ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಅರುಣ್ ಕುಮಾರ್ ಶಿರೂರು ಅವರಿಗೆ ರೋಟರಿ ಜಿಲ್ಲಾ ನಿಕಟಪೂರ್ವ ಸಹಾಯಕ ಗವರ್ನರ್ ಡಾ.ಉಮೇಶ್ ಪುತ್ರನ್ ಪದಪ್ರದಾನಿಸಿದರು. ಪ್ರಮುಖರಾದ ಕೆ.ಬಾಬು ಶೆಟ್ಟಿ, ಅರುಣ್ ಕುವಾರ್ ಶಿರೂರು, ಶ್ರೀನಾಥ ರಾವ್ ಮತ್ತಿತರರು ಇದ್ದರು.
ಬೈಂದೂರು: ರೋಟರಿ ಬಂಧುಗಳು ವಿಶ್ವದ ಸೇವೆಯ ಕೈಂಕರ್ಯವನ್ನು ನಡೆಸುತ್ತಿರುವುದು, ಸ್ವಂತ ದುಡಿಮೆಯ ಒಂದು ಭಾಗವನ್ನು ಸೇವೆಯ ರೂಪದಲ್ಲಿ ವಿನಿಯೋಗಿಸುತ್ತಿರುವುದು ಅಭಿನಂದನೀಯ ಎಂದು ರೋಟರಿ ಜಿಲ್ಲಾ ನಿಕಟಪೂರ್ವ ಸಹಾಯಕ ಗವರ್ನರ್ ಡಾ.ಉಮೇಶ್ ಪುತ್ರನ್ ಹೇಳಿದರು.
ಬೈಂದೂರು ರೋಟರಿ ಸಮುದಾಯ ಭವನದಲ್ಲಿ ಬುಧವಾರ 2026-27ನೇ ಸಾಲಿನ ಪದಾಧಿಕಾರಿಗಳಿಗೆ ಪದ ಪ್ರದಾನಿಸಿ ಮಾತನಾಡಿದರು.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ ಮಾತನಾಡಿ, ಬೈಂದೂರು ವ್ಯಾಪ್ತಿಯಲ್ಲಿ ಕಳೆದ ನಾಲ್ಕು ದಶಕಗಳಿಂದ ಅನೇಕ ಹಿರಿಯರು ಕಟ್ಟಿ ಬೆಳೆಸಿದ ಈ ಸಂಸ್ಥೆ ಅತ್ಯುತ್ತಮ ಗುಣಮಟ್ಟದ ಕಾರ್ಯಕ್ರಮಗಳ ಮೂಲಕ ಗುರುತಿಸಿಕೊಂಡಿದೆ ಎಂದರು.
ಅಧ್ಯಕ್ಷ ಅರುಣ್ ಕುಮಾರ್ ಶಿರೂರು ಅಧ್ಯಕ್ಷತೆ ವಹಿಸಿದ್ದರು. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಅಶಕ್ತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲಾಯಿತು. ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಗಾಲಿಕುರ್ಚಿ ಹಸ್ತಾಂತರಿಸಲಾಯಿತು. ರೋಟರಿ ವಲಯ 1ರ ಸಹಾಯಕ ಗವರ್ನರ್ ಶ್ರೀನಾಥ ರಾವ್ ಅವರು ಜತೀಂದ್ರ ಮರವಂತೆ ಅವರ ಸಂಪಾದಕತ್ವದ ರೋಟರಿ ಬುಲೆಟಿನ್ ಬಿಡುಗಡೆಗೊಳಿಸಿದರು.
ನಿಕಟಪೂರ್ವ ಕಾರ್ಯದರ್ಶಿ ಕಾರಿಕಟ್ಟೆ ಪ್ರದೀಪ ಕುವಾರ್ ಶೆಟ್ಟಿ ಗತ ಸಾಲಿನ ವರದಿ ಮಂಡಿಸಿದರು. ವಲಯ ಸೇನಾನಿ ಪ್ರಶಾಂತ ಹವಾಲ್ದಾರ್ ಉಪಸ್ಥಿತರಿದ್ದರು. ನಿಕಟಪೂರ್ವ ಅಧ್ಯಕ್ಷ ಸುಬ್ರಹ್ಮಣ್ಯ ಜಿ.ಉಪ್ಪುಂದ ಸ್ವಾಗತಿಸಿದರು. ಕಾರ್ಯದರ್ಶಿ ಮಣಿಕಂಠ ದೇವಾಡಿಗ ವಂದಿಸಿದರು. ಆನಂದ ಮದ್ದೋಡಿ ಮತ್ತು ಸುಧಾಕರ ಪಿ. ನಿರೂಪಿಸಿದರು.