ. ದುರಸ್ತಿ ಮಾಡಲಾಗದಿದ್ದಲ್ಲಿ ಅಂಗನವಾಡಿಯನ್ನು ಸ್ಥಳಾಂತರಿಸಿ ಎಂದರು.
ಪ್ರತಿ ಬಾರಿ ಸಭೆಯಲ್ಲಿ ಭರವಸೆಗಳು ಮಾತ್ರ ನೀಡುತ್ತಾರೆ ವಿನಃ ಸಮಸ್ಯೆ ಸರಿಪಡಿಸುವುದಿಲ್ಲ. ಮುಂದಿನ ದಿನಗಳಲ್ಲಿ ಸರಿಯಾಗದಿದ್ದರೆ ಸಾಮೂಹಿಕವಾಗಿ ಸಭೆ ಬಹಿಷ್ಕರಿಸುತ್ತೇವೆ. ತಾಲೂಕುವಾರು ಎಸ್ಸಿ/ಎಸ್ಟಿ ಸಭೆಗೆ ತಾಲೂಕು ವ್ಯಾಪ್ತಿಯ ಎಲ್ಲ ವಿಭಾಗದ ಅಧಿಕಾರಿಗಳು ಬರಬೇಕು. ಸಮಸ್ಯೆ ಗೊತ್ತಿಲ್ಲದ ಅಧಿಕಾರಿಗಳು ಬಂದರೆ ಸಭೆ ಕಾಟಾಚಾರಕ್ಕೆ ನಡೆಯುತ್ತದೆ ಎಂದು ಮಂಜುನಾಥ್ ಆರ್.ಕೆ. ಹೇಳಿದರು. ಮುಂದಿನ ಸಭೆಗೆ ಎಲ್ಲ ಇಲಾಖೆಗಳ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಲು ತಹಸೀಲ್ದಾರ್ ಪೃಥ್ವಿ ಸಾನಿಕಂ ಸೂಚನೆ ನೀಡಿದರು.
ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕರ ಜತೆ ಸೌಜನ್ಯದಿಂದ ವರ್ತಿಸುವುದಿಲ್ಲ ದಬ್ಬಾಳಿಕೆ ನಡೆಸಲಾಗುತ್ತಿದೆ ಎಂಬ ಸುರೇಶ್ ಬೆಳ್ಳಾಯರು ದೂರಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಹಸೀಲ್ದಾರ್ ತಿಳಿಸಿದರು. ಮೂಲ್ಕಿ-ಕಿನ್ನಿಗೋಳಿ ರಾಜ್ಯ ಹೆದ್ದಾರಿಗೆ ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸದೆ ರಸ್ತೆ ಹಾಳಾಗಿದೆ. ಕೂಡಲೇ ದುರಸ್ತಿ ಮಾಡಬೇಕು. ಇಲ್ಲದಿದ್ದರೆ ಮೇಲಧಿಕಾರಿಗಳಿಗೆ ದೂರು ಸಲ್ಲಿಸಲಾಗುವುದು ಂದು ಮಂಜುನಾಥ್ ಆರ್.ಕೆ. ಆಕ್ರೋಶ ವ್ಯಕ್ತಪಡಿಸಿದರು.
ತಾಪಂ ಕಾರ್ಯನಿರ್ವಹಣಾಧಿಕಾರಿ ಗುರುದತ್, ಉಪತಹಸೀಲ್ದಾರ್ ದಿಲೀಪ್ ರೋಡ್ಕರ್, ಕಂದಾಯ ಇಲಾಖೆಯ ಮೋಹನ್ ಮತ್ತಿತರ ಅಧಿಕಾರಿಗಳಿದ್ದರು.

ಚರಂಡಿಯಲ್ಲಿ ನೀರಿನ ಪೈಪ್‌ಲೈನ್

ಹಿಂದುಳಿದ ವರ್ಗದವರು ವಾಸಿಸುತ್ತಿರುವ ಲಿಂಗಪ್ಪಯ್ಯ ಕಾಡು ವಿಜಯಪುರ ಕಾಲನಿಯ ಚರಂಡಿಯಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಹಾದುಹೋಗಿದೆ. ರಸ್ತೆ ಅವ್ಯವಸ್ಥೆ, ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಕುಡಿಯುವ ನೀರಿನ ಸಂಪ್ ಸ್ವಚ್ಛ ಮಾಡುತ್ತಿಲ್ಲ, ರೋಗದ ಭೀತಿ ಎದುರಾಗಿದೆ. ಈ ಬಗ್ಗೆ ಅನೇಕ ಬಾರಿ ಮೂಲ್ಕಿ ನಗರ ಪಂಚಾಯಿತಿಗೆ ದೂರು ನೀಡಿದ್ದರೂ ಇದುವರೆಗೂ ಸರಿಯಾಗಿಲ್ಲ ಎಂದು ಮೂಲ್ಕಿ ನಪಂ ಮಾಜಿ ಸದಸ್ಯ ಭೀಮಾ ಶಂಕರ್ ಹೇಳಿದರು.

ಅಪಾಯದಲ್ಲಿ 86 ವಸತಿಗಳು

ಅಮೃತಾನಂದಮಯಿ ನಗರದಲ್ಲಿ ಹಿಂದುಳಿದ ವರ್ಗಗಳ 86 ಮನೆಗಳು ಅಪಾಯದ ಸ್ಥಿತಿಯಲ್ಲಿವೆ. ಮಳೆ ನೀರು ತೋಡು ಹೂಳು ತುಂಬಿ ನೀರು ರಸ್ತೆಯಲ್ಲಿ ಹರಿಯುವ ಕಾರಣ ಈ ಭಾಗದ ಕಾಂಕ್ರೀಟ್ ರಸ್ತೆಗಳು ಪಾಚಿ ಹಿಡಿದಿದೆ. ಇಲ್ಲಿ ಅನೇಕ ಅಪಘಾತಗಳು ಸಂಭವಿಸಿವೆ. ಈ ಬಗ್ಗೆ ಸಂಬಂಧಪಟ್ಟ ಆಡಳಿತಕ್ಕೆ ಮನವಿ ಸಲ್ಲಿಸಿದರೂ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಗ್ರಾಮಸ್ಥ ಸಚ್ಚಿದಾನಂದ ಗೇರುಕಟ್ಟೆ ಗಮನ ಸೆಳೆದರು.

ಬೆಳ್ಳಂಬೆಳಗ್ಗೆ ಮದ್ಯ ಮಾರಾಟ

ಮೂಲ್ಕಿ ನಗರ, ಕೆ.ಎಸ್.ರಾವ್ ನಗರದ ಲಿಂಗಪ್ಪಯ್ಯ ಕಾಡಿನಲ್ಲಿ ಬೆಳ್ಳಂಬೆಳಗ್ಗೆ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ. ಈ ಬಗ್ಗೆ ಅನೇಕ ಬಾರಿ ಮೂಲ್ಕಿ ಪೊಲೀಸ್ ಠಾಣೆ, ಅಬಕಾರಿ ಇಲಾಖೆಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ಭೀಮಾಶಂಕರ್ ಆರ್.ಕೆ. ದೂರಿದರು. ಇದಕ್ಕೆ ಉತ್ತರಿಸಿದ ಅಬಕಾರಿ ಇಲಾಖೆ ಅಧಿಕಾರಿ, ನಾವು ಕಾರ್ಯಾಚರಣೆ ನಡೆಸುತ್ತೇವೆ. ಆರೋಪಿಗಳನ್ನು ಹಿಡಿದರೆ ಬಿಡಿಸಲು ನಿಮ್ಮ ನಾಯಕರೆ ಲಾಬಿ ನಡೆಸುತ್ತಾರೆ ಎಂದಾಗ ಸಭೆಯಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಯಿತು.