ತೆಂಕನಿಡಿಯೂರು ಕಾಲೇಜಿನಲ್ಲಿ ಆಯೋಜಿಸಿದ್ದ ಸಾವಿತ್ರಿಬಾಯಿ ಫುಲೆ ಜನ್ಮದಿನ ಕಾರ್ಯಕ್ರಮದಲ್ಲಿ ಡಾ. ಮಹೇಶಕುಮಾರ್​ ಕೆ.ಇ. ಉಪನ್ಯಾಸ ನೀಡಿದರು. ನಿತ್ಯಾನಂದ್​ ವಿ. ಗಾಂವ್ಕರ್​, ಡಾ. ಶ್ರೀಧರ್​ ಭಟ್​, ಡಾ. ವಿಷ್ಣುಮೂರ್ತಿ ಪ್ರಭು, ಸಂದೇಶ್​ ಎಂ.ವಿ., ಶರಿತಾ, ಭಾರತಿ, ಬಾಬು, ರತ್ನಮಾಲಾ ಇದ್ದರು. 
ಉಡುಪಿ

ಅರಿವಿನ ಬೆಳಕು ಬೆಳಗಿಸದ ಪ್ರಥಮ ಶಿಕ್ಷಕಿ ಸಾವಿತ್ರಿಬಾಯಿ

ಇತಿಹಾಸ ಉಪನ್ಯಾಸಕ ಡಾ. ಮಹೇಶಕುಮಾರ್​ ಕೆ.ಇ. ಉಪನ್ಯಾಸ

ತೆಂಕನಿಡಿಯೂರು ಕಾಲೇಜಿನಲ್ಲಿ ಸಾವಿತ್ರಿಬಾಯಿ ಫುಲೆ ಜನ್ಮದಿನಾಚಾರಣೆ

ಉಡುಪಿ: ಮಹಿಳೆಯರು, ದೀನದಲಿತರ ಬದುಕಿನಲ್ಲಿ ಶಿಕ್ಷಣದ ಬೀಜ ಬಿತ್ತುವ ಮೂಲಕ ಅವರಲ್ಲಿ ಸಾಮಾಜಿಕ ಅರಿವಿನ ಬೆಳಕು ಬೆಳಗಿಸಿದ ಕೀರ್ತಿ ಭಾರತದ ಮೊಟ್ಟಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರಿಗೆ ಸಲ್ಲುತ್ತದೆ. ಮಹಿಳಾ ಶಿಕ್ಷಣಕ್ಕೆ ಅವರು ನಡೆಸಿದ್ದ ಹೋರಾಟ ಕ್ರಾಂತಿಕಾರಿಯಾಗಿತ್ತು ಎಂದು ಇತಿಹಾಸ ಉಪನ್ಯಾಸಕ ಡಾ. ಮಹೇಶಕುಮಾರ್​ ಕೆ.ಇ. ತಿಳಿಸಿದರು.
ಉಡುಪಿಯ ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಕನ್ನಡ ವಿಭಾಗದ ವತಿಯಿಂದ ಹಾಗೂ ಐಕ್ಯುಎಸಿ ಸಹಕಾರದಲ್ಲಿ ಸಾವಿತ್ರಿಬಾಯಿ ಫುಲೆ ಜನ್ಮದಿನಾಚರಣೆ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.

ಶಿಕ್ಷಕಿಗೆ ಪುಷ್ಪ ನಮನ

ಸಾವಿತ್ರಿಬಾಯಿ ಫುಲೆ ಅವರ ಸಮಕಾಲೀನರಾಗಿದ್ದ ಭಾರತದ ಮೊಟ್ಟ ಮೊದಲ ಮುಸ್ಲಿಂ ಶಿಕ್ಷಕಿ ಫಾತಿಮಾ ಶೇಖ್​ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಗೌರವಿಸಲಾಯಿತು. ಕನ್ನಡ ವಿಭಾಗದ ವಿದ್ಯಾರ್ಥಿಗಳಾದ ಕೀರ್ತನಾ ಶೆಟ್ಟಿ, ಶಿವಾನಿ ಶೆಟ್ಟಿ, ಮಂಜು, ಪ್ರವೀಣ್​ ಇತರರು ಸಾವಿತ್ರಿಬಾಯಿ ಕುರಿತು ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ನಿತ್ಯಾನಂದ್​ ವಿ. ಗಾಂವ್ಕರ್​ ಅಧ್ಯಕ್ಷತೆ ವಹಿಸಿದ್ದರು. ಶೈಕ್ಷಣಿಕ ಸಲಹೆಗಾರ ಡಾ. ಶ್ರೀಧರ್​ ಭಟ್​, ಐಕ್ಯುಎಸಿ ಸಂಚಾಲಕ ಡಾ. ವಿಷ್ಣುಮೂರ್ತಿ ಪ್ರಭು, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಸಂದೇಶ್​ ಎಂ.ವಿ., ಉಪನ್ಯಾಸಕರಾದ ಶರಿತಾ, ಭಾರತಿ, ಬಾಬು ಇತರರು ಉಪಸ್ಥಿತರಿದ್ದರು.
ಅನೂಷಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಕನ್ನಡ ವಿಭಾಗದ ಮುಖ್ಯಸ್ಥೆ ರತ್ನಮಾಲಾ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಜ್ಯೋತಿ ಎಂ. ವಂದಿಸಿದರು. ಅರ್ಚನಾ ಕಾರ್ಯಕ್ರಮ ನಿರೂಪಿಸಿದರು.
"

ಶಿಕ್ಷಣದ ಮೂಲಕವೇ ಸಾವಿತ್ರಿಬಾಯಿಯವರು ಸಾಮಾಜಿಕವಾಗಿ ಹಲವಾರು ಸುಧಾರಣೆ ತಂದರು. ಅವರು ನಡೆಸಿದ್ದ ಹೋರಾಟದ ಕಿಚ್ಚು ಎಲ್ಲೆಡೆ ಕ್ರಾಂತಿಯ ಜ್ಯೋತಿಯಾಗಿ ಪಸರಿಸಿತ್ತು. ತಮ್ಮ ಜೀವಿತದುದ್ದಕ್ಕೂ ಲಿಂಗ ರಾಜಕಾರಣ, ಜಾತಿ ರಾಜಕಾರಣದ ವಿರುದ್ಧ ಹೋರಾಡಿ ಮಹಿಳಾ ಸಬಲೀಕರಣಕ್ಕಾಗಿ ಶ್ರಮಿಸಿದರು. ಸಮಾಜ ಸುಧಾರಕಿಯಾಗಿರುವ ಅವರ ಸಾತ್ವಿಕ ಬದುಕು ಮಾದರಿ, ಅನುಕರಣೀಯ.