ಕೊಯಿಪ್ಪಾಡಿಯಲ್ಲಿ ನಿರ್ಮಿಸಲಾದ ವಸತಿಸಮುಚ್ಚಯವನ್ನು ಶಾಸಕ ಎ.ಕೆ.ಎಂ.ಅಶ್ರಫ್ ಉದ್ಘಾಟಿಸಿದರು. ಇಂಜಿನಿಯರ್ ಕೆ.ಕೆ.ರೂಪೇಶ್, ಸಂಸದ ರಾಜಮೋಹನ್ ಉಣ್ಣಿತ್ತಾನ್ ಮೊದಲಾದವರಿದ್ದರು.
ಕುಂಬಳೆ: ಪುನರ್ಗೇಹಂ ಯೋಜನೆಯ ಮೂಲಕ ಕುಂಬಳೆ ಕೊಯಿಪ್ಪಾಡಿಯಲ್ಲಿ ನಿರ್ಮಿಸಲಾದ ಸುಭದ್ರಾಂ ವಸತಿ ಸಮುಚ್ಚಯದ ಮೊದಲ ಬ್ಲಾಕ್ ಅನ್ನು ಮೀನುಗಾರಿಕೆ ಸಚಿವ ಸಾಜಿ ಚೆರಿಯನ್ ಆನ್‌ಲೈನ್ ಮೂಲಕ ಉದ್ಘಾಟಿಸಿದರು.
2019-20ರ ಆರ್ಥಿಕ ವರ್ಷದಲ್ಲಿ ಪ್ರಾರಂಭಿಸಲಾದ ಪುನರ್ಗೇಹಂ ಯೋಜನೆಯ ಮೂಲಕ ರಾಜ್ಯದಲ್ಲಿ ವಸತಿ ಸಮುಚ್ಚಯ ಮತ್ತು ಮನೆಗಳು ಸೇರಿದಂತೆ 5800 ಮನೆಗಳು ಈವರೆಗೆ ಪೂರ್ಣಗೊಂಡಿವೆ. 2450 ಕೋಟಿ ರೂ. ವೆಚ್ಚದಲ್ಲಿ ಪ್ರಾರಂಭಿಸಲಾದ ಈ ಯೋಜನೆಯಲ್ಲಿ, ರಾಜ್ಯದಲ್ಲಿ ಸಮುದ್ರ ತೀರದಿಂದ 50 ಮೀಟರ್ ಒಳಗೆ ವಾಸಿಸುವ 9108 ಕುಟುಂಬಗಳು ಸ್ಥಳಾಂತರಗೊಳ್ಳಲು ಇಚ್ಛೆ ವ್ಯಕ್ತಪಡಿಸಿದ್ದು, 6000 ಕುಟುಂಬಗಳಿಗೆ ಭೂಮಿ ಗುರುತಿಸಲಾಗಿದೆ. ಜಿಲ್ಲಾಮಟ್ಟದ ಸಮಿತಿಯಿಂದ ಅನುಮೋದನೆ ಪಡೆದು 5800 ಕುಟುಂಬಗಳಿಗೆ ಸುರಕ್ಷತೆ ಒದಗಿಸಲಾಗಿದೆ ಎಂದರು.\
ಶಾಸಕ ಎ.ಕೆ.ಎಂ.ಅಶ್ರಫ್ ಅಧ್ಯಕ್ಷತೆಯಲ್ಲಿ ಕೊಯಿಪ್ಪಾಡಿಯಲ್ಲಿ ನಡೆದ ಸಮಾರಂಭದಲ್ಲಿ ಬಂದರು ಇಂಜಿನಿಯರಿಂಗ್ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಕೆ.ಕೆ.ರೂಪೇಶ್ ವರದಿ ಮಂಡಿಸಿದರು. ಸಂಸದ ರಾಜಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿದ್ದರು. ಮಂಜೇಶ್ವರ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಸೈಫುಲ್ಲಾ ತಂಙಳ್, ಕಾಞಂಗಾಡ್ ನಗರಸಭೆ ಅಧ್ಯಕ್ಷ ವಿ.ವಿ.ರಮೇಶನ್, ಮಂಜೇಶ್ವರ ಗ್ರಾಪಂ ಅಧ್ಯಕ್ಷ ಬಶೀರ್ ಕನಿಲ, ಕುಂಬಳೆ ಗ್ರಾಪಂ ಉಪಾಧ್ಯಕ್ಷ ಎಂ.ಬಲ್ಕೀಸ್, ಜಿಪಂ ಸದಸ್ಯ ಅಜೀಜ್ ಕಳತ್ತೂರು, ಕುಂಬಳೆ ಗ್ರಾಪಂ ಸ್ಥಾಯಿ ಸಮಿತಿ ಅಧ್ಯಕ್ಷರಾದ ಎ.ಕೆ.ಆರಿಫ್, ಎಂ.ಪಿ.ಖಾಲಿದ್, ಇನಾಸ್ ಫವಾಜ್ ಕೊಹಿನೂರ್, ಸದಸ್ಯೆ ಶಾರದಾ, ಉತ್ತರ ವಲಯ ಮೀನುಗಾರಿಕೆ ಜಂಟಿ ನಿರ್ದೇಶಕ ಬಿ.ಕೆ.ಸುಧೀರ್ ಕಿಶನ್, ಮತ್ಸೃ ಫೆಡ್ ಜಿಲ್ಲಾ ವ್ಯವಸ್ಥಾಪಕ ಕೆ.ಎಚ್.ಶರೀಫ್ ಮತ್ತು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮಾತನಾಡಿದರು. ಕುಂಬಳೆ ಗ್ರಾಪಂ ಅಧ್ಯಕ್ಷ ಪಿ.ಪಿ.ಅಬ್ದುಲ್ ಖಾದರ್ ಸ್ವಾಗತಿಸಿದರು. ಮೀನುಗಾರಿಕಾ ಜಿಲ್ಲಾ ಉಪ ನಿರ್ದೇಶಕ ಕೆ.ಎ.ಲಬೀಬ್ ವಂದಿಸಿದರು.