ಬೇಕಲ ಬೀಚ್‌ನಲ್ಲಿ ನಿರ್ಮಿಸಲಾದ ಮರಳು ಶಿಲ್ಪವನ್ನು ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ಉದ್ಘಾಟಿಸಿದರು. ಸ್ವೀಪ್ ನೋಡಲ್ ಅಧಿಕಾರಿ ರತೀಶ್ ಪಿಲಿಕೋಡ್, ಜಿಲ್ಲಾ ಮಾಹಿತಿ ಅಧಿಕಾರಿ ಎಂ.ಮಧುಸೂದನನ್ ಮೊದಲಾದವರಿದ್ದರು.
ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಕಡಲತೀರದಲ್ಲಿ ‘ಬೆರಳಿನ ಮೇಲಿನ ಶಾಯಿ ಗುರುತು ಪ್ರಜಾಪ್ರಭುತ್ವದ ರಕ್ಷಕ’ ಎಂಬ ಸಂದೇಶದೊಂದಿಗೆ ಬೃಹತ್ ಮರಳು ಶಿಲ್ಪವನ್ನು ಬೇಕಲ ಕಡಲ ದಡದಲ್ಲಿ ನಿರ್ಮಿಸಲಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಶೇ.100 ಮತದಾನ ಗುರಿ ಸಾಧಿಸಲು ಜಿಲ್ಲಾಡಳಿತ ಮತ್ತು ಸ್ವೀಪ್ ಜಂಟಿಯಾಗಿ ಆಯೋಜಿಸಿರುವ ‘ವೋಟಾಯನಂ-2026’ ಅಭಿಯಾನದ ಅಂಗವಾಗಿ ಮರಳು ಶಿಲ್ಪ ನಿರ್ಮಿಸಲಾಗಿದೆ.
ಮರಳು ಶಿಲ್ಪಿ ಚಿತ್ರನ್ ಕುಞಿಮಂಗಲಂ ಐದು ತಾಸುಗಳಿಗೂ ಹೆಚ್ಚು ಕಾಲ ಶ್ರಮವಹಿಸಿ ಮರಳಿನಲ್ಲಿ ಎಡಗೈ ತೋರುಬೆರಳಿಗೆ ಶಾಯಿ ಗುರುತು ಇರುವ ಶಿಲ್ಪ ರಚಿಸಿದ್ದಾರೆ.
ಮರಳು ಶಿಲ್ಪ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್, ಪ್ರಜಾಪ್ರಭುತ್ವದ ಬಲವು ಪ್ರತಿಯೊಂದು ಮತದಲ್ಲೂ ಅಡಕವಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶೇ. ನೂರು ಮತದಾನ ಸಾಧಿಸುವ ಗುರಿಯೊಂದಿಗೆ ಹಾಗೂ ಯುವಜನರಲ್ಲಿ ಮತದಾನದತ್ತ ಆಸಕ್ತಿ ಹೆಚ್ಚಿಸುವ ಉದ್ದೇಶದಿಂದ ಮುಂದಿನ ದಿನಗಳಲ್ಲಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ವ್ಯಾಪಕ ಪ್ರಚಾರ ಕಾರ್ಯಕ್ರಮ ನಡೆಸಲಾಗುವುದು ಎಂದರು.
ಸ್ವೀಪ್ ನೋಡಲ್ ಅಧಿಕಾರಿ ರತೀಶ್ ಪಿಲಿಕೋಡ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮಾಹಿತಿ ಅಧಿಕಾರಿ ಎಂ.ಮಧುಸೂದನನ್, ಬ್ಲಾಕ್ ಸಂಯೋಜಕರಾದ ಕೆ.ಜಿಜಿ, ಕೆ.ನಿಮಿಷಾ, ಕೆ.ಪಿ.ರಮ್ಯಾ ಮೋಲ್, ಕೆ.ರಜನಿ, ಕೆ.ಜ್ಯೋತಿಷ್ ಮತ್ತು ಅನಸ್ ಉಪಸ್ಥಿತರಿದ್ದರು. ಜಿಲ್ಲಾ ಮಿಷನ್ ಸಹಾಯಕ ಸಂಯೋಜಕ ಕೆ.ಎಂ.ಕಿಶೋರ್ ಸ್ವಾಗತಿಸಿದರು. ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕಿ ಅತಿರ ಟಿ.ಪಿ. ವಂದಿಸಿದರು. ಮತದಾನದ ಹಕ್ಕಿನ ಮಹತ್ವ ಸಾರಿಹೇಳುತ್ತಿರುವ ಮರಳು ಶಿಲ್ಪವನ್ನು ವೀಕ್ಷಿಸಲು ನೂರಾರು ಮಂದಿ ಭೇಟಿ ನೀಡುತ್ತಿದ್ದಾರೆ.