ಕಂಬಳಪದವಿನಲ್ಲಿ ನಿರ್ಮಿಸಲಾದ ಶೆಡ್.
ಕೃಷಿಕರು ತಮ್ಮ ತೋಟ ಹಾಗೂ ಮನೆಯಂಗಳದಲ್ಲಿ ಬೆಳೆದ ಹಣ್ಣು, ತರಕಾರಿ, ಮೀನು ಸೇರಿದಂತೆ ಇತರೆ ಕೃಷಿ ಉತ್ಪನ್ನಗಳನ್ನು ಮಧ್ಯವರ್ತಿಗಳ ಕಾಟವಿಲ್ಲದೆ ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಲಿ ಎಂಬ ಉದ್ದೇಶದಿಂದ ಶಾಸಕ ಯು.ಟಿ.ಖಾದರ್ ರೂಪಿಸಿದ್ದ ಮಹತ್ವಾಕಾಂಕ್ಷೆಯ ‘ಸಂತೆ ಮಾರುಕಟ್ಟೆ’ ಯೋಜನೆಗೆ ಸಾರ್ವಜನಿಕರಿಂದ ನಿರೀಕ್ಷಿತ ಸ್ಪಂದನೆ ಸಿಕ್ಕಿಲ್ಲ. ಇದರ ಪರಿಣಾಮವಾಗಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಮಾರುಕಟ್ಟೆ ಶೆಡ್‌ಗಳು ಇಂದು ಬಳಕೆಯಿಲ್ಲದೆ ಪಾಳುಬಿದ್ದಿವೆ.
ಪ್ರಸ್ತುತ ಕೃಷಿಕರು ತಾವು ಕಷ್ಟಪಟ್ಟು ಬೆಳೆದ ಬೆಳೆಯನ್ನು ನೇರವಾಗಿ ಮಾರಾಟ ಮಾಡಲು ಸೂಕ್ತ ವ್ಯವಸ್ಥೆಯಿಲ್ಲದೆ ಮಧ್ಯವರ್ತಿಗಳನ್ನು ಆಶ್ರಯಿಸಬೇಕು. ದಲ್ಲಾಳಿಗಳು ನಿಗದಿಪಡಿಸುವ ಅತ್ಯಂತ ಕಡಿಮೆ ದರಕ್ಕೇ ತೃಪ್ತಿಪಟ್ಟುಕೊಳ್ಳಬೇಕಾದ ಅನಿವಾರ್ಯತೆ ರೈತರದು. ಇನ್ನು ಕೆಲವು ಬಾರಿ ಬೆಳೆ ಕಟಾವಿಗೆ ಬಂದಾಗ ಸೂಕ್ತ ಖರೀದಿದಾರರಿಲ್ಲದೆ, ಕೃಷಿ ಉತ್ಪನ್ನಗಳು ಕೊಳೆತು ಹೋಗಿ ರೈತರು ಭಾರಿ ನಷ್ಟ ಅನುಭವಿಸುತ್ತಿದ್ದಾರೆ.
ರೈತರ ಈ ನೈಜ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಹಾಗೂ ರೈತ-ಗ್ರಾಹಕರ ನಡುವೆ ನೇರ ಸಂಪರ್ಕ ಸೇತುವೆ ಕಲ್ಪಿಸಲು ಶಾಸಕರು ಸಾರ್ವಜನಿಕರು ಹೆಚ್ಚಾಗಿ ಓಡಾಡುವ ಪ್ರಮುಖ ಕೇಂದ್ರಗಳಲ್ಲಿ ಈ ಸಂತೆ ಮಾರುಕಟ್ಟೆ ಕಟ್ಟಡಗಳ ನಿರ್ಮಾಣಕ್ಕೆ ಆದ್ಯತೆ ನೀಡಿದ್ದರು. ರೈತರು ತಮ್ಮ ಉತ್ಪನ್ನಗಳನ್ನು ವಾರಕ್ಕೊಮ್ಮೆ ಅಥವಾ ಪ್ರತಿದಿನ ಇಲ್ಲಿಗೆ ತಂದು ಉಚಿತವಾಗಿ ಮಾರಾಟ ಮಾಡಲು ಅವಕಾಶವಿತ್ತು. ಇಲ್ಲಿ ಯಾವುದೇ ಮಾರುಕಟ್ಟೆ ಶುಲ್ಕವಿರಲಿಲ್ಲ ಹಾಗೂ ಮಳೆ-ಬಿಸಿಲಿನ ರಕ್ಷಣೆಯೂ ಇತ್ತು. ಆದರೆ, ಇಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಇಲ್ಲದ ಕಾರಣ, ವ್ಯಾಪಾರಿಗಳು ತಮ್ಮ ಸಾಮಗ್ರಿಗಳನ್ನು ಇಲ್ಲೇ ಬಿಟ್ಟು ಹೋಗಲು ಭಯಪಡುತ್ತಿದ್ದಾರೆ. ಕಳವಾದರೆ ಸಂಬಂಧಪಟ್ಟವರೇ ಜವಾಬ್ದಾರರು ಎಂಬ ನಿಯಮವಿರುವುದು ರೈತರ ಹಿನ್ನಡೆಗೆ ಮತ್ತೊಂದು ಕಾರಣವಾಗಿದೆ.
ಶೆಡ್‌ಗಳ ಇಂದಿನ ಸ್ಥಿತಿ
ಬಾಳೆಪುಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಡಿಪು ಸಮೀಪದ ಕುಕ್ಕುದಕಟ್ಟೆ, ಮೋಂಟುಗೋಳಿ ಹಾಗೂ ಪಜೀರ್ ಗ್ರಾಮದ ಕಂಬಳಪದವು ಎಂಬ ಮೂರು ಪ್ರಮುಖ ಸ್ಥಳಗಳಲ್ಲಿ ಈ ಸಂತೆ ಶೆಡ್‌ಗಳನ್ನು ನಿರ್ಮಿಸಲಾಗಿದೆ. ಮೋಂಟುಗೋಳಿಯಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಂಡ ಬಳಿಕ ವ್ಯಕ್ತಿಯೊಬ್ಬರು ಪ್ರತಿದಿನ ಮೀನು ಮಾರಾಟ ಮಾಡುತ್ತಿದ್ದರು. ಆದರೆ, ಕಳೆದ ಕೆಲವು ಸಮಯದಿಂದ ಅವರು ಅನಾರೋಗ್ಯಕ್ಕೆ ಒಳಗಾದ ಹಿನ್ನೆಲೆಯಲ್ಲಿ ಈ ಶೆಡ್ ಈಗ ಸಂಪೂರ್ಣ ಖಾಲಿಯಾಗಿದೆ. ಕಂಬಳಪದವಿನಲ್ಲಿಯೂ ಸುಸಜ್ಜಿತ ಶೆಡ್ ನಿರ್ಮಾಣವಾಗಿದ್ದರೂ, ವ್ಯಾಪಾರ ನಡೆಸಲು ಯಾರೂ ಮುಂದೆ ಬರುತ್ತಿಲ್ಲ. ಕುಕ್ಕುದಕಟ್ಟೆಯ ಕಟ್ಟಡ ಕಾಮಗಾರಿ ಇನ್ನೂ ಅಪೂರ್ಣ ಹಂತದಲ್ಲಿದೆ.
ಉದ್ಘಾಟನೆಗೂ ಕಾಣದ ಭಾಗ್ಯ!
ಕಟ್ಟಡ ನಿರ್ಮಾಣದ ಆರಂಭಿಕ ಹಂತದಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ಜನಪ್ರತಿನಿಧಿಗಳ ಆಡಳಿತವಿತ್ತು. ಆದರೆ, ಕೆಲವೇ ದಿನಗಳಲ್ಲಿ ಜನಪ್ರತಿನಿಧಿಗಳ ಅವಧಿ ಮುಗಿದು ಅಧಿಕಾರಿಗಳ ಆಡಳಿತ ಜಾರಿಗೆ ಬಂದ ಬಳಿಕ ಈ ಯೋಜನೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಹೀಗಾಗಿ ಸಂತೆ ವ್ಯಾಪಾರ ಕಟ್ಟಡದ ಕಾಮಗಾರಿಗಳು ಅರ್ಧಕ್ಕೇ ನಿಂತು ಹದಗೆಡುತ್ತಿವೆ. ಪೂರ್ಣಗೊಂಡಿರುವ ಎರಡು ಕಟ್ಟಡಗಳಲ್ಲಿ ಹಾಕಲಾಗಿದ್ದ ಬೋರ್ಡ್‌ಗಳು (ಫಲಕಗಳು) ಹರಿದು ಹೋಗಿದ್ದು, ಇವುಗಳ ಅಧಿಕೃತ ಉದ್ಘಾಟನೆಯೂ ನಡೆದಿಲ್ಲ. ಸ್ಥಳೀಯ ನಿವಾಸಿಗಳಿಗೆ ಈ ಕಟ್ಟಡಗಳು ಯಾವ ಉದ್ದೇಶಕ್ಕಾಗಿ ನಿರ್ಮಾಣವಾಗಿವೆ ಎಂಬುದೇ ತಿಳಿಯದಂತಾಗಿದ್ದು, ಕೃಷಿಕರ ಮನಸ್ಸಿನಿಂದ ಈ ಯೋಜನೆಯ ಕಲ್ಪನೆಯೇ ಅಳಿಸಿಹೋಗಿದೆ.
ಕೃಷಿಕರಿಗೆ ನೆರವಾಗುವ ನಿಟ್ಟಿನಲ್ಲಿ ಪ್ರಾಯೋಗಿಕವಾಗಿ ಸಂತೆ ವ್ಯಾಪಾರಕ್ಕಾಗಿ ಈ ಶೆಡ್‌ಗಳನ್ನು ನಿರ್ಮಿಸಲಾಗಿದೆ. ಈ ಕುರಿತು ಶೀಘ್ರದಲ್ಲೇ ಉನ್ನತ ಮಟ್ಟದ ಸಭೆ ನಡೆಸಿ, ಯೋಜನೆಯ ಸಾಧಕ-ಬಾಧಕಗಳನ್ನು ಚರ್ಚಿಸಲಾಗುವುದು. ಲೋಪದೋಷಗಳನ್ನು ಸರಿಪಡಿಸಿ ಮುಂದಿನ ದಿನಗಳಲ್ಲಿ ಯೋಜನೆಯನ್ನು ಯಶಸ್ವಿಯಾಗಿ ವಿಸ್ತರಿಸಲು ಕ್ರಮ ಕೈಗೊಳ್ಳಲಾಗುವುದು.
ಸ್ಥಳೀಯ ಕೃಷಿಕರ ವ್ಯಾಪಾರ ವಹಿವಾಟಿಗೆ ಅನುಕೂಲ ಮಾಡಿಕೊಡಬೇಕೆಂಬುದು ಶಾಸಕರ ಕನಸಿನ ಕೂಸಾಗಿತ್ತು. ಅದರಂತೆ ಸಂತೆ ಮಾರುಕಟ್ಟೆ ಕಟ್ಟಡಗಳು ಎದ್ದು ನಿಂತಿವೆ. ಕುಕ್ಕುದಕಟ್ಟೆಯಲ್ಲಿ ಬಾಕಿ ಇರುವ ಕಾಮಗಾರಿ ಪೂರ್ಣಗೊಳಿಸಲು ಇನ್ನಷ್ಟು ಅನುದಾನದ ಅಗತ್ಯವಿದೆ. ಸದ್ಯ ಗ್ರಾಪಂನಲ್ಲಿ ಜನಪ್ರತಿನಿಧಿಗಳ ಆಡಳಿತ ಇಲ್ಲದಿರುವುದರಿಂದ ಅಧಿಕಾರಿಗಳು ತಕ್ಷಣ ಈ ಬಗ್ಗೆ ಗಮನಹರಿಸಬೇಕು.
ರಸ್ತೆಬದಿ ವ್ಯಾಪಾರದಿಂದ ಸಾರ್ವಜನಿಕರಿಗೂ ತೊಂದರೆ, ವ್ಯಾಪಾರಿಗಳಿಗೂ ಅಭದ್ರತೆ ಇರುತ್ತದೆ ಈ ಹಿನ್ನೆಲೆಯಲ್ಲಿ ಶಾಶ್ವತ ಪರಿಹಾರದ ರೂಪದಲ್ಲಿ ಶಾಸಕ ಯು.ಟಿ.ಖಾದರ್ ಅವರ ಮಹತ್ವಾಕಾಂಕ್ಷೆಯ ಯೋಜನೆ ಸಂತೆ ಮಾರುಕಟ್ಟೆಗೆ ಕಟ್ಟಡವಿದ್ದರೂ ಉಪಯೋಗಕ್ಕೆ ಬಾರದಿರುವುದು ದುರಂತ.