ಕಟ್ಟಡ ಸಾಮಗ್ರಿ ಸಾಗಾಟ ಲಾರಿ ಟೆಂಪೋ ಮಾಲಕರ ಸಂಘದ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.  
ಉಡುಪಿ

ಹೊರರಾಜ್ಯಕ್ಕೆ ಎಂ-ಸ್ಯಾಂಡ್​ ಸಾಗಾಟ ತಡೆಯದಿದ್ದರೆ ಪ್ರತಿಭಟನೆ

ಜಿಲ್ಲೆಯಲ್ಲಿ ಕಟ್ಟಡ ನಿಮಾರ್ಣಕ್ಕೆ ಅಗತ್ಯವಾದ ಎಂ-ಸ್ಯಾಂಡ್​, ಜಲ್ಲಿ ಸೇರಿದಂತೆ ವಿವಿಧ ಕಟ್ಟಡ ಸಾಮಗ್ರಿಗಳನ್ನು ಹೊರರಾಜ್ಯಗಳಿಗೆ ಅಕ್ರಮವಾಗಿ ಸಾಗಿಸಲಾಗುತ್ತಿದೆ. ಇದರಿಂದ ಜಿಲ್ಲೆಯಲ್ಲಿ ಕೃತಕ ಅಭಾವ ಸೃಷ್ಟಿಯಾಗಿ, ಬೆಲೆ ಏರಿಕೆಯಾಗುತ್ತಿದೆ.

ಉಡುಪಿ: ಜಿಲ್ಲೆಯಲ್ಲಿ ಕಟ್ಟಡ ನಿಮಾರ್ಣಕ್ಕೆ ಅಗತ್ಯವಾದ ಎಂ&ಸ್ಯಾಂಡ್​, ಜಲ್ಲಿ ಸೇರಿದಂತೆ ವಿವಿಧ ಕಟ್ಟಡ ಸಾಮಗ್ರಿಗಳನ್ನು ಹೊರರಾಜ್ಯಗಳಿಗೆ ಅಕ್ರಮವಾಗಿ ಸಾಗಿಸಲಾಗುತ್ತಿದೆ. ಇದರಿಂದ ಜಿಲ್ಲೆಯಲ್ಲಿ ಕೃತಕ ಅಭಾವ ಸೃಷ್ಟಿಯಾಗಿ, ಬೆಲೆ ಏರಿಕೆಯಾಗುತ್ತಿದೆ. ಜಿಲ್ಲಾಡಳಿತ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳದಿದ್ದರೆ ಮುಂದಿನ ವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಲಾರಿ, ಟೆಂಪೋ ಮಾಲಕರು, ಚಾಲಕರು ಬೃಹತ್​ ಮುಷ್ಕರ ನಡೆಸಲಿದ್ದಾರೆ ಎಂದು ಕಟ್ಟಡ ಸಾಮಗ್ರಿ ಸಾಗಾಟ ಲಾರಿ ಟೆಂಪೋ ಮಾಲಕರ ಸಂಘದ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಮರಳು ದೊರೆಯದಿರುವುದರಿಂದ ಕಟ್ಟಡ ನಿಮಾರ್ಣಕ್ಕೆ ಎಂ&ಸ್ಯಾಂಡ್​ ಮತ್ತು ಜಲ್ಲಿಯನ್ನು ಹೆಚ್ಚಾಗಿ ಬಳಸಲಾಗುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ಗಣಿ ಗುತ್ತಿಗೆದಾರರು, ಎಂ-&ಸ್ಯಾಂಡ್​, ಜಲ್ಲಿ, ಶಿಲೆಕಲ್ಲು, ಕೆಂಪುಕಲ್ಲು ಸೇರಿದಂತೆ ಕಟ್ಟಡ ಸಾಮಗ್ರಿಗಳ ದರವನ್ನು ವರ್ಷದಲ್ಲಿ ನಾಲ್ಕೈದು ಬಾರಿ ಮನಬಂದಂತೆ ಏರಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಜಿಲ್ಲೆಯ ಖನಿಜ ಸಂಪತ್ತನ್ನು ಇದೇ ರೀತಿ ಹೊರರಾಜ್ಯಗಳಿಗೆ ಸಾಗಿಸುತ್ತಿದ್ದರೆ ಮುಂದಿನ ಒಂದೆರಡು ವರ್ಷಗಳಲ್ಲಿ ನೈಸರ್ಗಿಕ ಸಂಪನ್ಮೂಲಗಳು ಬರಿದಾಗುವ ಆತಂಕವಿದೆ. ಕೆಲವು ಕ್ರಷರ್​ಗಳಲ್ಲಿ ಉತ್ಪಾದನೆಯಾಗುವ ಸಾಮಗ್ರಿಗಳನ್ನು ಬೃಹತ್​ ವಾಹನಗಳ ಮೂಲಕ ಪ್ರತಿದಿನ ಹೊರರಾಜ್ಯಗಳಿಗೆ ಸಾಗಿಸಲಾಗುತ್ತಿದೆ. ಈ ಉದ್ಯಮವನ್ನೇ ನಂಬಿಕೊಂಡಿರುವ ಜಿಲ್ಲೆಯ ಲಾರಿ ಮತ್ತು ಟೆಂಪೋ ಮಾಲಕರು, ಚಾಲಕರು ಜೀವನ ನಿರ್ವಹಣೆ ಮಾಡಲು ಕಷ್ಟಪಡುವಂತಾಗಿದೆ. ಸಾಮಾನ್ಯ ಜನರೂ ಮನೆ ನಿಮಾರ್ಣಕ್ಕೆ ದುಬಾರಿ ಬೆಲೆ ತೆರಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಹೇಳಿದರು.

ಜಿಪಿಎಸ್​ ಇಲ್ಲದ ವಾಹನಗಳಿಗೆ ನಿಯಮಬಾಹಿರವಾಗಿ ಕಟ್ಟಡ ಸಾಮಗ್ರಿಗಳನ್ನು ಪೂರೈಸಲಾಗುತ್ತಿದೆ. ಗಣಿ ಗುತ್ತಿಗೆಗೆ ನಿಗದಿಪಡಿಸಿದ ಪ್ರದೇಶದ ಹೊರತಾಗಿಯೂ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂಬ ಆರೋಪಗಳಿದ್ದರೂ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆ ಮೌನ ವಹಿಸಿದೆ ಎಂದು ದೂರಿದರು.

ಜಿಲ್ಲಾಡಳಿತ ಈ ಕೂಡಲೇ ಮಧ್ಯಪ್ರವೇಶಿಸಿ ಹೊರರಾಜ್ಯಗಳಿಗೆ ನಡೆಯುತ್ತಿರುವ ಎಂ&ಸ್ಯಾಂಡ್​, ಜಲ್ಲಿ ಹಾಗೂ ಇತರ ಕಟ್ಟಡ ಸಾಮಗ್ರಿಗಳ ಸಾಗಣೆಯ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಅಕ್ರಮ ಸಾಗಣೆ ಮತ್ತು ಗಣಿಗಾರಿಕೆಗೆ ಕಡಿವಾಣ ಹಾಕಿ, ಜಿಲ್ಲೆಯ ಜನರಿಗೆ ಕೈಗೆಟುಕುವ ದರದಲ್ಲಿ ಕಟ್ಟಡ ಸಾಮಗ್ರಿಗಳು ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಹರೀಶ್​, ಪದಾಧಿಕಾರಿಗಳಾದ ರಮೇಶ್​ ಶೆಟ್ಟಿ ಹೆರ್ಗ, ನವೀನ್​ ಪಾಲನ್​, ಅಬ್ದುಲ್​ ರರಕ್​ ಉಪಸ್ಥಿತರಿದ್ದರು.