ಉಡುಪಿ: ಗಣಿ ಇಲಾಖೆಯಿಂದ ಯಾವುದೇ ಪರವಾನಗಿ ಪಡೆಯದೆ ಸರ್ಕಾರಿ ಜಾಗದಲ್ಲಿ ಬಂಡೆ ಕಲ್ಲುಗಳನ್ನು ಸ್ಫೋಟಕ ವಸ್ತುಗಳನ್ನು ಬಳಸಿ ಅನಧಿಕೃತವಾಗಿ ಒಡೆದ ಇಬ್ಬರ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ ತಾಲೂಕು ಮರ್ಣೆ ಗ್ರಾಮದ ಕುಕ್ಕಿಪಲ್ಕೆ ಪ್ರದೇಶದಲ್ಲಿರುವ ಸ 1.54 ಎಕರೆ ವಿಸ್ತೀರ್ಣದ ಸರ್ಕಾರಿ ಸ್ಥಿರಾಸ್ತಿ ಜಮೀನಿನಲ್ಲಿ ಸೆ.5ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಆರೋಪಿತರಾದ ರೋಜಿನಾ ರೋಡ್ರಿಗಸ್ ಹಾಗೂ ಅವರ ಪರವಾಗಿ ಅಧಿಕಾರ ಪತ್ರ ಹೊಂದಿರುವ ರಿಚಾರ್ಡ್ ಪೌಲ್ ಫೆರಾವೋ ಅವರು ಯಾವುದೇ ಸಂಬಂಧಪಟ್ಟ ಇಲಾಖೆಯ ಅನುಮತಿ ಅಥವಾ ಪರವಾನಗಿ ಪಡೆಯದೇ ಜಾಗದಲ್ಲಿದ್ದ ಬಂಡೆ ಕಲ್ಲುಗಳನ್ನು ಯಾವುದೋ ಸ್ಫೋಟಕ ವಸ್ತುವನ್ನು ಬಳಸಿ ಅನಧಿಕೃತವಾಗಿ ಸ್ಫೋಟಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಮರ್ಣೆ ಗ್ರಾಮದ ಜೆರಾಲ್ಡ್ ನೊರೋಹ್ನ (42) ನೀಡಿದ ದೂರಿನ ಆಧಾರದ ಮೇಲೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.