ಉಡುಪಿ: ಕಾರ್ಕಳ ತಾಲೂಕಿನ ಇತಿಹಾಸ ಪ್ರಸಿದ್ಧ ನಂದಳಿಕೆಯ ಕೆದಿಂಜೆ ಜುಮಾದಿ ದೈವಸ್ಥಾನದ ಬಳಿಯ ದಾಸಂದ ಬಾಕ್ಯಾರ್ ಎಂಬಲ್ಲಿ ಸಂಗಮ ರಾಜಮನೆತನದ 3ನೇ ಪ್ರಸಿದ್ಧ ದೊರೆ 2ನೇ ಹರಿಹರನ ಆಳ್ವಿಕೆಗೆ ಸಂಬಂಧಿಸಿದ ಶಿಲಾ ಶಾಸನ ಪತ್ತೆಯಾಗಿದೆ ಎಂದು ಪುರಾತತ್ತ್ವ ವಿದ್ವಾಂಸ, ಆದಿಮಕಲಾ ಟ್ರಸ್ಟ್ (ರಿ.), ಉಡುಪಿಯ ಸ್ಥಾಪಕ ಸಂಚಾಲಕ ಪ್ರೊ. ಟಿ.ಮುರುಗೇಶಿ ಮಾಹಿತಿ ನೀಡಿದ್ದಾರೆ.
ಬಳಪದ ಕಲ್ಲಿನ ಮೇಲೆ ಕನ್ನಡ ತುಳು ಮಿಶ್ರಿತ ಭಾಷೆ ಹಾಗೂ ಕನ್ನಡ ಲಿಪಿಯಲ್ಲಿ ಶಾಸನ ಬರೆಯಲಾಗಿದೆ. ಈ ಶಾಸನವನ್ನು ಮುಲ್ಕಿ ಸುಂದರ ರಾಮ ಶೆಟ್ಟಿ ಕಾಲೇಜ್ನ ಪ್ರಥಮ ಬಿಎ ಪುರಾತತ್ತ್ವ ಶಾಸ್ತ್ರ ವಿಭಾಗದ ಸಿಂಚಿತ ಎಂ. ಮತ್ತು ಶೋಧನ್ ಬಿ. ಮಾಹಿತಿ ನೀಡಿದ್ದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಾಸನದ ವಿವರ
ಶಾಸನವು ಸ್ವಸ್ತಿಕ ಲಾಂಛನ ಮತ್ತು ಶೈವ ಸ್ತುತಿಯೊಂದಿಗೆ ಆರಂಭವಾಗಿದೆ. ಕಾಲಮಾನ ಶಕ ವರ್ಷ 1039, ಪ್ರಭವ ಸಂವತ್ಸರ, ಬ-3 ಎಂದು ಉಲ್ಲೇಖಿಸಲಾಗಿದೆ. ಈ ಕಾಲಮಾನವು ಕ್ರಿ.ಶ. 1116-17ಕ್ಕೆ ಸೇರುತ್ತದೆ. ಆದರೆ, ವಿಜಯನಗರದ ಯಾವುದೇ ಇತಿಹಾಸಕ್ಕೆ ಇದು ತಾಳೆಯಾಗದು. ಶಕ ವರ್ಷ 1309 ಉದ್ದೇಶಿತ ಕಾಲಮಾನವಾಗಿರಬಹುದು. ಶಕ 1309, ಶಾಸನೋಕ್ತ ಪ್ರಭವ ಸಂವತ್ಸರಕ್ಕೆ ಸರಿಹೊಂದುತ್ತದೆ . ಕ್ರಿ.ಶ. 1386ರಲ್ಲಿ ಮಹಾಪ್ರಧಾನ ಮಲ್ಲಪ್ಪ ಒಡೆಯರು, ಬಾರಕೂರು ರಾಜ್ಯದ ರಾಜ್ಯಪಾಲರಾಗಿದ್ದರೆಂದು ನೀಲಾವರ ಮತ್ತು ಆತ್ರಾಡಿಯ ಶಾಸನದಿಂದ ತಿಳಿದುಬರುತ್ತದೆ. ಪ್ರಸ್ತುತ ಶಾಸನವೂ ಸಹ ಮಲ್ಲಪ್ಪ ಒಡೆಯರು ಬಾರಕೂರಿನ ರಾಜ್ಯಪಾಲರಾಗಿದ್ದ ವಿಷಯ ತಿಳಿಸುತ್ತದೆ.
ಶಾಸನವು 2ನೇ ಹರಿಹರನ 10ನೇ ವರ್ಷದ ಆಳ್ವಿಕೆಯ ಶಾಸನವಾಗಿದ್ದು, ಕ್ರಿ.ಶ. 1387ಕ್ಕೆ ಸೇರಿದೆಯೆಂದು ನಿರ್ಣಯಿಸಬಹುದು. 2ನೇ ಹರಿಹರನನ್ನು ಪೂರ್ವ, ದಕ್ಷಿಣ ಮತ್ತು ಪಶ್ಚಿಮ ಸಮುದ್ರಾಧಿಶ್ವರಂ, (ಅಂದರೆ ಮೂರು ಸಮುದ್ರಗಳಿಂದ ಸುತ್ತುವರೆಯಲ್ಪಟ್ಟ ಪ್ರದೇಶ) ಶ್ರೀ ವೀರ ಹರಿಯಪ್ಪ ವೊಡೆಯರು (ಸಾಮ್ರಾಜ್ಯ ಸ್ಥಾಯಿಗಳಾಗಿದ್ದಲ್ಲಿ), ನಿರೂಪದಿಂದ ಮನ್ಮಹಾ ಬಾರಕೂರು ರಾಜ್ಯವನು ಆಳುತ್ತಿದ್ದರೆಂದು ಶಾಸನ ತಿಳಿಸುತ್ತದೆ.
ಮಲ್ಲಪ್ಪ ವೊಡೆಯರು ದತ್ತಾಳ್ವರ ಬಳಿಯ ರಾಜ್ಯವನು ಸಂಗಣ ಜಯ ಅರಸರಿಗೆ ಕೊಟ್ಟರೆಂದು ತಿಳಿಸುತ್ತದೆ. ಆ ಜಯ ಅರಸನು ನಂದಳಿಕೆಯ ಎರಡು ಬಾಳನ್ನು ಕೋಟೀಶ್ವರಾಳ್ವ ಮತ್ತು ಕಡಂಬಾಳ್ವರೆಂಬ ಅಣ್ಣತಮ್ಮಂದಿರಿಗೆ ಬ್ರಹ್ಮಾದಾಯವಾಗಿ ನೀಡಿದ ವಿಷಯವನ್ನೂ ಶಾಸನ ನಿರೂಪಿಸುತ್ತದೆ. ಈ ಎರಡೂ ಬಾಳಿನವರು ಕಾರ್ಕಳದ ಬ್ರಹ್ಮೀಸ್ವರ ದೇವರಿಗೆ ಪುರಾಣ ಹೇಳುವ ಬ್ರಾಣಂಗೆ ಪ್ರತಿವರ್ಷ ಆರು ಮೂಡೆ ಭತ್ತ ತಪ್ಪದೆ ನೀಡಬೇಕೆಂದು ಜಯ ಅರಸರು ಮಾಡಿದ ಧರ್ಮದ ಅಡಕದ ಬಗ್ಗೆ ಪ್ರಸ್ತಾಪವಿದೆ. ಈ ಅಡಕಕ್ಕೆ ತಪ್ಪಿದವರು ಅರಸನಿಗೆ ಗದ್ಯಾಣ 500, ದೇವರಿಗೆ ಗದ್ಯಾಣ 250 ನೀಡಬೇಕೆಂದು ತಿಳಿಸುತ್ತದೆ.
ಶಾಸನವನ್ನು ಬರೆದವನು ಜಯ ಅರಸರ ಸೇನಭೋವ ವಿಟ್ಟಣ್ಣ ಎಂಬುವನು. ಕೊನೆಯಲ್ಲಿ
ಶಾಪಾಶಯದೊಂದಿಗೆ ಮಂಗಳ ಹಾಡಲಾಗಿದೆ. ಶಾಸನದಲ್ಲಿ ಸಂಭುವೇ, ಸಾಲೆತ್ತಿಯ, ನಟ್ಟು, ಕಿನ್ನಿ, ಯಿಲಡ, ಮುಂತಾದ ತುಳು ಶಬ್ದಗಳು ಬಳಕೆಯಾಗಿವೆ ಎಂದು ಮಾಹಿತಿ ನೀಡಿದ್ದಾರೆ.
ಶಾಸನಾಧ್ಯಯನದಲ್ಲಿ ನಂದಳಿಕೆ ಅರಮನೆಯ ಸುಹಾಸ್ ಹೆಗ್ಡೆ, ಸರಳಾ ಎಸ್. ಹೆಗ್ಡೆ, ಮೂಲ್ಕಿಯ ಗಜನಿ ಫೌಂಡೇಷನ್ನ ಅಧ್ಯಕ್ಷ ಸುರೇಶ ಚಿತ್ರಾಪು, ರಾಣಿ ಚಿಕ್ಕಾಯಿ ತಾಯಿ ಚಾರಿಟೇಬಲ್ ಟ್ರಸ್ಟ್ನ ಸ್ಥಾಪಕಾ ಧ್ಯಕ್ಷ ರಘುರಾಮ ಶೆಟ್ಟಿ ಸಹಕರಿದ್ದಾರೆ.
ಶಾಸನವು ಮಧ್ಯಯುಗೀನ ನಂದಳಿಕೆಯ ಅರಸು ಮನೆತನದ ಆರಂಭಿಕ ಚರಿತ್ರೆಯ ಮೇಲೆಬೆಳಕು ಚೆಲ್ಲುತ್ತದೆ. ಸಾಲೆತ್ತಿ ಬಳಿಯ ದಾಸೆಟ್ಟಿಯರ ಅಳಿಯ ಕೋಟೀಶ್ವರಾಳ್ವರು ನಂದಳಿಕೆಯ ಜನನದ ಸೊಪ್ಪಿಕ್ಕಿದರು ಎಂದಿದೆ. ಅಂದರೆ 1387ರಲ್ಲಿ ನಂದಳಿಕೆಯ ಅರಮನೆ ಕಟ್ಟಿಸಿದರೆಂದು ತಿಳಿದು ಬರುತ್ತದೆ. ಶಾಸನೋಕ್ತ ಸಂಗಣ ಜಯ ಅರಸರು ಯಾರು? ಕಾರ್ಕಳದ ಬ್ರಹ್ಮೀಸ್ವರ ದೇವರ ದೈವಸ್ಥಾನ ಎಲ್ಲಿದೆ ಎನ್ನುವುದನ್ನು ಪತ್ತೆ ಹಚ್ಚಬೇಕಿದೆ.ಪ್ರೊ.ಟಿ.ಮುರುಗೇಶಿ. ಪುರಾತತ್ತ್ವ ವಿದ್ವಾಂಸ.