ಉಡುಪಿಯಲ್ಲಿ ಗಾಂಧಿ ಪ್ರತಿಮೆಯ ಮುಂಭಾಗದಲ್ಲಿ ಜಿಲ್ಲಾ ಕಾಂಗ್ರೆಸ್​ ಪ್ರಚಾರ ಸಮಿತಿ ಆಯೋಜಿಸಿದ್ದ ಸತ್ಯಾಗ್ರಹದಲ್ಲಿ ವಿನಯಕುಮಾರ್​ ಸೊರಕೆ ಮಾತನಾಡಿದರು. ಕೆ.ಜಯಪ್ರಕಾಶ್​ ಹೆಗ್ಡೆ, ಹರೀಶ್​ ಕಿಣಿ ಅಲೆವೂರು, ದಿನಕರ್​ ಶೆಟ್ಟಿ, ರಮೇಶ್​ ಕಾಂಚನ್​, ಜ್ಯೋತಿ ಹೆಬ್ಬಾರ್​, ಡಾ. ಸುಬ್ರಹ್ಮಣ್ಯ ಭಟ್​ ಇತರರಿದ್ದರು. 
ಉಡುಪಿ

ಮನ್​ ಕೀ ಬಾತ್​ನಲ್ಲಿ ಮೋದಿ ಕ್ಷಮೆ ಯಾಚಿಸಲಿ

ಕಾಂಗ್ರೆಸ್​ ಪ್ರಚಾರ ಸಮಿತಿಯ ರಾಜ್ಯಾಧ್ಯಕ್ಷ ವಿನಯಕುಮಾರ್​ ಸೊರಕೆ ಆಗ್ರಹ

* ಶುದ್ಧೀಕರಣ ಘಟನೆ ಖಂಡಿಸಿ ಜಿಲ್ಲಾ ಕಾಂಗ್ರೆಸ್​ ಪ್ರಚಾರ ಸಮಿತಿಯಿಂದ ಸತ್ಯಾಗ್ರಹ

ಉಡುಪಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ್ದ ಜಾಗವನ್ನು ಗಂಗಾಜಲದಿಂದ ಶುದ್ಧೀಕರಿಸಿರುವುದು ಅತ್ಯಂತ ಹೇಯ ಕೃತ್ಯ. ದೇಶದ ಸಂವಿಧಾನ ನೀಡಿದ ಸಮಾನತೆಯ ಮೂಲ ಆಶಯಗಳಿಗೆ ಮಾಡಿದ ಅಪಮಾನವದು. ದಲಿತರು ಈ ದೇಶದ ಮೂಲನಿವಾಸಿಗರಾಗಿದ್ದು ಇನ್ನೂ ಅವರ ಮೇಲೆ ಶೋಷಣೆ, ಅಸ್ಪೃಶ್ಯರಂತೆ ನೋಡುವುದು ಮನುಸ್ಮೃತಿಯ ವೈಭವೀಕರಣವಾಗಿದೆ. ಎಲ್ಲ ವಿಚಾರವನ್ನೂ ಮನ್​ ಕೀ ಬಾತ್​ನಲ್ಲಿ ಹೇಳಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿ, ಶುದ್ಧೀಕರಣದ ವಿಚಾರಕ್ಕೂ ಉತ್ತರಿಸಬೇಕು. ಉತ್ತರಾಖಂಡ ಬಿಜೆಪಿಯವರ ದುರ್ವರ್ತನೆಗೆ ಪಶ್ಚಾತ್ತಾಪಪಟ್ಟು ದೇಶದ ಜನರಲ್ಲಿ ಕ್ಷಮೆ ಯಾಚಿಸಬೇಕು ಎಂದು ಕಾಂಗ್ರೆಸ್​ ಪ್ರಚಾರ ಸಮಿತಿಯ ರಾಜ್ಯಾಧ್ಯಕ್ಷ ವಿನಯಕುಮಾರ್​ ಸೊರಕೆ ಆಗ್ರಹಿಸಿದರು.
ಉಡುಪಿ ಜಿಲ್ಲಾ ಕಾಂಗ್ರೆಸ್​ ಪ್ರಚಾರ ಸಮಿತಿ ವತಿಯಿಂದ ಉಡುಪಿಯ ಅಜ್ಜರಕಾಡಿನಲ್ಲಿರುವ ರಾಷ್ಟ್ರಪಿತ ಮಹಾತ್ಮ ಗಾಂಧಿ ಮಂಟಪದ ಬಳಿ ಶನಿವಾರ (ಸೆ.12) ಆಯೋಜಿಸಿದ್ದ ಉತ್ತರಾಖಂಡ ಬಿಜೆಪಿ ಸರ್ಕಾರದ ವಿರುದ್ಧದ ಸತ್ಯಾಗ್ರಹದಲ್ಲಿ ಮಾತನಾಡಿದರು.
ಆಂತರಿಕವಾಗಿ ಶುದ್ಧಿಯಾಗಿ
ಮಾಜಿ ಸಂಸದ ಕೆ. ಜಯಪ್ರಕಾಶ್​ ಹೆಗ್ಡೆ ಮಾತನಾಡಿ, ಗಂಗಾಜಲದಿಂದ ಬಹಿರಂಗವಾಗಿ ಶುದ್ಧೀಕರಣ ಮಾಡಿದ ಬಿಜೆಪಿಗರು ಮೊದಲು ಆಂತರಿಕವಾಗಿ ಶುದ್ಧೀಕರಣ ಮಾಡಿಕೊಳ್ಳಬೇಕು. ಮಾನವರು ಪರಸ್ಪರ ಗೌರವಿಸಿಕೊಂಡಾಗ ಮೌಲ್ಯ ವರ್ಧನೆಯಾಗುತ್ತದೆ. ಇಲ್ಲದಿದ್ದರೆ ಮಾನವ ದಾನವನಾಗುತ್ತಾನೆ. ಕೇಂದ್ರ ಬಿಜೆಪಿ ಸರ್ಕಾರದ ಹಾಗೂ ಪ್ರಧಾನಿಯ ಹುಳುಕು-ಕೊಳಕುಗಳನ್ನೆಲ್ಲ ರಾಹುಲ್​ ಗಾಂಧಿ ದೇಶದ ಜನತೆಯ ಮುಂದೆ ತೆರೆದಿಡುತ್ತಿದ್ದಾರೆ. ಅದನ್ನು ಸಹಿಸಿಕೊಳ್ಳಲಾಗದೆ ಅವರ ವಿರುದ್ಧವೇ ಪ್ರಕರಣ ದಾಖಲಿಸುವ ಹೀನಬುದ್ಧಿ ಬಿಜೆಪಿಯದ್ದಾಗಿದೆ. ದೇಶದಲ್ಲಿ ಬದಲಾವಣೆ ಪರ್ವ ಆರಂಭವಾಗಿದೆ ಎಂದರು.  
ದಲಿತರ ವಿರುದ್ಧ ಕುತಂತ್ರ
ಪ್ರಚಾರ ಸಮಿತಿಯ ಬ್ರಹ್ಮಾವರ ತಾಲೂಕಿನ ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್​ ಮಾತನಾಡಿ, ಸ್ವಾತಂತ್ರ್ಯ ಲಭಿಸಿ 79 ವರ್ಷ ಕಳೆದಿದೆ. ಸುಶಿಕ್ಷಿತರಾದರೂ ಪ್ರಜ್ಞಾವಂತರಾಗಿಲ್ಲ. ಇನ್ನೂ ದಲಿತ, ಶೂದ್ರ, ಬ್ರಾಹ್ಮಣ ಎಂಬ ಭೇದ-ಭಾವ ಮುಂದುವರಿದಿದೆ. ಧರ್ಮ&ಜಾತಿಗಳ ವಿರುದ್ಧ ವಿಷಬೀಜ ಬಿತ್ತುತ್ತಿದ್ದ ಬಿಜಿಪಿಗರು ಇದೀಗ ದಲಿತರ ವಿರುದ್ಧವೇ ದಲಿತರನ್ನು ಎತ್ತಿಕಟ್ಟುವ ಕುತಂತ್ರ ಮಾಡುತ್ತಿದ್ದಾರೆ ಎಂದರು.
ಪ್ರಚಾರ ಸಮಿತಿಯ ಉಪಾಧ್ಯಕ್ಷ ದಿನಕರ್​ ಶೆಟ್ಟಿ, ಜಿಲ್ಲಾ ಮಹಿಳಾ ಕಾಂಗ್ರೆಸ್​ ಅಧ್ಯಕ್ಷ ಜ್ಯೋತಿ ಹೆಬ್ಬಾರ್​, ಕಾಂಗ್ರೆಸ್​ ಪ್ರಮುಖರಾದ ರಮೇಶ್​ ಕಾಂಚನ್​, ಹಬೀಬ್​ ಅಲಿ, ದಿನಕರ್​ ಕುಂದರ್​, ಅಶೋಕ್​ ಕೊಡವೂರು, ಹರಿಪ್ರಸಾದ್​ ರೈ, ತಾರಾನಾಥ ಆರ್​. ಸುವರ್ಣ, ಜಯಕುಮಾರ್​, ಮಹಾಬಲ ಕುಂದರ್​, ರೋ ಶಿನಿ ಒಲಿವೇರಾ, ಸುಂದರಿ ಪುತ್ತೂರು ನಾಗೇಶ್​ ಉದ್ಯಾವರ, ಅನಿತಾ ಬ್ರಹ್ಮಾವರ, ಭಾಸ್ಕರ್​ ರಾವ್​ ಕಿದಿಯೂರು, ಅಣ್ಣಯ್ಯ ಸೇರಿಗಾರ್​, ದಿನೇಶ್​ ಪುತ್ರನ್​, ಸಜ್ಜನ್​ ಶೆಟ್ಟಿ, ಕೇಶವ್​ ಸಾಲಿಯಾನ್​, ಡಾ. ಗಣನಾಥ್​ ಶೆಟ್ಟಿ ಎಕ್ಕಾರು, ರಮಾನ್​ ಪೌಲ್​, ರೋಯ್ಸ್​, ಶರಫುದ್ದೀನ್​, ಸುನೀಲ್​ ಕುಮಾರ್​, ಸಂಧ್ಯಾ ತಿಲಕರಾಜ್​ ಇತರರು ಉಪಸ್ಥಿತರಿದ್ದರು. 
ಉಡುಪಿ ಜಿಲ್ಲಾ ಕಾಂಗ್ರೆಸ್​ ಪ್ರಚಾರ ಸಮಿತಿಯ ಅಧ್ಯಕ್ಷ ಹರೀಶ್​ ಗಿಣಿ ಅಲೆವೂರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪ್ರಚಾರ ಸಮಿತಿಯ ಕೋಶಾಧಿಕಾರಿ ದಯಾನಂದ್​ ಡಿ. ಕಿದಿಯೂರು ಕಾರ್ಯಕ್ರಮ ನಿರ್ವಹಿಸಿದರು. 

ಗಾಂಧಿ ಸ್ಮೃತಿ, ಭಜನ್​

ಸತ್ಯಾಗ್ರಹದ ಹಿನ್ನೆಲೆಯಲ್ಲಿ ಕಾಂಗ್ರೆಸ್​ ಕಾರ್ಯಕರ್ತರು ಗಾಂಧಿ ಪ್ರತಿಮೆಗೆ ಹಾರ ಅರ್ಪಿಸಿ, ಎಡಗೈಗೆ ಕಪ್ಪುಪಟ್ಟಿ ಕಟ್ಟಿಕೊಂಡು ಧರಣಿ ನಡೆಸಿದರು. ದೇಶದಲ್ಲಿ ಅಸ್ಪೃಶ್ಯತೆ ಆಚರಿಸುತ್ತಿರುವ ಬಿಜೆಪಿಗರ ನಡೆ ಖಂಡಿಸಿ ಗಾಂಧಿ ಸ್ಮೃತಿ ಹಾಗೂ ಭಜನ್​ ನಡೆಸಿದರು. ಗಾಯಕ ಸುದರ್ಶನ್​ ಮತ್ತು ಬಳಗದವರು ಮಹಾತ್ಮ ಗಾಂಧೀಜಿಗೆ ಪ್ರಿಯವಾಗಿದ್ದ ವೈಷ್ಣವ ಜನತೋ, ರಘುಪತಿ ರಾಘವ ರಾಜಾರಾಂ ಹಾಗೂ ಇನ್ನಿತರ ಭಜನ್​ಗಳನ್ನು ಹಾಡಿ ಸತ್ಯಾಗ್ರಹಕ್ಕೆ ಮೆರಗು ತಂದರು.
"

ರಾಹುಲ್​ ಗಾಂಧಿಯ ಏಳಿಗೆಯನ್ನು ಸಹಿಸಿದ ಬಿಜೆಪಿಗರು ಅವರ ವಿರುದ್ಧ ಸುಳ್ಳು ಕೇಸ್​ ದಾಖಲಿಸಿ ಜೈಲಿಗೆ ಹಾಕುವ ಮೂಲಕ ಹಿಮ್ಮೆಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ, 2029ರಲ್ಲಿ ರಾಹುಲ್​ ಗಾಂಧಿ ಪ್ರಧಾನಿ ಆಗುವುದನ್ನು ತಡೆಯಲು ಯಾರಿಂದಲು ಸಾಧ್ಯವಿಲ್ಲ. ಮಹಾತ್ಮ ಗಾಂಧಿ ಎಷ್ಟು ಸತ್ಯವೋ, ಅದರಂತೆ ಮುಂದಿನ ರಾಜಕೀಯ ಬೆಳವಣಿಗೆಯೂ ಅಷ್ಟೇ ಸತ್ಯ.