ಬೆಳ್ತಂಗಡಿ ಅರಣ್ಯ ಇಲಾಖೆಯ ನಿಡಿಗಲ್ ಸಸ್ಯ ಕ್ಷೇತ್ರದಲ್ಲಿ ವಿತರಣೆಗೆ ಸಿದ್ಧಗೊಂಡಿರುವ ನಾನಾ ಜಾತಿಯ ಗಿಡಗಳು.
ಬೆಳ್ತಂಗಡಿ ಅರಣ್ಯ ಇಲಾಖೆಯ ನಿಡಿಗಲ್ ಸಸ್ಯಕ್ಷೇತ್ರದಲ್ಲಿ ಸುಮಾರು 40,998 ಅಳಿವಿನಂಚಿನಲ್ಲಿರುವ ಬಹು ಅಮೂಲ್ಯ ಹಾಗೂ ಔಷಧೀಯ ಜಾತಿಯ ಗಿಡಗಳು ವಿತರಣೆಗೆ ಸಿದ್ಧಗೊಂಡಿವೆ. ಹಸಿರನ್ನು ಬೆಳೆಸಿ ಅರಣ್ಯ ಉಳಿಸುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಸರ್ಕಾರಿ ಶಾಲೆ, ಕಾಲೇಜುಗಳಿಗೆ, ಸರ್ಕಾರಿ ಇಲಾಖೆಯ ಜಾಗಗಳಿಗೆ ಹಾಗೂ ಅರಣ್ಯ ಇಲಾಖೆಯ ನಡುತೋಪು, ಅರಣ್ಯ ಭಾಗದಲ್ಲಿ ನೆಡಲು ಈ ಗಿಡ ಬೆಳೆಸಲಾಗಿದೆ.
ಇದರಲ್ಲಿ 8X12, 6X9, 10X16 ಮೊದಲಾದ ಗಾತ್ರದ ಗಿಡಗಳಿದ್ದು ಸಾರ್ವಜನಿಕರಿಗೆ 6000, ಶಾಲಾ ಕಾಲೇಜುಗಳಿಗೆ 1,000 ಸರ್ಕಾರಿ ಇಲಾಖೆಗಳ ಜಾಗದಲ್ಲಿ ನೆಡಲು 2,000 ಗಿಡ ನೀಡಲಾಗುವುದು. 10X16 ಗಾತ್ರದ ಗಿಡಗಳು ಇಲಾಖೆಗೆ ಸೀಮಿತ. ಉಳಿದ ಗಿಡಗಳನ್ನು ಅರಣ್ಯ ಇಲಾಖೆಯ ಸ್ಥಳಗಳಲ್ಲಿ ನೆಟ್ಟು ಪೋಷಿಸಲಾಗುವುದು.
ಹಲಸು, ಹೆಬ್ಬಲಸು, ಆಲ, ಅಶ್ವಥ, ಅತ್ತಿ, ಬೈನೆ, ಬಲಿಂದ್ರಪಾಳೆ, ಬಿದಿರು, ಬೀಟಿ, ಬೇಂಗ, ಬೋಲ್ಪಾಲೆ, ಚೇರೆ, ದಾಲ್ಚಿನಿ, ಎಣ್ಣೇರ್ ಮರ, ಗೋಲಿ, ಗುಗ್ಗುಳ, ಹಿಪ್ಪೆ, ಹುಣಸೆ, ಜಾಯಿಕಾಯಿ, ಕಾಡು ಬಾದಾಮ್, ಕೈದೂಪ, ಕಕ್ಕೆ, ಕಿರಾಲ್ ಬೋಗಿ, ಪನ್ನೇರಳೆ, ಕುಳೂರು ಮಾವು, ಕುಂಟಾಲ, ಮಹಾಗನಿ, ಮಾವು, ನೆಲ್ಲಿ ನೇರಳೆ, ಪುನರ್ಪುಳಿ ರಾಂಪತ್ರೆ, ರೆಂಜೆ, ಸಿರಿ ಹೊನ್ನೆ, ಸೀತಾ ಅಶೋಕ, ನಾಣೀಲು ಕೋಳಿ ಜುಟ್ಟು, ಆನೆಮುಚೂರ್, ಹೊಳೆ ದಾಸವಾಳ ಶ್ರೀಗಂಧ ಮೊದಲಾದ 42 ಜಾತಿಯ ಗಿಡಗಳು ಸಿದ್ಧಗೊಂಡಿವೆ.
8X12 ಗಾತ್ರದ ಗಿಡ ಒಂದಕ್ಕೆ 6 ರೂ., 6*9 ಗಾತ್ರದ ಗಿಡಕ್ಕೆ 3ರೂ. ದರ ವಿಧಿಸಲಾಗಿದೆ. ಗಿಡ ಬೇಕಾದವರು ಅರ್ಜಿಯೊಂದಿಗೆ ಫೋಟೋ, ಗಿಡ ನೆಡುವ ಸ್ಥಳದ ನಕ್ಷೆ ಪ್ರತಿ, ಆರ್‌ಟಿಸಿ, ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿಯೊಂದಿಗೆ ಅರಣ್ಯ ಇಲಾಖೆ ಸಂಪರ್ಕಿಸಿ ನಿಡಿಗಲ್ ಸಸ್ಯಕ್ಷೇತ್ರದಿಂದ ಗಿಡ ಪಡೆಯಬಹುದಾಗಿದೆ.
ಇಲಾಖೆಯಿಂದ ಸಹಾಯಧನ
ಗಿಡಗಳ ಬೆಳವಣಿಗೆ ಆಧಾರದಲ್ಲಿ ಪ್ರತಿ ಗಿಡಕ್ಕೆ ಪ್ರಥಮ ವರ್ಷ 35 ರೂ., ಎರಡನೇ ವರ್ಷ 40 ರೂ., ಮೂರನೇ ವರ್ಷ 50 ರೂ., ಹೀಗೆ ಒಟ್ಟು 125 ರೂ. ಇಲಾಖೆ ಪ್ರೋತ್ಸಾಹ ಧನವಾಗಿ ಗಿಡ ಬೆಳೆಯುವ ಸಾರ್ವಜನಿಕರಿಗೆ ನೀಡುತ್ತದೆ. ಇಲಾಖಾಧಿಕಾರಿಗಳು ಗಿಡಗಳ ಬೆಳವಣಿಗೆ ಪರಿಶೀಲಿಸಿ ವರದಿ ತಯಾರಿಸಿ ಇಲಾಖೆಗೆ ಸಲ್ಲಿಸಿದ ಬಳಿಕ ಇದು ಬ್ಯಾಂಕ್ ಖಾತೆಗೆ ಜಮೆಗೊಳ್ಳುತ್ತದೆ. ಈ ಹಿಂದೆ 100 ರೂ. ಪ್ರೋತ್ಸಾಹ ಧನ ನೀಡುತ್ತಿದ್ದು ಈಗ 125 ರೂ. ಗಳಿಗೆ ಹೆಚ್ಚಿಸಲಾಗಿದೆ. 2024ರಲ್ಲಿ ಇಲಾಖೆ ಸಾರ್ವಜನಿಕರಿಗೆ ನೀಡುವ ಗಿಡಗಳ ಬೆಲೆಯನ್ನು ಇಲಾಖೆ 23 ರೂ. ತನಕ ಏರಿಸಿತ್ತು. ಬಳಿಕ ಸಾರ್ವಜನಿಕರ ಬೇಡಿಕೆ ಹಾಗೂ ಇತರ ಕಾರಣಗಳಿಂದ ದರ ಇಳಿಕೆ ಮಾಡಲಾಗಿದ್ದು ಪ್ರಸ್ತುತ ರಿಯಾಯಿತಿ ದರದಲ್ಲಿ ಗಿಡ ನೀಡಲಾಗುತ್ತದೆ.
ಉತ್ತಮ ಗಿಡಗಳು
ಈ ವಷರ್ ಬೇಸಿಗೆ ಮಳೆ ಆಗಾಗ ಸುರಿದ ಕಾರಣ ಗಿಡಗಳಿಗೆ ಹೆಚ್ಚಿನ ನೀರು ನೀಡುವ ಅಗತ್ಯ ಕಂಡುಬಂದಿರಲಿಲ್ಲ. ಗಿಡಗಳ ಆರೈಕೆ ಇಲಾಖೆ ಉತ್ತಮ ಮಟ್ಟದಲ್ಲಿ ನಿರ್ವಹಿಸಿದ್ದು ಅತ್ಯುತ್ತಮವಾದ ಗಿಡಗಳು ಬೆಳೆದು ನಿಂತಿವೆ ಎಂದು ಇಲಾಖೆ ತಿಳಿಸಿದೆ.
ಸ್ಥಳಾಂತರಗೊಂಡ ನರ್ಸರಿ
ಈ ಹಿಂದೆ ಮುಂಡಾಜೆಯ ಕಾಪುವಿನಲ್ಲಿದ್ದ ಇಲಾಖೆಯ ಸಸ್ಯ ಕ್ಷೇತ್ರ 2024ರಲ್ಲಿ ನಿಡಿಗಲ್‌ನಲ್ಲಿರುವ ಇಲಾಖೆ ಜಾಗಕ್ಕೆ ಸ್ಥಳಗೊಂಡಿದೆ. ಹಿಂದೆ ಮೃತ್ಯುಂಜಯ ನದಿ ತಟದಲ್ಲಿದ್ದ ನರ್ಸರಿ ಈಗ ನೇತ್ರಾವತಿ ತಟದಲ್ಲಿದೆ. ಕಾಪುವಿನಲ್ಲಿ ರಸ್ತೆ ವಿಸ್ತರಣೆಗೊಳ್ಳುವ ಕಾರಣ ನರ್ಸರಿ ಜಾಗದಲ್ಲೂ ರಸ್ತೆ ವ್ಯಾಪ್ತಿ ಹಾದು ಹೋಗುವುದರಿಂದ ನಿಡಿಗಲ್‌ಗೆ ಸ್ಥಳಾಂತರಗೊಂಡಿದೆ.
ಇಲಾಖೆ ತಿಳಿಸಿದ ಅಗತ್ಯ ದಾಖಲೆ ಸಲ್ಲಿಸುವ ಆಸಕ್ತ ಕೃಷಿಕರಿಗೆ ಮೊದಲು ಬಂದವರಿಗೆ ಮೊದಲ ಆದ್ಯತೆ ಮೇರೆಗೆ ಜೂನ್ ಪ್ರಥಮ ವಾರದಿಂದ ಗಿಡಗಳನ್ನು ವಿತರಿಸಲಾಗುವುದು.
— ತ್ಯಾಗರಾಜ್, ಆರ್‌ಎಫ್‌ಒ, ಅರಣ್ಯ ಇಲಾಖೆ, ಬೆಳ್ತಂಗಡಿ