ಆಳ್ವಾಸ್ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ಪಾಲಕ-ಶಿಕ್ಷಕ ಸಮಾವೇಶದಲ್ಲಿ ಡಾ.ಎಂ.ಮೋಹನ ಆಳ್ವ, ಮೊಹಮ್ಮದ್ ಸದಾಕತ್, ವೇಣುಗೋಪಾಲ ಶೆಟ್ಟಿ ಮತ್ತಿತರರಿದ್ದರು.
ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಆಳ್ವಾಸ್ ಪದವಿಪೂರ್ವ ಕಾಲೇಜಿನಲ್ಲಿ 16 ವಿಭಾಗಗಳಲ್ಲಿ ಶಿಕ್ಷಣ ನೀಡಲಾಗುತ್ತಿದ್ದು, ಎನ್‌ಸಿಇಆರ್‌ಟಿ ಪಠ್ಯಕ್ರಮದ ಜತೆಗೆ ವಿವಿಧ ಪ್ರವೇಶ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತಿದೆ. ವಿದ್ಯಾರ್ಥಿಗಳ ಆರ್ಥಿಕ ಹಿನ್ನೆಲೆ ಶಿಕ್ಷಣಕ್ಕೆ ಅಡ್ಡಿಯಾಗಬಾರದು ಎಂಬ ಉದ್ದೇಶದಿಂದ ಪದವಿಪೂರ್ವ ವಿದ್ಯಾರ್ಥಿಗಳ ವಿದ್ಯಾರ್ಥಿವೇತನಕ್ಕೆ 28.62 ಕೋಟಿ ರೂ. ನೀಡಲಾಗುತ್ತಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ತಿಳಿಸಿದರು.
ಆಳ್ವಾಸ್‌ನ ಕೃಷಿಸಿರಿ ವೇದಿಕೆಯಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳ ಪಾಲಕ-ಶಿಕ್ಷಕ ಸಮಾವೇಶದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಭವಿಷ್ಯದ ಶಿಕ್ಷಣ ಹಾಗೂ ವೃತ್ತಿಜೀವನಕ್ಕೆ ಪಿಯು ಶಿಕ್ಷಣ ಹಂತವು ಭದ್ರ ಅಡಿಪಾಯವಾಗಬೇಕು. ಆಳ್ವಾಸ್ ಪದವಿಪೂರ್ವ ಕಾಲೇಜಿನಲ್ಲಿ ಪಠ್ಯಕ್ರಮದ ಜತೆಗೆ ಸಿಇಟಿ, ನೀಟ್, ನಾಟಾ, ಎನ್‌ಡಿಎ, ಸಿಎ, ಸಿಎಸ್, ಯುಪಿಎಸ್ಸಿ ಹಾಗೂ ಕ್ಲಾಟ್ ಸೇರಿದಂತೆ ವಿವಿಧ ಪ್ರವೇಶ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕ ತರಬೇತಿ ಒದಗಿಸಲಾಗುತ್ತಿದೆ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಪ್ರತಿ ವಷರ್ 7080 ಕೋಟಿ ರೂ.ವಿದ್ಯಾರ್ಥಿವೇತನ ಹಾಗೂ ಶೈಕ್ಷಣಿಕ ನೆರವಿಗಾಗಿ ವಿನಿಯೋಗಿಸುತ್ತಿದೆ. ಇದರಲ್ಲಿ ಪದವಿಪೂರ್ವ ಶಿಕ್ಷಣದ ವಿದ್ಯಾರ್ಥಿಗಳಿಗಾಗಿ 28.62 ಕೋಟಿ ರೂ.ವಿದ್ಯಾರ್ಥಿವೇತನಕ್ಕಾಗಿ ನೀಡಲಾಗುತ್ತಿದೆ ಎಂದರು.
ಕಾಲೇಜಿನ ಶೈಕ್ಷಣಿಕ ವ್ಯವಸ್ಥೆ, ವಿದ್ಯಾರ್ಥಿಗಳ ಪ್ರಗತಿ, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ, ವಿದ್ಯಾರ್ಥಿ ಕಲ್ಯಾಣ ಹಾಗೂ ಪಾಲಕರು-ಶಿಕ್ಷಕರ ಸಮನ್ವಯ ಕುರಿತು ಚರ್ಚಿಸಲಾಯಿತು. ವಿಜ್ಞಾನ ವಿಭಾಗದ 2219 ವಿದ್ಯಾರ್ಥಿಗಳ ಪಾಲಕರು ಹಾಗೂ ಬೋಧಕ ಸಿಬ್ಬಂದಿ ಸಭೆಯಲ್ಲಿ ಭಾಗವಹಿಸಿದ್ದರು.
ಆಳ್ವಾಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಮೊಹಮ್ಮದ್ ಸದಾಕತ್, ವಿವಿಧ ಶೈಕ್ಷಣಿಕ ವಿಭಾಗಗಳ ಮುಖ್ಯಸ್ಥರು ಇದ್ದರು. ಕನ್ನಡ ವಿಭಾಗದ ಮುಖ್ಯಸ್ಥ ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.