ಉಡುಪಿಯ 80 ಬಡಗಬೆಟ್ಟು ಗ್ರಾಪಂನ ನಿಕಟಪೂರ್ವ ಅಧ್ಯಕ್ಷ ಕೇಶವ್ ಕೋಟ್ಯಾನ್ ಅವರಿಗೆ 'ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್' ಪ್ರಶಸ್ತಿ ಪ್ರದಾನ ಮಾಡಲಾಯಿತು. ಭರತ್ ಕೆ. ಕುಲಾಲ್, ಅಚ್ಯುತ್ ನಾಯ್ಕ್ , ರಮ್ಯಾ ಆರ್. ನಾಯಕ್, ಶಕುಂತಲಾ ಶೆಟ್ಟಿ, ಡಾ. ಸಂದೀಪ್ ಶೆಟ್ಟಿ, ವಿರೂಪಾಕ್ಷಯ್ಯ ಕುಲಕರ್ಣಿ ಇದ್ದರು.
* ಜೆಸಿಐ ಪರ್ಕಳ ಅಧ್ಯಕ್ಷ ಭರತ್ ಕೆ. ಕುಲಾಲ್ ಶ್ಲಾಘನೆ
* "ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್' ಪ್ರಶಸ್ತಿ ಪ್ರದಾನ
ಉಡುಪಿ: ವಿವಿಧ ಸಂಘ-ಸಂಸ್ಥೆಗಳಲ್ಲಿ ಜವಾಬ್ದಾರಿ, ರಂಗಭೂಮಿ ನಟರಾಗಿ, ರಚನಾಕಾರರಾಗಿ, ಕಾರ್ಯಕ್ರಮಗಳನ್ನು ವಿಶಿಷ್ಟವಾಗಿ ನಿರೂಪಿಸುವ ಕೇಶವ್ ಕೋಟ್ಯಾನ್ ಬಹುಮುಖ ಪ್ರತಿಭೆಯಾಗಿದ್ದಾರೆ. 80 ಬಡಗಬೆಟ್ಟು ಗ್ರಾಪಂನಲ್ಲಿ ಸತತ ಮೂರು ಬಾರಿ ಸದಸ್ಯರಾಗಿ ಆಯ್ಕೆಯಾಗಿದ್ದು, ನಿಕಟಪೂರ್ವ ಅಧ್ಯಕ್ಷರೂ ಆಗಿದ್ದಾರೆ. ಅವರ ಸಾಧನೆ, ಸೇವಾ ಕಾರ್ಯ ಮಾದರಿಯಾಗಿದೆ ಎಂದು ಜೆಸಿಐ ಪರ್ಕಳದ ಅಧ್ಯಕ್ಷ ಭರತ್ ಕೆ. ಕುಲಾಲ್ ಶ್ಲಾಘಿಸಿದರು.
ಉಡುಪಿ ತಾಲೂಕಿನ 80 ಬಡಗಬೆಟ್ಟು ಗ್ರಾಪಂನ ಸಭಾಂಗಣದಲ್ಲಿ ಜೆಸಿಐ ಪರ್ಕಳದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಶವ್ ಕೋಟ್ಯಾನ್ ಅವರಿಗೆ 'ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್' ಪ್ರಶಸ್ತಿ ವಿತರಿಸಿ ಮಾತನಾಡಿದರು.
ಪ್ರಚಾರ ಬಯಸದ ಮೌನ ಸಾಧಕ
ಜೆಸಿಐ ಸ್ಥಾಪಕಾಧ್ಯಕ್ಷ ಅಚ್ಯುತ್ ನಾಯ್ಕ್ ಮಾತನಾಡಿ, ಕೋಟ್ಯಾನ್ ಯಾವುದೇ ಪ್ರಚಾರ ಬಯಸದ ಮೌನ ಸಾಧಕ. ಸತತ ಮೂರು ಬಾರಿ ಗ್ರಾಪಂ ಸದಸ್ಯರಾಗಿ ಆಯ್ಕೆಯಾಗಿರುವುದು ಗ್ರಾಮದ ಜನರ ಪ್ರೀತಿ ಗಳಿಕೆಯ ದ್ಯೋತಕ. ಗ್ರಾಮದಲ್ಲಿ ಉತ್ತಮ ಸೇವೆ ಸಲ್ಲಿಸಿದ್ದರಿಂದ ಈ ಪ್ರಶಸ್ತಿ ನೀಡಲಾಗಿದೆ ಎಂದರು.
ಕೇಂದ್ರ ಸರ್ಕಾರದ ಗೌರವ
ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷೆ ರಮ್ಯಾ ಆರ್. ನಾಯಕ್ ಮಾತನಾಡಿ, ಕೇಶವ್ ಅವರ ಅಧಿಕಾರಾವಧಿಯಲ್ಲಿ ಕೇಂದ್ರ ಸರ್ಕಾರವೂ ಗ್ರಾಪಂನ ಸಾಧನೆ ಗುರುತಿಸಿದೆ. 2025ರ ಗಣರಾಜ್ಯೋತ್ಸವ ಸಮಾರಂಭದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಲು ಪ್ರಧಾನಿ ಕಚೇರಿಯಿಂದ ಗೌರವ ಆಹ್ವಾನ ಬಂದಿರುವುದು ಅವರ ಸಾಧನೆಗೆ ಸಾಕ್ಷಿ ಎಂದರು.
ಸಂಸ್ಥೆಯ ಮಾಜಿ ಅಧ್ಯಕ್ಷರಾದ ದೇವೇಂದ್ರ ನಾಯಕ್, ಸಂದೀಪ್ ನಾಯ್ಕ್, ಗ್ರಾಪಂ ಆಡಳಿತಾಧಿಕಾರಿ ಡಾ. ಸಂದೀಪ್ ಶೆಟ್ಟಿ, ಪಿಡಿಒ ವಿರೂಪಾಕ್ಷಯ್ಯ ಕುಲಕರ್ಣಿ, ಕಾರ್ಯದರ್ಶಿ ಶಕುಂತಲಾ ಶೆಟ್ಟಿ, ವಿವಿಧ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಗ್ರಾಮದ ಅಭಿವೃದ್ಧಿ, ಜನಸೇವೆ ಮಾಡಲು ಊರಿನವರು ಕೊಟ್ಟ ಅವಕಾಶದಲ್ಲಿ ಪ್ರಾಮಾಣಿಕವಾಗಿ ಮಾಡಿದ್ದೇನೆ. ಎಲ್ಲ ಸದಸ್ಯರು ಹಾಗೂ ಅಧಿಕಾರಿಗಳ ಸಹಕಾರದಿಂದ ಉತ್ತಮವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗಿದೆ. ಸಾಧನೆ ಗುರುತಿಸಿ ಪ್ರಶಸ್ತಿ ನೀಡಿರುವುದು ಇನ್ನಷ್ಟು ಉತ್ತಮ ಕೆಲಸ ಮಾಡಲು ಉತ್ತೇಜಿಸಿದೆ.