ಇಂದ್ರಾಳಿ ಶಾಲೆಯಲ್ಲಿ ಸಂಸ್ಥಾಪಕರ ದಿನಾಚರಣೆಯನ್ನು ಟಿ.ಅಶೋಕ್​ ಪೈ ಉದ್ಘಾಟಿಸಿದರು. ಕೆ.ಅಣ್ಣಪ್ಪ ಶೆಣೈ, ಡಾ.ಅದಿತಿ ರಾವ್​, ಆಶಾ ಎಸ್​. ಪೈ, ಗಾಯತ್ರಿ ಪೈ, ದಿನೇಶ್​ ಹೆಗ್ಡೆ ಆತ್ರಾಡಿ, ರೇಶ್ಮಾ ಪ್ರಭು, ಕೆ.ವಿನಾಯಕ ಕಿಣಿ, ವಿದ್ಯಾವಂತ ಆಚಾರ್ಯ, ಕೆ.ರತ್ನಾಕರ ಶೆಣೈ, ವಿದ್ಯಾ ಅಮರ್​ ಪೈ ಇತರರಿದ್ದರು. 
ಉಡುಪಿ

ಸಮರ್ಥವಾಗಿ ಶಾಲೆ ನಡೆಸುವುದು ಸುಲಭವಲ್ಲ

ಪ್ರಶಾಂತ ಜಿ. ಭಾಗ್ವತ

ಡಾ. ಟಿಎಂಎ ಪೈ ಫೌಂಡೇಷನ್​ನ ಟಿ.ಅಶೋಕ್​ ಪೈ ಅನಿಸಿಕೆ
ಇಂದ್ರಾಳಿ ಶಾಲೆಯಲ್ಲಿ ತೆರೆದ ವೇದಿಕೆ, ವಾರ್ಷಿಕೋತ್ಸವ ಉದ್ಘಾಟನೆ 

ಉಡುಪಿ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಾಲೆ ಮುನ್ನಡೆಸುವುದು ಸುಲಭವಲ್ಲ. ಪ್ರತಿ ಹಂತದಲ್ಲೂ ಸವಾಲುಗಳಿದ್ದರೂ ಸಹ ಇಂದ್ರಾಳಿ ಶಾಲೆಯ ಶೈಕ್ಷಣಿಕ ದೊಡ್ಡ ರಥವನ್ನು ಸಂಚಾಲಕ ಕೆ.ಅಣ್ಣಪ್ಪ ಶೆಣೈ ಸಮರ್ಥವಾಗಿ ಎಳೆಯುತ್ತಿದ್ದಾರೆ. ನಾವುಗಳೆಲ್ಲ ಹಗ್ಗ ಹಿಡಿದಿದ್ದೇವಷ್ಟೆ. ಇಳಿ ವಯಸ್ಸಲ್ಲೂ ಶಾಲೆಗೆ ಬಂದು ಮಕ್ಕಳ ಕಲಿಕೆಗೆ ಬೇಕಿರುವ ಸಕಲ ಸೌಲಭ್ಯ ಕಲ್ಪಿಸುತ್ತಿದ್ದಾರೆ. 700ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿರುವುದು ಇಲ್ಲಿನ ಶಿಕ್ಷಣ ಗುಣಮಟ್ಟಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಡಾ. ಟಿಎಂಎ ಪೈ ಫೌಂಡೇಷನ್​ನ ಅಧ್ಯಕ್ಷ ಟಿ.ಅಶೋಕ್​ ಪೈ ತಿಳಿಸಿದರು.
ಉಡುಪಿಯ ಇಂದ್ರಾಳಿಯಲ್ಲಿರುವ ಇಂದ್ರಾಳಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 18 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಶ್ರೀಮತಿ ಸಗುಣ ಕಮಲಾಕ್ಷ ಪೈ ಮೆಮೋರಿಯಲ್​ ತೆರೆದ ವೇದಿಕೆ, ಶಾಲಾ ಸಂಸ್ಥಾಪಕರ ದಿನಾಚರಣೆ ಹಾಗೂ ಶಾಲಾ ವಾರ್ಷಿಕೋತ್ಸವವನ್ನು ಗುರುವಾರ (ಡಿ.4) ಉದ್ಘಾಟಿಸಿ ಮಾತನಾಡಿದರು.

ಸಕಲ ಜ್ಞಾನಗಳ ತಾಣ

ಶಾಲೆಯ ಧ್ವಜಾರೋಹಣ ನಡೆಸಿದ ಹಳೆಯ ವಿದ್ಯಾರ್ಥಿನಿ ಡಾ.ಅದಿತಿ ರಾವ್​ ಮಾತನಾಡಿ, ನಾನು ಈ ಶಾಲೆಯಲ್ಲಿ ಕಲಿಯುವಾಗ ಕಂಡಿದ್ದ ಕನಸು ಈಡೇರಿದೆ. ವೈದ್ಯೆಯಾಗಿ ಇಲ್ಲಿ ನಿಂತು ಮಕ್ಕಳಿಗೆ ಪ್ರೇರಣಾತ್ಮಕವಾಗಿ ಮಾತನಾಡಲು ಹೆಮ್ಮೆಯಾಗುತ್ತಿದೆ. ಶಾಲೆಯೆಂದರೆ ಕೇವಲ ಕಲಿಕೆಯಷ್ಟೇ ಅಲ್ಲ. ಅದು ಭವಿಷ್ಯದ ಸಮಗ್ರ ವ್ಯಕ್ತಿತ್ವ ನಿರ್ಮಿಸುವ, ಜೀವನಕ್ಕೆ ಬೇಕಿರುವ ಸಕಲ ಜ್ಞಾನ ಲಭಿಸುವ ತಾಣ. ತಾವುಗಳೂ ಸಹ ನಿಶ್ಚಿತ ಗುರಿಯೊಂದಿಗೆ, ಪರಿಶ್ರಮದೊಂದಿಗೆ ಓದಿದರೆ ಸಾಧನೆ ಸುಲಭ ಎಂದರು.
ಕಾರ್ಯಕ್ರಮದಲ್ಲಿ ಆಶಾ ಎಸ್​. ಪೈ, ಗಾಯತ್ರಿ ಪೈ, ಆಡಳಿತ ಸದಸ್ಯರಾದ ವಿದ್ಯಾವಂತ ಆಚಾರ್ಯ, ಕೆ.ರತ್ನಾಕರ ಶೆಣೈ, ವಿದ್ಯಾ ಅಮರ್​ ಪೈ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ದಿನೇಶ್​ ಹೆಗ್ಡೆ ಆತ್ರಾಡಿ, ಇಂಜಿನಿಯರ್​ ಗಣೇಶ್​ ಪೈ, ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ನಟರಾಜ ಪ್ರಭು, ಕೆವಿಜಿ ಬ್ಯಾಂಕ್​ ಮೆನೇಜರ್​ ರೂಪಾಲೇಖಾ, ಹೈಸ್ಕೂಲ್​ ಮುಖ್ಯೋಪಾಧ್ಯಾಯ ಕೆ.ವಿನಾಯಕ ಕಿಣಿ, ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ರೇಶ್ಮಾ ಪ್ರಭು ಉಪಸ್ಥಿತರಿದ್ದರು.
ಪ್ರಾಥಮಿಕ ವಿಭಾಗದ ವಿದ್ಯಾರ್ಥಿನಿಯರು ವಂದೇ ಮಾತರಂ, ಕನ್ನಡ ನಾಡಗೀತೆ ಹಾಡಿದರು. ಓಜಸ್ವಿ ಗುಪ್ತಾ ಸ್ವಾಗತಿಸಿದರು. ಟಿ.ಶ್ರುತಿ ವಂದಿಸಿದರು. ಐಶಾನಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಪ್ರಾಥಮಿಕ ವಿಭಾಗದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
"

ದಿ. ಪ್ರಭಾಕರ ಪೈ ಅವರೊಂದಿಗೆ ಸೇರಿ ಇಂದ್ರಾಳಿಯಲ್ಲಿ ಎಲ್​ಕೆಜಿ ಶಾಲೆ ಆರಂಭಿಸಿದ್ದೆ. ಅದಿಂದು ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಅದನ್ನು ನೋಡುವಾಗ ಶಾಲೆ ಆರಂಭಿಸಿರುವುದಕ್ಕೆ ಸಾರ್ಥಕ ಭಾವ ಮೂಡುತ್ತಿದೆ. ಶಾಲೆಯ ಅಭಿವೃದ್ಧಿಗೆ, ಬೆಳವಣಿಗೆಗೆ ಸಹಕರಿಸಿದ ಎಲ್ಲ ಶಿಕ್ಷಕರಿಗೆ, ಆಡಳಿತ ಮಂಡಳಿಗೆ, ವಿಶೇಷವಾಗಿ ಎಲ್ಲ ಪಾಲಕರಿಗೆ ಕೃತಜ್ಞನಾಗಿದ್ದೇನೆ.