ಉಡುಪಿಯಲ್ಲಿ ಆಯೋಜಿಸಿದ್ದ ಸವಿತಾ ಮಹರ್ಷಿ ಜಯಂತಿಯನ್ನು ಎಂ.ಎ. ಗಫೂರ್ ಉದ್ಘಾಟಿಸಿದರು. ಉದಯಕುಮಾರ್ ಶೆಟ್ಟಿ, ಪೂರ್ಣಿಮಾ, ಗೋವಿಂದ ಭಂಡಾರಿ ಬನ್ನಂಜೆ, ರಾಜು ಸಿ. ಭಂಡಾರಿ, ಶೇಖರ್ ಸಾಲಿಯಾನ್, ನವೀನಚಂದ್ರ ಭಂಡಾರಿ, ಭರತ್ ಸುವರ್ಣ, ವಿಶ್ವನಾಥ್ ಭಂಡಾರಿ ನಿಂಜೂರು, ನಾಗೇಶ್ ಭಂಡಾರಿ ಭಜಗೊಳಿ, ಸದಾಶಿವ್ ಬಂಗೇರ ಇತರರಿದ್ದರು.
* ಸಿಡಿಬಿಎಂ ಅಧ್ಯಕ್ಷ ಎಂ.ಎ. ಗಫೂರ್ ಶ್ಲಾಘನೆ
* ಸವಿತಾ ಮಹರ್ಷಿ ಜಯಂತಿ ಉದ್ಘಾಟನೆ
ಉಡುಪಿ: ದೇಶದ ಸಂಸ್ಕೃತಿ, ಪರಂಪರೆಗೆ ಮಹರ್ಷಿ, ಸಂತರು, ಐತಿಹಾಸಿಕ ಕವಿಗಳ ಕೊಡುಗೆ ಶ್ರೇಷ್ಠವಾಗಿದೆ. ಶಿವನ ಪುತ್ರರೆಂದೇ ಪರಿಗಣಿಸುವ ಹಾಗೂ ಶಿವನ ಕೇಶ ಅಲಂಕಾರ ಮಾಡಿದ ಸವಿತಾ ಮಹರ್ಷಿಗಳ ಕೊಡುಗೆಯೂ ಅನನ್ಯವಾಗಿದೆ. ಸಮಾಜಕ್ಕೆ ಗಾಯತ್ರಿ ಮಂತ್ರವನ್ನೂ ಉಪದೇಶಿಸಿ ಸತ್ಯ, ಸನ್ಮಾರ್ಗದಲ್ಲಿ ಸಾಗುವಂತೆ ಉಪದೇಶಿಸಿದ್ದಾರೆ. ಸವಿತಾ ಸಮಾಜದವರು ಇಲ್ಲದಿದ್ದರೆ ಯಾರೂ ಸುಂದರವಾಗಿ ಕಾಣಲು ಸಾಧ್ಯವಿಲ್ಲ. ಸೃಜನಶೀಲ, ಪ್ರಾಮಾಣಿಕ ಸವಿತಾ ಸಮಾಜಕ್ಕೆ ಹಾಗೂ ಕ್ಷೌರಿಕ ವೃತ್ತಿಗೆ ಪೌರಾಣಿಕ ಪರಂಪರೆಯೂ ಇದೆ ಎಂದು ಕರಾವಳಿ ಅಭಿವೃದ್ಧಿ ಮಂಡಳಿ ಮಂಗಳೂರಿನ ಅಧ್ಯಕ್ಷ ಎಂ.ಎ. ಗಫೂರ್ ಶ್ಲಾಘಿಸಿದರು.
ಉಡುಪಿಯ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್ನಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಉಡುಪಿ ಜಿಲ್ಲಾ ಸವಿತಾ ಸಮಾಜ (ರಿ.)ದ ಸಹಭಾಗಿತ್ವದಲ್ಲಿ ಭಾನುವಾರ (ಜ.25) ಆಯೋಜಿಸಿದ್ದ ಸವಿತಾ ಮಹರ್ಷಿ ಜಯಂತಿ ಉದ್ಘಾಟಿಸಿ ಮಾತನಾಡಿದರು.
ಸರ್ಕಾರದ ಪ್ರೋತ್ಸಾಹ ಅಗತ್ಯ
ಸವಿತಾ ಸಮಾಜದ ಜಿಲ್ಲಾಧ್ಯಕ್ಷ ರಾಜು ಸಿ. ಭಂಡಾರಿ ಕಿನ್ನಿಮುಲ್ಕಿ ಮಾತನಾಡಿ, ಸವಿತಾ ಮಹರ್ಷಿಯು ಕ್ಷೌರಿಕ ವೃತ್ತಿಯ ಮೂಲಪುರುಷರಾಗಿದ್ದಾರೆ. ಅದ್ದೂರಿಯಾಗಿ ಅವರ ಜಯಂತಿ ಆಚರಿಸುವಂತಾಗಬೇಕು. ಕ್ಷೌರಿಕ ವೃತ್ತಿ ನಮ್ಮಿಂದಲೇ ಅಂತ್ಯವಾಗುವ ಹಂತ ಬರುತ್ತಿದೆ. ಸಮಾಜದ ಯುವಕರು ಈ ವೃತ್ತಿಯತ್ತ ನಿರಾಸಕ್ತರಾಗುತ್ತಿದ್ದಾರೆ. ದುರ್ಬಲವಾಗುತ್ತಿರುವ ಈ ಸಮಾಜವನ್ನು ಮುಖ್ಯವಾಹಿನಿಗೆ ತರಲು ಸರ್ಕಾರ ಪ್ರೋತ್ಸಾಹಿಸಬೇಕು ಎಂದರು.
ಸನ್ಮಾನ
ಸವಿತಾ ಮಹರ್ಷಿ ಜಯಂತಿ ಹಿನ್ನೆಲೆಯಲ್ಲಿ ಸಮುದಾಯದ ಸಾಧಕ ಶೇಖರ್ ಸಾಲಿಯಾನ್ ಆದಿಉಡುಪಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಜಿಪಂ ಮುಖ್ಯ ಯೋಜನಾಧಿಕಾರಿ ಉದಯಕುಮಾರ್ ಶೆಟ್ಟಿ ಮಾತನಾಡಿ, ಸವಿತಾ ಸಮಾಜದವರ ಜನಸಂಖ್ಯೆ ಕಡಿಮೆ ಇದ್ದು, ಒಗ್ಗಟ್ಟು ಅಗತ್ಯ ಎಂದರು.
ಸಮಾಜದ ಪ್ರಮುಖರಾದ ನವೀನಚಂದ್ರ ಭಂಡಾರಿ, ಭರತ್ ಸುವರ್ಣ, ವಿಶ್ವನಾಥ್ ಭಂಡಾರಿ ನಿಂಜೂರು, ನಾಗೇಶ್ ಭಂಡಾರಿ ಭಜಗೊಳಿ, ಸದಾಶಿವ್ ಬಂಗೇರ, ಹರೀಶ್ ಭಂಡಾರಿ ಕರಂಬಳ್ಳಿ, ಸತೀಶ್ ಭಂಡಾರಿ ಕಾಪು, ಪ್ರಶಾಂತ ಸುವರ್ಣ ಮಲ್ಪೆ, ಸತೀಶ್ ಸುವರ್ಣ, ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಉಡುಪಿ ಜಿಲ್ಲಾಧ್ಯಕ್ಷ ಸಿದ್ಧಬಸಯ್ಯ ಸ್ವಾಮಿ ಚಿಕ್ಕಮಠ ಉಪಸ್ಥಿತರಿದ್ದರು.
ನಾಡಗೀತೆಯೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು. ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹೇಶ್ ಮಲ್ಪೆ ಕಾರ್ಯಕ್ರಮ ನಿರೂಪಿಸಿದರು. ಇಲಾಖೆಯ ಸಿಬ್ಬಂದಿ ವರ್ಷಾ ಬಿ. ಸಹಕರಿಸಿದರು.
ಶಿವನನ್ನು ಸುಂದರನನ್ನಾಗಿ ಅಲಂಕರಿಸಿದ್ದ ಋಷಿ
ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸತ ಕಲಾವಿದ ಗೋವಿಂದ ಭಂಡಾರಿ ಬನ್ನಂಜೆ ಸವಿತಾ ಮಹರ್ಷಿ ಕುರಿತು ಉಪನ್ಯಾಸ ನೀಡಿದರು. ಶಿವನ ಬಲಗಣ್ಣಿನಿಂದ ಸವಿತಾ ಮಹರ್ಷಿ ಜನಿಸಿದರೆಂದು ಪುರಾಣ ತಿಳಿಸುತ್ತವೆ. ಋಗ್ವೇದದ ಸವಿತಾ ಸೂಕ್ತದೊಂದಿಗೆ ಸವಿತಾ ಮಹರ್ಷಿಯನ್ನು ಗುರುತಿಸುತ್ತಾರೆ. ಗಿರಿಜಾ ಕಲ್ಯಾಣದ ಸಂದರ್ಭದಲ್ಲಿ ಜಟಾಧಾರಿಯಾಗಿದ್ದ ಶಿವನ ಕೇಶ ಕತ್ತರಿಸಿ, ಸುಂದರ ವರನನ್ನಾಗಿ ಕಂಗೊಳಿಸುವಂತೆ ಮಾಡಿದ್ದರು. ಭಾರತೀಯ ಸಂಸತಿಯ ಮಹಾನ್ ಮಷರ್ಷಿಗಳಲ್ಲಿ ಓರ್ವರಾದ ಅವರ ತತ್ವವು ಅಂಧಕಾರದಿಂದ ಬೆಳಕಿನತ್ತ ಸಾಗುವುದಾಗಿದೆ. ಪ್ರಕೃತಿಯೊಂದಿಗೆ ಏಕತೆ ಸಾಧಿಸಿ ಸತ್ಕರ್ಮಗಳ ತಿಳಿಸಿದ್ದು, ಅವರ ಉಪದೇಶ ಜನರನ್ನು ನೀತಿ ಮಾರ್ಗದಲ್ಲಿ ಸಾಗುವಂತೆ ಮಾಡಿದೆ. ಮಹರ್ಷಿಗಳು ಬುದ್ಧಿ ಮತ್ತು ಜ್ಞಾನದ ಪ್ರತೀಕರಾಗಿದ್ದಾರೆ. ಅವರ ಆಶಯದಂತೆ ಸವಿತಾ ಸಮಾಜವು ನಾಡಿನ ಎಲ್ಲ ಸಮುದಾಯದವರ ಹಿತ-ಸುಖವನ್ನೇ ಬಯಸುತ್ತಿದೆ ಎಂದರು.
ಸಂತರು, ಮಹರ್ಷಿಗಳು, ಮಹನೀಯರ ಆದರ್ಶಗಳನ್ನು ತಿಳಿದುಕೊಂಡು ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತಾಗಲು ಸರ್ಕಾರದ ವತಿಯಿಂದ ಇಂತಹ ದಿನಾಚರಣೆ ಆಚರಿಸಲಾಗುತ್ತದೆ. ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದಲೇ 32 ಮಹನೀಯರ ಜಯಂತಿ ಆಚರಿಸಲಾಗುತ್ತಿದೆ. ಅದರಲ್ಲಿ ಸವಿತಾ ಮಹರ್ಷಿಗಳ ಜಯಂತಿಯೂ ಪ್ರಮುಖವಾಗಿದೆ. ಕ್ಷೌರಿಕ ವೃತ್ತಿಯ ಮೂಲಕ ಸಮಾಜದ ಹಿತ ಕಾಪಾಡುವ ತಮ್ಮ ಸಮುದಾಯದವರ ಸೇವೆ ಗೌರಿಸುವುದೂ ಸಹ ಸವಿತಾ ಮಹರ್ಷಿ ಜಯಂತಿಯ ಉದ್ದೇಶವಾಗಿದೆ.