ಉಡುಪಿಯ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ನಡೆದ ಎಸ್ಸಿ, ಎಸ್ಟಿ ಸಮುದಾಯದವರ ಕುಂದು&ಕೊರತೆ ಸಭೆಯಲ್ಲಿ ಹರಿರಾಮ್ ಶಂಕರ್ ಮಾತನಾಡಿದರು. ಎಎಸ್ಪಿ ಸುಧಾಕರ್ ನಾಯಕ್ ಹಾಗೂ ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು.
* ಜಿಲ್ಲಾ ಪೊಲೀಸ್ ವರಿಷ್ಠ ಹರಿರಾಮ್ ಶಂಕರ್ ಮಾಹಿತಿ
* ಎಸ್ಸಿ, ಎಸ್ಟಿ ಸಮುದಾಯದ ಕುಂದು-ಕೊರತೆ ಸಭೆ
ಉಡುಪಿ: ಜಿಲ್ಲೆಯಲ್ಲಿ ಎಸ್ಸಿ, ಎಸ್ಟಿ ಸಮುದಾಯದವರು ಪ್ರಕರಣ ದಾಖಲಿಸಿದಾಗ ನ್ಯಾಯಯುತವಾಗಿ ಪರಿಹಾರ ದೊರೆಯುತ್ತಿಲ್ಲ ಎಂಬ ದೂರು ಇದೆ. ಅಲ್ಲದೆ, ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಲಿತರ ಏಳಿಗೆಗೆ ಸರ್ಕಾರದಿಂದ ನೀಡಲಾದ ಹಣ ದುರ್ಬಳಕೆ ಆಗಿರುವ ಕುರಿತು ಮಾಹಿತಿ ನೀಡಿದ್ದೀರಿ. ಈ ಬಗ್ಗೆ ಸೂಕ್ತ ತನಿಖೆ ನಡೆಸುವ ಕುರಿತು ಸಮಾಜ ಕಲ್ಯಾಣ ಇಲಾಖೆಯವರಿಗೆ ಸೂಚಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಹರಿರಾಂ ಶಂಕರ್ ತಿಳಿಸಿದರು.
ಉಡುಪಿಯ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಶನಿವಾರ (ಜು.18) ಆಯೋಜಿಸಿದ್ದ ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕುಂದು-ಕೊರತೆ ಸಭೆಯಲ್ಲಿ ಮಾತನಾಡಿದರು.
ವಿವಿಧ ಬೇಡಿಕೆಯಿಟ್ಟ ಮುಖಂಡರು
ಸಭೆಯಲ್ಲಿ ಪಾಲ್ಗೊಂಡಿದ್ದ ಸಮುದಾಯದ ಮುಖಂಡರು ಮಾತನಾಡಿ, ಜಿಲ್ಲೆಯಲ್ಲಿ ನಮ್ಮ ಸಮುದಾಯದವರು ಎದುರಿಸುವ ಸಮಸ್ಯೆಗೆ ಸಂಬಂಧಿಸಿ ಪೊಲೀಸ್ ಇಲಾಖೆಯವರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಇದೇ ರೀತಿಯ ಸಹಕಾರ ಮುಂದುವರಿಯಲಿ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆಯಲಿರುವ ವಿಜಿಲೆನ್ಸ್ ಕಮಿಟಿಯ ಸದಸ್ಯರನ್ನು ಬದಲಾಯಿಸಬೇಕು ಎಂದು ಮನವಿ ಮಾಡಿದರು.
ಡಿಸಿಆರ್ಇ ಠಾಣೆಯಲ್ಲಿಲ್ಲ ಸಿಬ್ಬಂದಿ
ತಮಿಳುನಾಡು ಮೂಲದವರು ಉಡುಪಿಯಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ. ಈ ಬಗ್ಗೆ ನಾವು ದೂರು ನೀಡಿದ್ದು, ಡಿಸಿಆರ್ಇ ಪೊಲೀಸ್ ಠಾಣೆಯವರು ಕ್ರಮ ಕೈಗೊಳ್ಳಬೇಕು. ದಲಿತರಿಗೆ ಸಹಾಯವಾಗಲು ಪ್ರತಿಯೊಂದು ಜಿಲ್ಲೆಯಲ್ಲೂ ಡಿಸಿಆರ್ಇ ಠಾಣೆ ಸ್ಥಾಪನೆಯಾಗಿದೆ. ಆದರೆ, ಸೂಕ್ತ ಅಧಿಕಾರಿ ಹಾಗೂ ಸಿಬ್ಬಂದಿ ನೇಮಕವಾಗಿಲ್ಲ. ಇದರಿಂದ ದಲಿತ ಸಮುದಾಯಕ್ಕೆ ನ್ಯಾಯ ಲಭಿಸಲು ವಿಳಂಬವಾಗುತ್ತಿದೆ. ಈ ಕುರಿತು ಸರ್ಕಾರದ ಗಮನ ಸೆಳೆಯಬೇಕು ಎಂದು ಅಹವಾಲು ಸಲ್ಲಿಸಿದರು.
ಕೋರ್ಟ್ನಿಂದ ತಡೆಯಾಜ್ಞೆ
ಎಸ್ಸಿ, ಎಸ್ಟಿ ಪ್ರಕರಣದಲ್ಲಿ ಆರೋಪಿತರು ನ್ಯಾಯಾಲಯದ ತಡೆ ಆಜ್ಞೆ ತರುತ್ತಿದ್ದಾರೆ. ಅದನ್ನು ತೆರವುಗೊಳಿಸುವ ಬಗ್ಗೆ ಡಿಸಿಆರ್ಇ ಠಾಣೆಯವರು ಸರಿಯಾಗಿ ಕ್ರಮ ಕೈಗೊಳ್ಳುತ್ತಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಡಿಸಿಆರ್ಇ ಠಾಣೆಯವರು ಸೂಕ್ತ ಕ್ರಮ ವಹಿಸುವಂತೆ ಸೂಚನೆ ನೀಡಲಾಯಿತು.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯ್ಕ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು, ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 53 ಮುಖಂಡರು ಹಾಗೂ ಸಮುದಾಯದವರು ಪಾಲ್ಗೊಂಡಿದ್ದರು.