ಹೇರೂರು ಗ್ರಾಮ ಪಂಚಾಯತಿ ನೇತೃತ್ವದಲ್ಲಿ ನಡೆದ ಹೇರೂರು ಗ್ರಾಮೋತ್ಸವದಲ್ಲಿ ಶಾಸಕ ಗುರುರಾಜ ಗಂಟಿಹೊಳೆ ಗೋಪೂಜೆ ನೆರವೇರಿಸಿದರು.
ಬೈಂದೂರು: ಈ ಬಾರಿಯ ಬೈಂದೂರು ಉತ್ಸವದ ಅಂಗವಾಗಿ 43 ಗ್ರಾಪಂನಲ್ಲಿ ಗ್ರಾಮೋತ್ಸವ ನಡೆಸಲಾಗುತ್ತಿದ್ದು, ಆ ಭಾಗದ ಸಂಜೀವಿನಿ ಸ್ವಸಹಾಯ ಗುಂಪಿನ ಮಹಿಳೆಯರು ಭಾಗವಹಿಸಿ ಪ್ರಯೋಜನ ಪಡೆಯುವಂತಾಗಬೇಕು. ಬೈಂದೂರು ಉತ್ಸವದಲ್ಲಿ ಸಂಜೀವಿನಿ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ನೂರು ಮಾರಾಟ ಮಳಿಗೆ ಸ್ಥಾಪಿಸುವ ಗುರಿಯನ್ನು ಹೊಂದಲಾಗಿದೆ ಎಂದು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.
ಹೇರೂರು ಗ್ರಾಮ ಪಂಚಾಯಿತಿ ನೇತೃತ್ವದಲ್ಲಿ ಆರೋಗ್ಯ, ಕೃಷಿ, ಪಶು ಸಂಗೋಪನಾ, ಅರಣ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ತೋಟಗಾರಿಕೆ ಹಾಗೂ ಬ್ಯಾಂಕಿಂಗ್ ಇಲಾಖೆಯ ಸಹಭಾಗಿತ್ವದಲ್ಲಿ ನಡೆದ ಹೇರೂರು ಗ್ರಾಮೋತ್ಸವಕ್ಕೆ ಗೋಪೂಜೆ ಮೂಲಕ ಚಾಲನೆ ನೀಡಿ ಮಾತನಾಡಿದರು.
ಹೇರೂರು ಗ್ರಾಪಂ ಅಧ್ಯಕ್ಷೆ ಗೀತಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕ್ರೀಡಾ ಸಾಧಕ ಇಬ್ಬರು ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು. ಗ್ರಾಪಂ ಉಪಾಧ್ಯಕ್ಷ ಶ್ರೀನಿವಾಸ ಪೂಜಾರಿ ಮತ್ತು ಸದಸ್ಯರು, ನೋಡಲ್ ಅಧಿಕಾರಿ ರಮೇಶ ಕುಲಾಲ್, ಶಾಂತಾರಾಮ ಶೆಟ್ಟಿ, ಸಂಜೀವಿನಿ ಅಧ್ಯಕ್ಷೆ ಚೈತ್ರಾ, ಬೈಂದೂರು ಉತ್ಸವ ಸಂಚಾಲಕ ಶ್ರೀಗಣೇಶ ಗಾಣಿಗ, ಅನಿತಾ ಆರ್.ಕೆ., ಬಾಬು ಆಚಾರ್ಯ ಮತ್ತಿತರರು ಇದ್ದರು.
ಪಿಡಿಒ ಗಿರಿಜಾ ಸ್ವಾಗತಿಸಿದರು. ಗ್ರಾಮೋತ್ಸವ ಸಮಿತಿ ಅಧ್ಯಕ್ಷ ಸೂಲಿಯಣ್ಣ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೇರೂರು ಕಾರ್ಯದರ್ಶಿ ರಂಗು ಮರಾಠಿ ವಂದಿಸಿದರು. ಸುಮಾ ಆಚಾರ್ಯ ನಿರೂಪಿಸಿದರು.
ಆರೋಗ್ಯ ತಪಾಸಣೆ, ತೋಟಗಾರಿಕೆ ಮಾಹಿತಿ
ಸಾರ್ವಜನಿಕರಿಗೆ ಎ.ಜೆ.ಆಸ್ಪತ್ರೆ, ಕಿರಿಮಂಜೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರ, ಶಿರೂರು ಮುದ್ದುಮನೆ ಕಣ್ಣಿನ ಆಸ್ಪತ್ರೆಯ ತಜ್ಞ ವೈದ್ಯರಿಂದ ಉಚಿತವಾಗಿ ಆರೋಗ್ಯ ತಪಾಸಣೆ ನಡೆಯಿತು. ತೋಟಗಾರಿಕೆ ಬಗ್ಗೆ ಮಾಹಿತಿ ಮತ್ತು ಕೆಲವು ಆಯ್ದ ಫಲಾನುಭವಿಗಳಿಗೆ ತರಕಾರಿ ಬೀಜಗಳನ್ನು ವಿತರಿಸಲಾಯಿತು. ಕೃಷಿ ಸಲಕರಣೆಗಳ ಪ್ರದರ್ಶನ, ಅರಣ್ಯ ಇಲಾಖೆಯಿಂದ ಸಸ್ಯಗಳ ಪೋಷಣೆ ಮತ್ತು ಸಂರಕ್ಷಣೆ ಕುರಿತು ಮಾಹಿತಿ ತಜ್ಞರು ಮಾಹಿತಿ ನೀಡಿದರು . ಪುರುಷ ಹಾಗೂ ಮಹಿಳೆಯರಿಗೆ ಹಗ್ಗಜಗ್ಗಾಟ ಸ್ಪರ್ಧೆ ನಡೆಯಿತು. ಮಧ್ಯಾಹ್ನ ಶಾಲಾ ಮಕ್ಕಳಿಂದ ಮತ್ತು ಸಂಜೀವಿನಿ ಸಂಘದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.