ಉಡುಪಿಯ ಜಿಲ್ಲಾ ನ್ಯಾಯಾಲಯದ ವಿ.ಸಿ. ಹಾಲ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ನ್ಯಾಯಾಧೀಶರಾದ ಕಿರಣ್ ಎಸ್. ಗಂಗಣ್ಣನವರ ಹಾಗೂ ನಿತಿನ್ ರಾವ್ ಮಾತನಾಡಿದರು.
* ಉಡುಪಿ ಜಿಲ್ಲಾ ನ್ಯಾಯಾಧೀಶ ಕಿರಣ್ ಗಂಗಣ್ಣನವರ ಮಾಹಿತಿ
* ಸುಪ್ರೀಂ ಕೋರ್ಟ್ನಲ್ಲಿರುವ ಪ್ರಕರಣಕ್ಕೂ ರಾಜೀ ಅವಕಾಶ
ಉಡುಪಿ: ಸರ್ವೋಚ್ಚ ನ್ಯಾಯಾಲಯದಲ್ಲಿ ಆಗಸ್ಟ್ 21ರಿಂದ 23ರ ವರೆಗೆ 'ಸಮಾಧಾನ ಸಮಾರೋಹ-2026' ವಿಶೇಷ ಲೋಕ ಅದಲಾತ್ ಹಾಗೂ ಜುಲೈ 11ರಂದು ರಾಜ್ಯಾದ್ಯಂತ ರಾಷ್ಟ್ರೀಯ ಲೋಕ ಅದಾಲತ್ ಆಯೋಜಿಸಲಾಗಿದೆ. ಕಕ್ಷಿದಾರರುಗಳಿಗೆ ರಾಜೀ ಮೂಲಕ ಪ್ರಕರಣ ಇತ್ಯರ್ಥ ಮಾಡಿಕೊಳ್ಳಲು ಇದು ಸದವಕಾಶವಾಗಿದೆ ಎಂದು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಎಸ್. ಗಂಗಣ್ಣನವರ ತಿಳಿಸಿದರು.
ಉಡುಪಿ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ವಿ.ಸಿ. ಹಾಲ್ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ 19 ಪ್ರಕರಣ
ಕೆಳಹಂತದ ನ್ಯಾಯಾಲಯಗಳಿಂದ ಹಿಡಿದು ಜಿಲ್ಲಾ ಕೋರ್ಟ್, ಹೈಕೋರ್ಟ್ನಲ್ಲಿ ಬಂದ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗಳಲ್ಲಿ ದಾಖಲಾದ ಪ್ರಕರಣಗಳನ್ನು ಮಾತ್ರ ರಾಜೀ ಮೂಲಕ ಇತ್ಯರ್ಥ ಮಾಡುವುದು 'ಸಮಾಧಾನ ಸಮಾರೋಹ' ಲೋಕ ಅದಾಲತ್ನ ವಿಶೇಷತೆಯಾಗಿದೆ. ಉಡುಪಿ ಜಿಲ್ಲೆಯಲ್ಲಿ ಇಂತಹ 19 ಪ್ರಕರಣಗಳು ಸುಪ್ರೀಂ ಮೆಟ್ಟಿಲೇರಿದ್ದು, ಅವುಗಳಲ್ಲಿ 2 ಪ್ರಕರಣ ಈಗಾಗಲೇ ರಾಜೀ ಇತ್ಯರ್ಥ ಆಗಿದೆ ಎಂದು ತಿಳಿಸಿದರು.
505 ಪ್ರಕರಣ ಇತ್ಯರ್ಥ
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶ ನಿತಿನ್ ರಾವ್ ಮಾತನಾಡಿ, ಜಿಲ್ಲೆಯಲ್ಲಿ 34,856 ಪ್ರಕರಣ ಬಾಕಿ ಇದ್ದು 3,546 ಪ್ರಕರಣಗಳನ್ನು ರಾಜೀ ಮಾಡಬಹುದಾಗಿದೆ. ಇದರಲ್ಲಿ 2 ಸಾವಿರ ಪ್ರಕರಣ ರಾಜೀ ಮಾಡಲಾಗುತ್ತಿದ್ದು, ಈಗಾಗಲೇ 505 ಪ್ರಕರಣಗಳು ರಾಜೀ ಇತ್ಯರ್ಥ ಆಗಿದೆ. ಉಳಿದ ಪ್ರಕರಣಗಳ ಕಕ್ಷಿದಾರರೂ ಸಹ ರಾಜೀ ಮಾಡಿಕೊಳ್ಳುವುದಿದ್ದಲ್ಲಿ ಜು.11ರಂದು ನಡೆಯುವ ಲೋಕ ಅದಾಲತ್ನ ಪ್ರಯೋಜನ ಪಡೆಯಬಹುದು. ರಾಜೀ ಇತ್ಯರ್ಥದ ಮೂಲಕ ಪ್ರಕರಣ ಅಂತ್ಯ ಮಾಡಿಕೊಂಡಲ್ಲಿ ಈಗಾಗಲೇ ನ್ಯಾಯಾಲಯಕ್ಕೆ ಭರಿಸಿರುವ ಶುಲ್ಕವನ್ನೂ ಹಿಂದಿರುಗಿಸಲಾಗುವುದು ಎಂದರು.
ಲೋಕ ಅದಾಲತ್ ಹೊರತಾಗಿ ಮಧ್ಯಸ್ಥಿಕೆದಾರರ ಮೂಲಕವೂ ಪ್ರಕರಣ ಇತ್ಯರ್ಥ ಮಾಡಿಕೊಳ್ಳಬಹುದಾಗಿದೆ. ಜಿಲ್ಲೆಯಲ್ಲಿ ಇಂತಹ 775 ಪ್ರಕರಣಗಳಿದ್ದು, 125 ಕೇಸ್ಗಳನ್ನು ರಾಜೀ ಮಾಡಲು ಗುರುತಿಸಲಾಗಿದೆ. 1992ರಿಂದ 2022ರ ಒಳಗಿನ ಅವಧಿಯಲ್ಲಿ ದಾಖಲಾದ ಟ್ರಾಫಿಕ್ ಚಲನ್ ದಂಡ ಪಾವತಿಗೆ ಶೇ.50 ವಿನಾಯಿತಿ ನೀಡಲಾಗಿದೆ.
— ಕಿರಣ್ ಎಸ್. ಗಂಗಣ್ಣನವರ. ಉಡುಪಿ ಜಿಲ್ಲಾ ನ್ಯಾಯಾಧೀಶ.