ಬಿಜೆಪಿ ಮುಖಂಡ, ಮಾಜಿ ಸಚಿವ ಪ್ರಮೋದ್​ ಮಧ್ವರಾಜ್​. 
ಉಡುಪಿ

ಕಾಂಗ್ರೆಸ್​ ಸೇರ್ಪಡೆ ಸುದ್ದಿ ಅಸತ್ಯ

* ಮಾಜಿ ಸಚಿವ ಪ್ರಮೋದ್​ ಮಧ್ವರಾಜ್​ ಸ್ಪಷ್ಟನೆ

* ಸತ್ಯವನ್ನಷ್ಟೇ ನಂಬಲು ಜನರಿಗೆ ಸೂಚನೆ

ಉಡುಪಿ: ನಾನು ಮತ್ತೆ ಕಾಂಗ್ರೆಸ್​ ಸೇರ್ಪಡೆಯಾಗಲಿದ್ದೇನೆ ಎನ್ನುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸಂಪೂರ್ಣ ಆಧಾರರಹಿತ ಹಾಗೂ ಅಸತ್ಯ. ಅದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಬಿಜೆಪಿ ಮುಖಂಡ, ಮಾಜಿ ಸಚಿವ ಪ್ರಮೋದ್​ ಮಧ್ವರಾಜ್​ ಸ್ಪಷ್ಟನೆ ನೀಡಿದ್ದಾರೆ.
ಅಧಿಕಾರಕ್ಕಾಗಿ ನಾನು ಬಿಜೆಪಿ  ಸೇರಿಲ್ಲ. ಜನಸೇವೆಯ ಉದ್ದೇಶದಿಂದ ಸೇರಿದ್ದೇನೆ. ಅಧಿಕಾರ ಅಥವಾ ಹುದ್ದೆ ಲಭಿಸಿದರೆ ಅದು ಹೆಚ್ಚುವರಿ ಜವಾಬ್ದಾರಿಯಷ್ಟೇ. ಆದರೆ, ನನ್ನ ರಾಜಕೀಯ ಜೀವನದ ಮೂಲ ಉದ್ದೇಶ ಜನರ ಸೇವೆ ಮತ್ತು ಕರ್ನಾಟಕದ ಸಮಗ್ರ ಅಭಿವೃದ್ಧಿಯೇ ಆಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೇವೆಯೇ ನೈಜ ಶಕ್ತಿ
ನಾನು ಯಾವುದೇ ಅಧಿಕಾರ ಅಥವಾ ಹುದ್ದೆಗಾಗಿ ಪರಿತಪಿಸುತ್ತಿಲ್ಲ. ಹುದ್ದೆಗಳು ವ್ಯಕ್ತಿಯನ್ನು ದೊಡ್ಡವನನ್ನಾಗಿ ಮಾಡದು. ಜನರ ವಿಶ್ವಾಸ ಮತ್ತು ಸೇವೆಯೇ ವ್ಯಕ್ತಿಯ ನಿಜವಾದ ಶಕ್ತಿ ಎನ್ನುವುದು ನನ್ನ ನಂಬಿಕೆ. ಅಧಿಕಾರ ಲಭಿಸಿದರೆ ಜನರ ಸೇವೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಬಹುದು. ಅಧಿಕಾರ ಎನ್ನುವುದು ನನ್ನ ಪಾಲಿಗೆ ಗೌರವ ಅಥವಾ ಸ್ಥಾನಮಾನವಲ್ಲ. ಅದು ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಜವಾಬ್ದಾರಿಯಾಗಿದೆ ಎಂದು ತಿಳಿಸಿದ್ದಾರೆ.

ಎಲ್ಲರಿಗೂ ಚಿರಋಣಿ

ನನ್ನ ರಾಜಕೀಯ ಪಯಣದಲ್ಲಿ ವಿಶ್ವಾಸವಿಟ್ಟು ಬೆಂಬಲ ನೀಡುತ್ತಿರುವ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಜನತೆಗೆ ನಾನು ಸದಾ ಚಿರಋಣಿ. ಅವರ ಪ್ರೀತಿ, ವಿಶ್ವಾಸ ಮತ್ತು ಆಶೀರ್ವಾದವೇ ನನಗೆ ಮತ್ತಷ್ಟು ಶಕ್ತಿ ನೀಡುತ್ತಿದೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿ ಮತ್ತು ವದಂತಿಗಳಿಗೆ ಕಿವಿಗೊಡಬೇಡಿ. ಅಧಿಕೃತ ಮಾಹಿತಿಯನ್ನಷ್ಟೇ ನಂಬಿ ಎಂದು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
"

ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ. ಜವಾಬ್ದಾರಿ ಸಿಗದಿದ್ದರೂ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಜನರ ಮಧ್ಯೆ ಕೆಲಸ ಮುಂದುವರಿಸುತ್ತೇನೆ. ಮುಂದಿನ ದಿನಗಳಲ್ಲಿ ಪಕ್ಷದ ನಾಯಕರು ನನ್ನ ಕಾರ್ಯ, ಪಕ್ಷ ನಿಷ್ಠೆ ಹಾಗೂ ಜನಸೇವೆಯ ಬದ್ಧತೆಯನ್ನು ಖಂಡಿತವಾಗಿಯೂ ಗುರುತಿಸಿ ಸೂಕ್ತ ಹಾಗೂ ಉತ್ತಮ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ.

— ಪ್ರಮೋದ್​ ಮಧ್ವರಾಜ್​. ಮಾಜಿ ಸಚಿವ.