ಉಡುಪಿಯ ಕಡಿಯಾಳಿ ದೇಗುಲದ ಸಭಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಯಶ್ಪಾಲ್ ಸುವರ್ಣ ಮಾತನಾಡಿದರು. ಕೆ.ರಾಘವೇಂದ್ರ ಕಿಣಿ, ಪ. ವಸಂತ್ ಭಟ್, ಗೀತಾ ಶೇಟ್, ಗಿರೀಶ್ ಅಂಚನ್, ಸತೀಶ್ ಕುಲಾಲ್ ಇದ್ದರು.
* ಸಮಿತಿ ಗೌರವಾಧ್ಯಕ್ಷ, ಶಾಸಕ ಯಶ್ಪಾಲ್ ಸುವರ್ಣ ಮಾಹಿತಿ
* ಸೆ.14ರಿಂದ ವಾರಗಳ ಕಾಲ ಶ್ರೀ ಗಣೇಶೋತ್ಸವ ಸಂಭ್ರಮ
ಉಡುಪಿ: ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತಾಗಬೇಕು. ಆ ನಿಟ್ಟಿನಲ್ಲಿ ಉಡುಪಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ (ರಿ.) ಕಡಿಯಾಳಿಯ 60ನೇ ವರ್ಷದ ವಜ್ರ ಮಹೋತ್ಸವದ ನಿಮಿತ್ತ 'ಉಡುಪಿ ರಾಜಾ ಶ್ರೀ ಗಣೇಶೋತ್ಸವ'ವನ್ನು ಸೆ.14ರಿಂದ ಸೆ.20ರ ವರೆಗೆ ಅದ್ದೂರಿಯಾಗಿ ಆಚರಿಸಲಿದ್ದೇವೆ ಎಂದು ಸಮಿತಿಯ ಗೌರವಾಧ್ಯಕ್ಷ ಹಾಗೂ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಮಾಹಿತಿ ನೀಡಿದರು.
ಉಡುಪಿ ಕಡಿಯಾಳಿಯ ಮಹಿಷಮರ್ಧಿನಿ ದೇಗುಲದ ಸಭಾಭವನದಲ್ಲಿ ಶನಿವಾರ (ಸೆ.12) ಸಂಜೆ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸೆ.13ರಂದು ಸಂಜೆ 4:30ಕ್ಕೆ ಜೋಡುಕಟ್ಟೆಯಿಂದ ಗಣೇಶನ ವಿಗ್ರಹದ ಸ್ವಾಗತ ಮೆರವಣಿಗೆ ನಡೆಯಲಿದೆ. ಟಿಎಂಎ ಪೈ ಆಸ್ಪತ್ರೆಯ ವೈದ್ಯಕಿಯ ನಿರ್ದೇಶಕ ಡಾ. ಶಶಿಕಿರಣ್ ಉಮಾಕಾಂತ್ ಚಾಲನೆ ನೀಡಲಿದ್ದಾರೆ. ಏಳು ದಿನಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರು ತನು-ಮನ-ಧನದಿಂದ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ವಿನಂತಿಸಿದರು.
ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ರಾಘವೇಂದ್ರ ಕಿಣಿ ಮಾತನಾಡಿ, ಈ ಬಾರಿ ಗಣೇಶನನ್ನು ಪ್ರತಿಷ್ಠಾಪಿಸಲು ಕಾತ್ಯಾಯಿನಿ ಮಂಟಪದಲ್ಲಿ ಶಿಲಾಮಯ ರೀತಿಯಲ್ಲಿ 'ರಾಜ ದರ್ಬಾರ್' ಸಜ್ಜುಗೊಳಿಸಲಾಗಿದೆ. ಮೆರವಣಿಗೆಯಲ್ಲಿ ಆಗಮಿಸುವ 'ಉಡುಪಿಯ ರಾಜಾ' ಇಲ್ಲಿ ವಾರಗಳ ಕಾಲ ವಿರಾಜಮಾನನಾಗಲಿದ್ದಾನೆ. ಪ್ರತಿದಿನವೂ ಸಾಂಸ್ಕೃತಿಕ ಕಾರ್ಯಕ್ರಮ ಇರಲಿದೆ. ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೆಚ್ಚಿಸಲು ಅಂದು ಬಾಲಗಂಗಾಧರ್ ತಿಲಕ್ ಅವರು ಗಣೇಶೋತ್ಸವ ಆಚರಿಸಿದರು. ಇಂದು ಸಮಾಜಕ್ಕಾಗಿ, ದೇಶ ಒಗ್ಗೂಡಿಸಲು ಗಣೇಶೋತ್ಸವ ಆಚರಿಸಬೇಕಿದೆ ಎಂದರು.
ನಿತ್ಯ ಲಕ್ಷ ಭಕ್ತರ ನಿರೀಕ್ಷೆ
ನಗರದ 4 ಕಡೆಗಳಲ್ಲಿ ಸ್ವಾಗತ ಕಮಾನು ನಿರ್ಮಿಸಲಾಗಿದೆ. ದೇಗುಲ ಸಂಪರ್ಕಿಸುವ ದ್ವಾರವನ್ನು ವಿವಿಧ ಅಲಂಕಾರ ಹಾಗೂ ಬಣ್ಣದ ದೀಪ ಅಳವಡಿಸಿ ಆಕರ್ಷಿಸಲಾಗಿದೆ. 108 ಕಾಯಿಯ ಗಣಹೋಮ, ಅನ್ನಸಂತರ್ಪಣೆ ಇರಲಿದೆ. ಸೆ.17ರಂದು ರಾಜ್ಯಮಟ್ಟದ ಕುಣಿತ ಭಜನಾ ಸ್ಪರ್ಧೆ, ಸೆ.18ರಂದು ವಿವಿಧ ಗಣೇಶೋತ್ಸವ ಸಮಿತಿಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳನ್ನು ಗೌರವಿಸಲಿದ್ದೇವೆ. ನೆಲದಿಂದ ಪೀಠವೂ ಸೇರಿ 7.8 ಪೀಟ್ ಉದ್ದದ ಗಣೇಶನ ಮೂರ್ತಿ ಇರಲಿದ್ದು, ಚಿನ್ನದ ಕಿರೀಟ, ಆಭರಣ ತೊಡಿಸಲಾಗುವುದು. ಸುಬ್ರಹ್ಮಣ್ಯ ರಾವ್ ಕುಟುಂಬದ ಸಂಪತ್ ರಾವ್ ಅವರು ಗಣೇಶನ ವಿಗ್ರಹ ತಯಾರಿಸಿದ್ದಾರೆ. ಹಬ್ಬದಂದು ಪ್ರತಿದಿನವೂ ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಗಣೇಶನ ವಿಗ್ರಹದ ಮುಂದೆ ಏಕಾಗ್ರತೆಯಿಂದ ದೇವರನ್ನು ಧ್ಯಾನಿಸಲು ಸ್ಥಳಾವಕಾಶವನ್ನೂ ಒದಗಿಸಲಾಗಿದೆ ಎಂದು ರಾಘವೇಂದ್ರ ಕಿಣಿ ತಿಳಿಸಿದರು.
ಪಾರ್ಕಿಂಗ್ ವ್ಯವಸ್ಥೆ
ವಾಹನಗಳ ಮೂಲಕ ಆಗಮಿಸುವ ಭಕ್ತರಿಗೆ ಕಡಿಯಾಳಿ ಹಿರಿಯ ಪ್ರಾಥಮಿಕ ಶಾಲೆ, ಯು.ಕಮಲಾಬಾಯಿ ಪ್ರೌಢಶಾಲೆ, ಕಡಿಯಾಳಿ ಜಿಲ್ಲಾ ಬಿಜೆಪಿ ಕಚೇರಿ ಸಮೀಪದ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ಪ. ವಸಂತ್ ಭಟ್, ಉಪಾಧ್ಯೆ ಗೀತಾ ಶೇಟ್, ವಜ್ರ ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಗಿರೀಶ್ ಅಂಚನ್, ಸಮಿತಿ ಸದಸ್ಯ ಸತೀಶ್ ಕುಲಾಲ್ ಇದ್ದರು.