ಉಡುಪಿಯಲ್ಲಿ ನಡೆದ ಎಸ್ಸಿ, ಎಸ್ಟಿ ಹಿತ ರಕ್ಷಣಾ ಸಭೆಯಲ್ಲಿ ಸ್ವರೂಪಾ ಟಿ.ಕೆ. ಮಾತನಾಡಿದರು. ಪ್ರತೀಕ್ ಬಾಯಲ್, ಹರಿರಾಮ್ ಶಂಕರ್, ರುಥ್ರೇನ್ ಪಿ., ರಶ್ಮಿ ಇತರರಿದ್ದರು.
* ತಹಸೀಲ್ದಾರರಿಗೆ ಜಿಲ್ಲಾಧಿಕಾರಿ ಸ್ವರೂಪಾ ಸೂಚನೆ
* ಉಡುಪಿಯಲ್ಲಿ ಎಸ್ಸಿ, ಎಸ್ಟಿ ಕುಂದು-ಕೊರತೆ ಸಭೆ
ಉಡುಪಿ: ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಕಲ್ಯಾಣ ಅಭಿವೃದ್ಧಿಗೆ ಸರ್ಕಾರ ಜಾರಿಗೆ ತಂದಿರುವ ಯೋಜನೆ, ಕಾರ್ಯಕ್ರಮ ಹಾಗೂ ವಿಶೇಷ ಕಾಯಿದೆಗಳನ್ನು ನಿಯಮಾನುಸಾರ ಅನುಷ್ಠಾನ ಮಾಡಬೇಕು. ತಾಲೂಕುಗಳಲ್ಲಿ ಲಭ್ಯವಿರುವ ಡಿಸಿ ಮನ್ನಾ ಜಾಗ ಗುರುತಿಸಿ ಭೂ ರಹಿತ ಜನರಿಗೆ ಹಂಚಿಕೆ ಮಾಡಲು ತಹಸೀಲ್ದಾರರು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಸೂಚಿಸಿದರು.
ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಮಂಗಳವಾರ (ಜು.28) ಆಯೋಜಿಸಿದ ಪ.ಜಾತಿ ಮತ್ತು ಪ.ಪಂಗಡದವರ ಹಿತ ರಕ್ಷಣಾ ಹಾಗೂ ಕುಂದು-ಕೊರತೆ ಸಭೆಯಲ್ಲಿ ಮಾತನಾಡಿದರು.
ದೇಗುಲ ಸಮಿತಿಯಲ್ಲಿ ನೀಡಿ ಅವಕಾಶ
ಜಿಲ್ಲೆಯಲ್ಲಿರುವ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಯಲ್ಲಿ ಈ ಜಾನಾಂಗದ ಸದಸ್ಯರನ್ನು ನೇಮಿಸಬೇಕು. ಅಲ್ಲದೆ, ಸರ್ಕಾರಿ ಯೋಜನೆಯ ಸೌಲಭ್ಯಗಳಿಗೆ ಆಯ್ಕೆಯಾದ ಹಾಗೂ ಸ್ವಉದ್ಯೋಗ ಕೈಗೊಳ್ಳಲು ಆರ್ಥಿಕ ನೆರವು ನೀಡಲು ಬ್ಯಾಂಕ್ಗಳಿಗೆ ಆಯಾ ಇಲಾಖೆಗಳು ಶಿಫಾರಸು ಮಾಡಬೇಕು. ಅವರ ಅರ್ಜಿ ಬಂದಾಗ ಆರ್ಥಿಕ ನೆರವು ನೀಡಲು ಸತಾಯಿಸಬಾರದು. ಈ ಬಗ್ಗೆ ಲೀಡ್ ಬ್ಯಾಂಕ್ ಅಧಿಕಾರಿಗಳು ಕ್ರಮ ವಹಿಸಬೇಕು ಎಂದರು.
ಅರ್ಹರಿಗೆ ನೀಡಿ ಜಾತಿ ಪ್ರಮಾಣ ಪತ್ರ
ಪರಿವಾರ ನಾಯಕ ಜಾತಿಯನ್ನು ಪ.ಪಂಗಡವೆಂದು ಪರಿಗಣಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಕೆಲವರು ಈ ಜಾತಿ ಪ್ರಮಾಣ ಪತ್ರ ಪಡೆದಿದ್ದು, ಇನ್ನೂ ಕೆಲವರು ಅರ್ಜಿ ಸಲ್ಲಿಸಿದರೂ ನೀಡುತ್ತಿಲ್ಲ ಎಂಬ ದೂರು ಬಂದಿದೆ. ತಹಸೀಲ್ದಾರರು ಅಂತಹ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ, ಅರ್ಹರಿಗೆ ಜಾತಿ ಪ್ರಮಾಣ ಪತ್ರ ನೀಡಬೇಕು ಎಂದರು.
'ಹೆಲ್ತ್ ಕಾರ್ಡ್' ವಿತರಣೆ
ಉಡುಪಿ ನಗರಸಭೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪ.ಜಾತಿ ಮತ್ತು ಪ.ಪಂಗಡದ 4,350ಕ್ಕೂ ಅಧಿಕ ಜನರಿಗೆ ಆರೋಗ್ಯ ವಿಮೆಯ 'ಹೆಲ್ತ್ ಕಾರ್ಡ್' ವಿತರಿಸಲಾಗಿದೆ. ಎಚ್ಡಿಎಫ್ಸಿ ಕಂಪನಿಗೆ ವಿಮಾ ಯೋಜನೆ ನೀಡಲಾಗಿದ್ದು ತಾಂತ್ರಿಕ ತೊಂದರೆ ಹಾಗೂ ಇನ್ನಿತರ ಕಾರಣದಿಂದ ಈ ಯೋಜನೆಯ ಲಾಭವನ್ನು ಸರಿಯಾಗಿ ಲಭಿಸುತ್ತಿಲ್ಲ. ಮುಂದಿನ ವರ್ಷ ವಿಮಾ ಹೆಲ್ತ್ ಕಾರ್ಡ್ ಕೊಡುವಾಗ ಸರಿಯಾದ ಕಂಪನಿಗಳಿಗೆ ನೀಡುವಂತೆ ನಗರಸಭೆಯ ಆಯುಕ್ತರು ಕ್ರಮ ವಹಿಸಬೇಕೆಂದು ಸೂಚಿಸಿದರು.
ಪ್ರಸ್ತಾವನೆ ಕೂಡಲೇ ಸಲ್ಲಿಸಿ
ಗ್ರಾಪಂಗಳಲ್ಲಿ ಶೇ.25ರ ಮೀಸಲು ಅನುದಾನದಲ್ಲಿ ಎಸ್ಸಿ, ಎಸ್ಟಿ ಸಮುದಾಯದವರಿಗೆ ಶವ ಸಂಸ್ಕಾರಕ್ಕಾಗಿ 5 ಸಾವಿರ ರೂ. ನೀಡಲಾಗುತ್ತಿತ್ತು. ಅದನ್ನು 15 ಸಾವಿರ ರೂ.ಗೆ ಹೆಚ್ಚಿಸಬೇಕೆಂಬ ಬೇಡಿಕೆಯಿದೆ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಎಂದರು. ಸಭೆಯಲ್ಲಿ ಜನಾಂಗದವರ ಅಭಿವೃದ್ಧಿಗಾಗಿ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಯಿತು.
ಸಭೆಯಲ್ಲಿ ಜಿಪಂ ಸಿಇಒ ಪ್ರತೀಕ್ ಬಾಯಲ್, ಎಸ್ಪಿ ಹರಿರಾಮ್ ಶಂಕರ್, ಡಿಎಫ್ಒ ರುಥ್ರೇನ್ ಪಿ., ಸಹಾಯಕ ಕಮಿಷನರ್ ರಶ್ಮಿ, ಎಎಸ್ಪಿ ಸುಧಾಕರ್ ನಾಯಕ್, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಅನಿತಾ ಮಡ್ಲೂರು, ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಸೀಲ್ದಾರರು, ಎಸ್ಸಿ, ಎಸ್ಟಿ ಮುಖಂಡರು ಉಪಸ್ಥಿತರಿದ್ದರು.
ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ
ಉಡುಪಿ ತಾಲೂಕಿನ ಲ್ಯಾಂಪ್ಸ್ ಸೊಸೈಟಿಯು 5 ದಶಕದಿಂದ ಕಾರ್ಯನಿರ್ವಹಿಸುತ್ತಿದ್ದು, ಕೊರಗ ಸಮುದಾಯದವರಿಗೂ ಇಲ್ಲಿ ಉದ್ಯೋಗಾವಕಾಶ ನೀಡಬೇಕೆಂಬ ಬೇಡಿಕೆ ಇದೆ. ಮುಂಧಿನ ದಿನಗಳಲ್ಲಿ ಆದ್ಯತೆಯ ಮೇಲೆ ಕೊರಗರಿಗೆ ಅವಕಾಶ ಕಲ್ಪಿಸಬೇಕು. ಪ.ಜಾತಿ, ಪ.ಪಂಗಡದವರು ವಾಸಿಸುವ ಕಾಲನಿಗಳಲ್ಲಿ ಅಭಿವೃದ್ಧಿ ಕಾಮಗಾರಿಗಾಗಿ ಸರ್ಕಾರ ಅನುದಾನ ಮೀಸಲಿಡುತ್ತದೆ. ಆದರೆ, ನಿಯಮಾನುಸಾರ ಅವರ ಕಾಲನಿಯಲ್ಲಿ ಕಾಮಗಾರಿ ಕೈಗೊಳ್ಳದೆ ಇನ್ನಿತರರು ವಾಸಿಸುವ ಪ್ರದೇಶದಲ್ಲಿ ಅಭಿವೃದ್ಧಿ ಕಾಮಗಾರಿ ಮಾಡುತ್ತಿದ್ದಾರೆಂಬ ದೂರು ಇದೆ. ಒಂದೊಮ್ಮೆ ಯಾವುದೇ ಅಧಿಕಾರಿ ನಿಯಮ ಉಲ್ಲಂಘಿಸಿ ಬೇರೆಡೆ ಕಾಮಗಾರಿ ಕೈಗೊಂಡಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿ ಎಚ್ಚರಿಕೆ ನೀಡಿದರು.
ಮಲ್ಪೆ ಭಾಗದಲ್ಲಿ ಎಸ್ಸಿ, ಎಸ್ಟಿಯ ನೂರಾರು ಕುಟುಂಬ ವಾಸಿಸುತ್ತಿವೆ. ಬೀಚ್ಗಳಲ್ಲಿ ವಾಣಿಜ್ಯ ಚಟುವಟಿಕೆ ಕೈಗೊಳ್ಳಲು ಪ್ರವಾಸೋದ್ಯಮ ಇಲಾಖೆಯ ಅಂಗಡಿ ಬಾಡಿಗೆ ಕೊಡುವಾಗ ಹಾಗೂ ವಾಟರ್ ಸ್ಪೋರ್ಟ್, ಪ್ರವಾಸಿ ದೋಣಿ ಮತ್ತಿತರ ಚಟುವಟಿಕೆಗಳ ಟೆಂಡರ್ಗಳಲ್ಲಿಯೂ ಮೀಸಲಾತಿ ಕಲ್ಪಿಸಲು ಬೇಡಿಕೆ ಇದೆ. ಮುಂಬರುವ ದಿನಗಳಲ್ಲಿ ಪರಿಗಣಿಸಿ ಅವಕಾಶ ಕಲ್ಪಿಸಬೇಕು.
— ಸ್ವರೂಪಾ ಟಿ.ಕೆ. ಉಡುಪಿ ಜಿಲ್ಲಾಧಿಕಾರಿ.