ಉಡುಪಿ ಮಲ್ಪೆಯ ವಿಶ್ರಾಂ ಹೋಂ ಸ್ಟೇಯಲ್ಲಿ ಗಾಂಜಾ, ಎಂಡಿಎಂಎ ಸೇವನೆ ಮತ್ತು ಮಾರಾಟ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಆರೋಪಿಗಳು.
* ಮಲ್ಪೆಯ ವಿಶ್ರಾಂ ಹೋಂ ಸ್ಟೇಗೆ ಪೊಲೀಸರ ದಾಳಿ
* ಹೋಂ ಸ್ಟೇ ಮಾಲೀಕ, ಸಹಕರಿಸುತ್ತಿದ್ದ ಓರ್ವ ಮಹಿಳೆಯೂ ವಶಕ್ಕೆ
ಉಡುಪಿ: ತಾಲೂಕಿನ ತೆಂಕನಿಡಿಯೂರು ಗ್ರಾಮದ ತೊಟ್ಟಂ ಚರ್ಚ್ ಸಮೀಪದ ವಿಶ್ರಾಂ ಹೋಂ ಸ್ಟೇ ಒಂದರಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡಲು ಅಕ್ರಮವಾಗಿ ಗಾಂಜಾ ಹಾಗೂ ಎಂಡಿಎಂಎ ಸಂಗ್ರಹಿಸಿರುವ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿರುವ ಮಲ್ಪೆ ಠಾಣೆ ಪೊಲೀಸರು ಹೋಂ ಸ್ಟೇ ಮಾಲೀಕ, ಓರ್ವ ಮಹಿಳೆ ಸೇರಿ 7 ಆರೋಪಿಗಳನ್ನು ಶುಕ್ರವಾರ (ಜೂ.19) ಬಂಧಿಸಿದ್ದಾರೆ.
ವಿಶ್ರಾಂ ಹೋಂ ಸ್ಟೇ ಮಾಲೀಕ, ಕಾಪು ತಾಲೂಕಿನ ದೆಂದೂರುಕಟ್ಟೆ ನಿವಾಸಿ ಹಾಗೂ ಉಡುಪಿ ಪೆರಂಪಳ್ಳಿ ಅಪಾರ್ಟ್ಮೆಂಟೊಂದರಲ್ಲಿ ಹಾಲಿ ನಿವಾಸಿಯಾಗಿರುವ ಧನ್ವಿತ್ ರಿಕಿತ್ (36), ಹೂಡೆ ಗ್ರಾಮದ ನಾಜಿಲ್ ಎಫ್.ಎಂ. ರಫೀಕ್ (31), ಕಾಪು ತಾಲೂಕಿನ ಮಂಚಕಲ್ ಗ್ರಾಮದ ಮೊಹಮ್ಮದ್ ಅಜರುದ್ದೀನ್ (42), ಮೊಹಮ್ಮದ್ ಅಫ್ನಾನ್ (19), ತೆಂಕನಿಡಿಯೂರು ಗ್ರಾಮದ ವಿಘ್ನೇಶ್ ಡಿ. ಕೋಟ್ಯಾನ್ (35), ಹೋಂ ಸ್ಟೇಯಲ್ಲಿ ವಾಸ್ತವ್ಯ ಮಾಡಿದ್ದ ನೇಪಾಳ ಕಠ್ಮಂಡುವಿನ ಬಸವರಾಜ್ ರಾಮ್ ಸಿಂಗ್ (36), ಓಡಿಸ್ಸಾ ರಾಜ್ಯದ ಗಾಂಜಾಂ ಜಿಲ್ಲೆಯ ಬಿರಿಯಾಬಾಟಿಯಾ ಗ್ರಾಮದ ಹಾಗೂ ಪಡುತೋನ್ಸೆ ಗ್ರಾಮದಲ್ಲಿ ಹಾಲಿ ನಿವಾಸಿಯಾದ ಗೀತಾಂಜಲಿ ಜಿನಾ (44) ಬಂಧಿತರು.
ಆರೋಪಿಗಳ ಬಳಿಯಿದ್ದ ಅಂದಾಜು 3 ಸಾವಿರ ರೂ. ಬೆಲೆಯ 33.81 ಗ್ರಾಂ ಗಾಂಜಾ, 20 ಸಾವಿರ ರೂ. ಬೆಲೆಯ 9.73 ಗ್ರಾಂ ಎಂಡಿಎಂಎ, 5 ಮೊಬೈಲ್ ವಶಪಡಿಸಿಕೊಳ್ಳಲಾಗಿದ್ದು, ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಮಲ್ಪೆ ಪೊಲೀಸರ ದಾಳಿ
ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಮತ್ತು ಮಲ್ಪೆ ಠಾಣೆ ಪೊಲೀಸ್ ವೃತ್ತ ನಿರೀಕ್ಷಕರ ಮಾರ್ಗದರ್ಶನದಲ್ಲಿ ಮಲ್ಪೆ ಪೊಲೀಸ್ ಠಾಣೆಯ ಉಪನಿರೀಕ್ಷಕ (ಕಾ-ಸು) ಅನಿಲಕುಮಾರ್ ಡಿ., ಪಿಎಸ್ಐ ಗಂಗಪ್ಪ ಎಸ್. (ತನಿಖೆ), ಹೆಡ್ ಕಾನಸ್ಟೇಬಲ್ಗಳಾದ ಆದರ್ಶ್, ನಾಗೇಶ್, ಉದಯ್, ಆನಂದ್ ಗಾಣಿಗ, ಪಿಸಿಗಳಾದ ನಾಗರಾಜ್, ಕುಬೇರ, ಅಭಿಷೇಕ್, ಪ್ರವಿಣ ಆರ್. ಅವರಿದ್ದ ತಂಡ ವಿಶ್ರಾಮ್ ಹೋಂ ಸ್ಟೇಗೆ ದಾಳಿ ನಡೆಸಿತ್ತು.
ಒಂದು ರೂಮ್ನಲ್ಲಿ ನಾಜಿಲ್ ಎಫ್.ಎಂ., ಮೊಹಮ್ಮದ್ ಅಜರುದ್ದೀನ್, ಮೊಹಮ್ಮದ್ ಅಫ್ನಾನ್ ಹಾಗೂ ವಿಘ್ನೇಶ್ ಹೆಸರಿನ ನಾಲ್ವರು ಇದ್ದರು. ಅವರನ್ನು ಪರಿಶೀಲಿಸಿದಾಗ ಮಾದಕ ವಸ್ತು ಸೇವನೆ ಮಾಡಿರುವುದು ತಿಳಿದುಬಂದಿತು. ಪಂಚರ ಸಮಕ್ಷಮ ಅವರನ್ನು ಹಾಗೂ ಅವರ ಬಳಿಯಿದ್ದ ಮಾದಕ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದರು.
ವಿಚಾರಣೆ ವೇಳೆ ಬಂಧಿತರು ನೀಡಿದ ಮಾಹಿತಿಯಂತೆ ಪೊಲೀಸರು, ಪ್ರವಾಸೋದ್ಯಮ ಇಲಾಖೆಯಿಂದ ಮಾನ್ಯತೆ ಪಡೆಯದೆ ಅನಧಿಕೃತವಾಗಿ ಹೋಂ ಸ್ಟೇ ನಡೆಸುತ್ತಿದ್ದ ಹಾಗೂ ಈ ಮೊದಲೇ ನೋಟಿಸ್ ನೀಡಿದ್ದರೂ ಅಕ್ರಮವಾಗಿ ಹೋಂ ಸ್ಟೇ ನಡೆಸಿ, ಮಾದಕ ವಸ್ತುಗಳ ಸೇವನೆಗೆ ಸಹಾಯ ಮಾಡುತ್ತಿದ್ದ ವಿಶ್ರಾಮ್ ಹೋಂ ಸ್ಟೇ ಮಾಲೀಕ ಧನ್ವಿತ್ ರಿಕಿತ್ನನ್ನು ವಶಕ್ಕೆ ಪಡೆದರು. ಪ್ರಕರಣದಲ್ಲಿ ಭಾಗಿಯಾಗಿದ್ದ ಹೋಂ ಸ್ಟೇ ಕೆಲಸಗಾರ ಬಸವರಾಜ್ ಹಾಗೂ ಸಹಕರಿಸುತ್ತಿದ್ದ ಗೀತಾಂಜಲಿ ಜಿನಾ ಅವರನ್ನು ಬಂಧಿಸಿದ್ದು, ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.