ಉಡುಪಿಯ ಗೀತಾ ಮಂದಿರದಲ್ಲಿ ನಿರಂತರ 25 ಗಂಟೆ ಹಾಡಿ ಸಾಧನೆ ಮಾಡಿದ ಸಂಗೀತಾ ಬಾಲಚಂದ್ರ ಅವರಿಗೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಪ್ರಶಸ್ತಿ ಹಾಗೂ 'ಗೀತಾ ಗಂಗೋತ್ರಿ' ಬಿರುದು ಪ್ರದಾನ ಮಾಡಲಾಯಿತು. ವಿಶ್ವಪ್ರಿಯ ಶ್ರೀ, ಡಾ.ಮನೀಷ್ ವಿಶ್ನೋಯ್, ಪ್ರಸನ್ನ ಆಚಾರ್ಯ, ನಾಗರಾಜ್ ಆಚಾರ್ಯ ಇತರರಿದ್ದರು.
* ನಿರಂತರ 25 ಗಂಟೆ ದಾಸರ ಪದ ಹಾಡಿ ಸಾಧನೆ
* ಸಾಧಕಿಗೆ 'ಗೀತಾ ಗಂಗೋತ್ರಿ' ಬಿರುದು ಪ್ರದಾನ
ಉಡುಪಿ: ಗೀತಾ ಪರಂಪರೆ ಸಂಗೀತಾ ಬಾಲಚಂದ್ರ ಅವರಿಗೆ ಹೊಸದಲ್ಲ. ಅವರ ಹೆಸರೇ ಸಂಗೀತಾ. ಅವರ ತಾಯಿಯ ಹೆಸರೂ ಗೀತಾ. 25 ಗಂಟೆ ನಿರಂತರ ಹಾಡುವ ಮೂಲಕ ಅವರು ವಿಶ್ವ ದಾಖಲೆ ಮಾಡಿರುವುದು ಶ್ರೀಕೃಷ್ಣನ ಸನ್ನಿಧಿಯ ಗೀತಾ ಮಂದಿರದ ಶ್ರೀ ಪುತ್ತಿಗೆ ನೃಸಿಂಹ ಸಭಾಂಗಣದಲ್ಲಿ. ಗೀತೆಯ ಸಂಗೀತ, ದಾಸ ಸಂಗೀತದ ಮೊರೆ ಹೊಕ್ಕವರಿಗೆ ಗೀತಾಚಾರ್ಯನಾದ ಶ್ರೀಕೃಷ್ಣನ ಅನುಗ್ರಹ, ಸದಾ ಜಯ ಪ್ರಾಪ್ತವಾಗುತ್ತದೆ ಎಂದು ಅದಮಾರು ವಿಶ್ವಪ್ರಿಯ ತೀರ್ಥ ಶ್ರೀಪಾದರು ನುಡಿದರು.
ಉಡುಪಿಯ ಗೀತಾ ಮಂದಿರದಲ್ಲಿ ಆ.23ರಂದು ಬೆಳಗ್ಗೆ 6:30ರಿಂದ ಆ.24ರ ಬೆಳಗ್ಗೆ 7:40ರ ವರೆಗೆ ನಿರಂತರ 25 ಗಂಟೆ 40 ನಿಮಿಷಗಳ ಕಾಲ ದಾಸ ಸಾಹಿತ್ಯದ 250 ಗೀತೆಗಳನ್ನು ಹಾಡಿ 'ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್' ಮಾಡಿದ ವಿದುಷಿ ಸಂಗೀತಾ ಬಾಲಚಂದ್ರ ಅವರಿಗೆ ಪುತ್ತಿಗೆ ಮಠದ ಸುಗುಣೇಂದ್ರ ಶ್ರೀಗಳ ಸೂಚನೆಯಂತೆ 'ಗೀತಾ ಗಂಗೋತ್ರಿ' ಬಿರುದು ಪ್ರದಾನ ಮಾಡಿ ಆಶೀರ್ವಚನ ನೀಡಿದರು.
25 ಗಂಟೆಗಳ ಕಾಲ ನಿರಂತರ ದಾಸರ ಕೀರ್ತನೆಗಳ ಗಾಯನ ಮಾಡಿ ಐತಿಹಾಸಿಕ ವಿಶ್ವದಾಖಲೆ ಮಾಡಿರುವುದನ್ನು ದೃಢೀಕರಿಸಿ ಘೋಷಿಸಿದ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನ ಏಷ್ಯಾ ಮುಖ್ಯಸ್ಥ ಡಾ.ಮನೀಷ್ ವಿಶ್ನೋಯ್, ಪ್ರಮಾಣಪತ್ರ ನೀಡಿದರು. ಉಡುಪಿ ಶ್ರೀಕೃಷ್ಣನ ಸನ್ನಿಧಿಯಲ್ಲಿ ನಡೆದ ಈ ಅಪೂರ್ವ ಸಂಗೀತ ಸಾಧನೆಯು ಉಡುಪಿಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದ ಇತಿಹಾಸದಲ್ಲಿ ಹೊಸ ಅಧ್ಯಾಯ ದಾಖಲಿಸಿದೆ ಎಂದರು.
ಮಠದ ದಿವಾನ ನಾಗರಾಜ್ ಆಚಾರ್ಯ, ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ವಿಜಯಾ ಆಚಾರ್ಯ, ಲಕ್ಷ್ಮೀ ಆಚಾರ್ಯ, ತಂದೆ ವೇದವ್ಯಾಸ ಪುರಾಣಿಕ್, ತಾಯಿ ಗೀತಾ ಪುರಾಣಿಕ್, ಕಿರಣ್ ಭಟ್ ಇತರರು ಇದ್ದರು. ಗೀತಾ ಮಂದಿರದ ಪ್ರಭಾರಿ ವಿದ್ವಾನ್ ಕೆ.ವಿ. ರಮಣ್ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.
ಸಂಗೀತಾ ಅವರ ನಿರಂತರ ಹಾಡುಗಾರಿಕೆಯಲ್ಲಿ ರೆಕಾರ್ಡೆಡ್ ವಾದ್ಯ ಇರಲಿಲ್ಲ. ವಿವಿಧ ಕಲಾವಿದರೂ ಸಹ 25 ಗಂಟೆಗಳ ಕಾಲ ವಾದ್ಯ ನುಡಿಸಿರುವುದು ವಿಶೇಷ. ಕೀಬೋರ್ಡ್ನಲ್ಲಿ ಗುರುರಾಜ್ ಮಂಗಳೂರು, ರಝಾಕ್ ಕರಿವೆಲ್ಲೂರ್, ರಿದಮ್ ಪ್ಯಾಡ್ನಲ್ಲಿ ಪ್ರಭಾಕರ್ ಅಮ್ಮಿಂಗೋಡ್, ವಾಮನ್ ಕೆ., ತಬಲಾದಲ್ಲಿ ದೀಕ್ಷಿತ್ ಕೊಡಂಚ, ದೀಪಕ್ ರಾಜ್ ಉಲ್ಲಾಳ್, ಕೊಳಲು ವಾದನದಲ್ಲಿ ಸಂತೋಷ್ ವಿಟ್ಲ ಸಹಕರಿಸಿದರು. ಆರಂಭದಲ್ಲಿ 'ಶರಣು ಸಿದ್ಧಿವಿನಾಯಕ' ಎಂಬ ಗಣಪತಿ ಸ್ತುತಿ ಹಾಡಿದ ಸಂಗೀತಾ, ಕೊನೆಯಲ್ಲಿ 'ಕೃಷ್ಣ ಎನಬಾರದೆ' ಹಾಡಿನೊಂದಿಗೆ 25 ಗಂಟೆಗಳ ತನ್ನ ಕಂಠಸಿರಿಯನ್ನು ಉಡುಪಿಯ ಶ್ರೀಕೃಷ್ಣ-ಮುಖ್ಯಪ್ರಾಣ ದೇವರಿಗೆ ಸಮರ್ಪಿಸಿದರು.
ನನ್ನೆಲ್ಲ ಸಾಧನೆಯನ್ನು ಸಂಗೀತದ ಸಪ್ತ ಸ್ವರಗಳಿಗೆ, ಅನುಸ್ವರಗಳಿಗೆ, ದಾಸ ಸಾಹಿತ್ಯದ ಅನ್ಯರ್ ಪದಪುಂಜಗಳಿಗೆ, ಪ್ರಾಸ-ಲಯ, ಛಂಧೋ ಸಹಿತ ದಾಸ ಸಾಹಿತ್ಯ ಬಂಧಕ್ಕೆ, ದಾಸವರೇಣ್ಯರಿಗೆ, ಸಂಗೀತ ನಿರ್ದೇಶಕರುಗಳಿಗೆ, ಹಿನ್ನಲೆ ವಾದ್ಯವೃಂದಕ್ಕೆ, ಪ್ರಾಯೋಜಕರಿಗೆ, 25 ಗಂಟೆಗಳ ಕಾಲ ವೀಕ್ಷಿಸಿದ ಸಂಗೀತ ರಸಿಕ ವರ್ಗಕ್ಕೆ, ಹರಿವಾಯು ಗುರುಚರಣಕ್ಕೆ ಸಮರ್ಪಿಸುತ್ತೇನೆ.
— ಸಂಗೀತಾ ಬಾಲಚಂದ್ರ. ವಿಶ್ವ ದಾಖಲೆ ನಿರ್ಮಿಸಿದ ಗಾಯಕಿ.
'ಗೀತಾ ಗಂಗೋತ್ರಿ' ಎಂಬ ಬಿರುದು ಅತ್ಯಂತ ಅರ್ಥಪೂರ್ಣವಾಗಿದೆ. ಗೀತಾ, ಗಂಗೆ, ಗೋವಿಂದ ಮತ್ತು ಗೋವು ಇವುಗಳ ಪವಿತ್ರ ಸ್ಮರಣೆ ಈ ಬಿರುದಿನಲ್ಲಿ ಅಡಕವಾಗಿದೆ. ಗಂಗೋತ್ರಿಯಿಂದ ಗಂಗೆಯು ನಿರಂತರವಾಗಿ ಪ್ರವಹಿಸುವಂತೆ ಸಂಗೀತಾ ಅವರ ಕಂಠದಿಂದ ದಾಸಸಾಹಿತ್ಯ ಮತ್ತು ಭಕ್ತಿಸಂಗೀತದ ಗಂಗೆ ನಿರಂತರವಾಗಿ ಹರಿಯಲಿ. ಜನರಲ್ಲಿ ಭಕ್ತಿ-ಭಾವ ಜಾಗೃತಗೊಳಿಸಲಿ.
— ವಿಶ್ವಪ್ರಿಯ ತೀರ್ಥ ಶ್ರೀಪಾದರು. ಅದಮಾರು ಮಠ.