ಅಪಘಾತದಲ್ಲಿ ಮೃತಪಟ್ಟಿದ್ದ ಗ್ರಾಹಕನ ತಾಯಿಗೆ ಎಸ್ಬಿಐ ವತಿಯಿಂದ 40 ಲಕ್ಷ ರೂ. ವಿಮೆ ಹಸ್ತಾಂತರಿಸಲಾಯಿತು. ಪ್ರಕಾಶ್ ಬಿ. ಅಡಿಗ, ಕೀಳಂಜೆ ಕೃಷ್ಣರಾಜ ಭಟ್, ಆದಿತ್ಯ, ಅಕ್ಷಯ್, ರಾಜೇಶ್ ಗಂಗೊಳ್ಳಿ ಇತರರಿದ್ದರು.
* ಅಪಘಾತದಲ್ಲಿ ಮೃತಪಟ್ಟಿದ್ದ ಗ್ರಾಹಕ
ಉಡುಪಿ: ಅಪಘಾತದಲ್ಲಿ ಮೃತಪಟ್ಟಿದ್ದ ಮಲ್ಪೆಯ ಗ್ರಾಹಕರೋರ್ವರ ಕುಟುಂಬಕ್ಕೆ ಭಾರತೀಯ ಸ್ಟೇಟ್ ಬ್ಯಾಂಕ್ 40 ಲಕ್ಷ ರೂ. ಅಪಘಾತ ವಿಮೆ ನೀಡಿದೆ. ಮಲ್ಪೆಯಲ್ಲಿ ಕೋಸ್ಟಲ್ ಸೆಕ್ಯೂರಿಟಿಯ ಸಿಬ್ಬಂದಿಯಾಗಿದ್ದ ಅರ್ಜುನ್ ನೆಲ್ಲೂರು ಎಂಬವರು ಅಪಘಾತದಲ್ಲಿ ಮೃತಪಟ್ಟಿದ್ದರು.
ಎಸ್ಬಿಐನ ಮಲ್ಪೆ ಶಾಖೆಯಲ್ಲಿ ಅರ್ಜುನ್ ಅವರ ತಾಯಿ ರೇಣುಕಾ ಶಂಕರಪ್ಪ ನೆಲ್ಲೂರು ಅವರಿಗೆ ಬ್ಯಾಂಕ್ನ ಉಡುಪಿಯ ಪ್ರಾದೇಶಿಕ ವ್ಯವಸ್ಥಾಪಕ ಪ್ರಕಾಶ್ ಬಿ. ಅಡಿಗ ಚೆಕ್ ಹಸ್ತಾಂತರಿಸಿದರು.
ಎಲ್ಲ ಗ್ರಾಹಕರು ತಮಗೆ ಅನುಕೂಲವಾಗುವ ವಿಮೆಯನ್ನು ಎಸ್ಬಿಐನಲ್ಲಿ ಮಾಡಿಸಿಕೊಳ್ಳಬೇಕು. ಇದರಿಂದ ಅವರ ಕುಟುಂಬಕ್ಕೆ ಆರ್ಥಿಕ ಸಹಕಾರ ಲಭಿಸಿದಂತಾಗುತ್ತದೆ. ನಮ್ಮ ಯಾವುದೇ ಶಾಖೆಯ ವ್ಯವಸ್ಥಾಪಕರಲ್ಲಿ ಕೇಳಿ ಅಪಘಾತ ವಿಮೆ ಮಾಡಿಸಿಕೊಳ್ಳುವುದು ಭವಿಷ್ಯದ ದೃಷ್ಟಿಯಿಂದ ಉತ್ತಮ ಎಂದು ಅಭಿಪ್ರಾಯಪಟ್ಟರು.
ಎಸ್ಬಿಐನ ಮುಖ್ಯ ವ್ಯವಸ್ಥಾಪಕ ಕೀಳಂಜೆ ಕೃಷ್ಣರಾಜ ಭಟ್, ಎಸ್ಬಿಐ ಜನರಲ್ ಇನ್ಶೂರೆನ್ಸ್ ಕಂಪನಿಯ ಆದಿತ್ಯ, ಅಕ್ಷಯ್, ಮಲ್ಪೆ ಶಾಖೆಯ ಮೆನೇಜರ್ ರಾಜೇಶ್ ಗಂಗೊಳ್ಳಿ ಮತ್ತು ಸಿಬ್ಬಂದಿ ಇದ್ದರು.