ಉಡುಪಿ ಜಿಲ್ಲಾ ಮಾಜಿ ಸೈನಿಕರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಡಾ. ಎಫ್​ಇಎ ರೋಡ್ರಿಗಸ್​, ಸಿಇಒ ಪರಮಶಿವ ಅವರು ಸಾಧನಾ ಪ್ರಶಸ್ತಿ ಸ್ವೀಕರಿಸಿದರು. ಡಾ. ಎಂ.ಎನ್​. ರಾಜೇಂದ್ರಕುಮಾರ್​, ಲಾವಣ್ಯಾ, ಎಚ್​. ರಮೇಶ್​, ಬಿ.ಜಯಕರ್​ ಶೆಟ್ಟಿ ಇಂದ್ರಾಳಿ ಇತರರಿದ್ದರು. 
ಉಡುಪಿ

ಮಾಜಿ ಸೈನಿಕರ ವಿವಿಧೋದ್ದೇಶ ಸಹಕಾರಿಗೆ 'ಸಾಧನಾ' ಪ್ರಶಸ್ತಿ

* ಸತತ 8 ವರ್ಷದಿಂದ ಪುರಸ್ಕಾರದ ಹೆಗ್ಗಳಿಕೆ

ಉಡುಪಿ: ಉಡುಪಿ ಜಿಲ್ಲಾ ಮಾಜಿ ಸೈನಿಕರ ವಿವಿಧೋದ್ದೇಶ ಸಹಕಾರ ಸಂಘಕ್ಕೆ 2025&2026ನೇ ಸಾಲಿನಲ್ಲಿ ಸರ್ವತೋಮುಖ ಸಾಧನೆ ನಿಮಿತ್ತ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್​ನಿಂದ 'ಸಾಧನಾ' ಪ್ರಶಸ್ತಿ ಲಭಿಸಿದೆ. 
ಮಂಗಳೂರಿನಲ್ಲಿ ಆ.22ರಂದು ನಡೆದ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್​ನ ಮಹಾಸಭೆಯಲ್ಲಿ ಅಧ್ಯಕ್ಷ, ಸಹಕಾರ ರತ್ನ ಡಾ. ಎಂ.ಎನ್​. ರಾಜೇಂದ್ರಕುಮಾರ್​ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಸತತ 8 ವರ್ಷದಿಂದ ಅತ್ಯುತ್ತಮ ಸಾಧನಾ ಪ್ರಶಸ್ತಿ ಗಳಿಸುತ್ತಲೇ ಬಂದಿದ್ದು, ಸಂಘದ ಅಧ್ಯಕ್ಷ ಕರ್ನಲ್​ ಡಾ. ಎಫ್​ಇಎ ರೋಡ್ರಿಗಸ್​ ಹಾಗೂ ಸಿಇಒ ಪರಮಶಿವ ಅವರು ಪ್ರಶಸ್ತಿ ಸ್ವೀಕರಿಸಿದರು.
ಸಂಘವು ವರದಿ ವರ್ಷದಲ್ಲಿ 1.79 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು, 75 ಕೋಟಿ ರೂ. ದುಡಿಯುವ ಬಂಡವಾಳ, 52 ಕೋಟಿ ರೂ. ಠೇವಣಿ ಹಾಗೂ 40 ಕೋಟಿ ರೂ. ಸಾಲ ಹೊರಬಾಕಿ ಹೊಂದಿದೆ. 
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್​ನ ನಿರ್ದೇಶಕರು, ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕಿ ಲಾವಣ್ಯಾ, ಮಂಗಳೂರು ಉಪನಿಬಂಧಕ ಎಚ್​. ರಮೇಶ್​, ಉಡುಪಿ ಸಹಕಾರ ಯೂನಿಯನ್​ನ ಅಧ್ಯಕ್ಷ ಬಿ.ಜಯಕರ್​ ಶೆಟ್ಟಿ ಇಂದ್ರಾಳಿ, ಸಂಘದ ನಿರ್ದೇಶಕರಾದ ಗಣಪಯ್ಯ ಶೇರಿಗಾರ್​, ಪ್ರಭಾಕರ್​ ನಾಯಕ್​, ರಾಘವೇಂದ್ರ ಪಿ.ಎಸ್​. ಇನ್ನಿತರರು ಉಪಸ್ಥಿತರಿದ್ದರು.