fraud 
ಉಡುಪಿ

ಜಾಹೀರಾತು ನೋಡಿ 4.35 ಲಕ್ಷ ರೂ. ದೋಖಾ!

ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಕಾರ್ಕಳ: ಫೇಸ್‌ಬುಕ್‌ನಲ್ಲಿ ಬಂದ ಕಡಿಮೆ ಬೆಲೆಯ ಇಲೆಕ್ಟ್ರಿಕ್ ಕಾರು ಮಾರಾಟದ ಜಾಹೀರಾತನ್ನು ನಂಬಿ ಬೆಳ್ಮಣ್ ಗ್ರಾಮದ ನಿವಾಸಿಯೊಬ್ಬರು ಲಕ್ಷಾಂತರ ಹಣ ಕಳೆದುಕೊಂಡಿದ್ದಾರೆ.

ಬೆಳ್ಮಣ್ ಗ್ರಾಮದ ಪುನರು ನಿವಾಸಿ ಬಾಲಕೃಷ್ಣ ರಾವ್(48) ವಂಚನೆಗೊಳಗಾದವರು. ಆ.20ರ ರಾತ್ರಿ ಬಾಲಕೃಷ್ಣ ಅವರು ಫೇಸ್‌ಬುಕ್ ನೋಡುತ್ತಿದ್ದಾಗ, ಟಾಟಾ ಪಂಚ್ ಇಲೆಕ್ಟ್ರಿಕ್ ಕಾರು ಮಾರಾಟಕ್ಕಿದೆ ಎಂಬ ಜಾಹೀರಾತು ಕಾಣಿಸಿತು. ಕಾರು ಖರೀದಿಸುವ ಉದ್ದೇಶದಿಂದ ಮೊಬೈಲ್ ನಂಬರನ್ನು ಕಳುಹಿಸಿದ್ದರು. ನಂತರ ಕರೆ ಮಾಡಿದ ಅಪರಿಚಿತನಬ್ಬ, ತಾನು ಚಿಕ್ಕಮಗಳೂರು ಜಿಲ್ಲೆಯ ನಿವಾಸಿ ವೈದ್ಯ ರವಿಚಂದ್ರ ಎಂದು ಪರಿಚಯಿಸಿಕೊಂಡಿದ್ದಾನೆ. ತನ್ನ ಬಳಿಯಿರುವ ಇಲೆಕ್ಟ್ರಿಕ್ ಕಾರಿನ ಬೆಲೆ 4,50,000 ರೂ. ಎಂದು ತಿಳಿಸಿ ಲೊಕೇಶನ್ ಕಳುಹಿಸಿದ್ದಾನೆ.

ಆರೋಪಿಯ ಮಾತನ್ನು ನಂಬಿದ ಬಾಲಕೃಷ್ಣ , ಕಾರು ಖರೀದಿಸಲು ಹಂತ ಹಂತವಾಗಿ ಹಣ ಪಾವತಿಸಿದ್ದಾರೆ. ಆರಂಭದಲ್ಲಿ ಆರೋಪಿ ನೀಡಿದ ನಂಬರಿಗೆ ಪೇಟಿಎಂ ಮುಖಾಂತರ 45 ಸಾವಿರ ರೂ., ಬಳಿಕ ಬ್ಯಾಂಕ್ ಖಾತೆಯಿಂದ 3 ಲಕ್ಷ ರೂ. ವರ್ಗಾಯಿಸಿದ್ದಾರೆ. ಅದೇ ದಿನ ಮತ್ತೆ ಪೇಟಿಎಂ ಮೂಲಕ 45 ಸಾವಿರ ರೂ. ಹಾಗೂ ಫೋನ್ ನಂಬರಿಗೆ ಮತ್ತೆ 45 ಸಾವಿರ ರೂ. ಜಮಾ ಮಾಡಿದ್ದು, ಒಟ್ಟು 4,35,000 ರೂ. ನೀಡಿದ್ದಾರೆ.

ಕಾರನ್ನು ಪಡೆಯಲು ಆರೋಪಿ ಸೂಚಿಸಿದ್ದ ಚಿಕ್ಕಮಗಳೂರಿನ ಮತ್ತಿಕೆರೆಗೆ ತೆರಳಿದಾಗ ಯಾರೂ ಇರಲಿಲ್ಲ. ಕೂಡಲೇ ಆರೋಪಿಗೆ ಫೋನ್ ಮಾಡಿ ವಿಚಾರಿಸಿದಾಗ, ತಾನು ಮಡಿಕೇರಿಯ ವಿರಾಜ್‌ಪೇಟೆಯಲ್ಲಿದ್ದು, ಕಾರಿನಲ್ಲಿ ಚಾರ್ಜ್ ಇಲ್ಲದೆ ಶಟ್‌ಡೌನ್ ಆಗಿದ್ದು, ವಾರದೊಳಗೆ ರಿಪೇರಿ ಮಾಡಿಸಿ ಮನೆಗೆ ಕಳುಹಿಸುವುದಾಗಿ ನಂಬಿಸಿದ್ದಾನೆ. ದಿನಗಳು ಕಳೆದರೂ ಕಾರು ಸಿಗಲಿಲ್ಲ ಹಾಗೂ ಹಣ ಬಾರದಿದ್ದರಿಂದ ತಾವು ಮೋಸ ಹೋಗಿರುವುದು ತಿಳಿದು, ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.