ಮೂಡುಬಿದಿರೆ ಪೇಟೆಯ ವಿವಿದೆಡೆ ಸಮರ್ಪಕ ವ್ಯವಸ್ಥೆ ಇಲ್ಲದೆ ಜನರು ತೊಂದರೆ ಅನುಭವಿಸುತ್ತಿದ್ದಾರೆ. 
ಉಡುಪಿ

ಮಳೆ ಆರಂಭದಲ್ಲೇ ಹದಗೆಟ್ಟ ರಸ್ತೆಗಳು

ಯಶೋಧರ ವಿ.ಬಂಗೇರ ಮೂಡುಬಿದಿರೆ
ಪೇಟೆಯ ವಿಜಯನಗರ ರಸ್ತೆ, ದೊಡ್ಡಮನೆ ರಸ್ತೆ ಸೇರಿದಂತೆ ನಗರದ ಹಲವು ಪ್ರಮುಖ ಭಾಗಗಳು ಮಳೆಗಾಲದ ಆರಂಭದಲ್ಲೇ ಸಂಪೂರ್ಣ ಹದಗೆಟ್ಟಿದ್ದು, ಸಾರ್ವಜನಿಕರಿಗೆ ಕೃತಕ ನೆರೆಯ ಭೀತಿ ಎದುರಾಗಿದೆ. ಕಳೆದ ಹತ್ತು ತಿಂಗಳುಗಳಿಂದ ರಸ್ತೆಗಳಲ್ಲಿ ಬಿದ್ದಿರುವ ಬೃಹತ್ ಹೊಂಡಗಳನ್ನು ಮುಚ್ಚಲು ಮೂಡುಬಿದಿರೆ ಪುರಸಭೆ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾರ್ಡ್‌ವೇರ್, ವಿದ್ಯುತ್ ಹಾಗೂ ವಿವಿಧ ಪ್ರಮುಖ ವಾಣಿಜ್ಯ ಸಂಸ್ಥೆಗಳಿರುವ ವಿಜಯನಗರ ರಸ್ತೆ ಸಂಪೂರ್ಣ ಹೊಂಡಗುಂಡಿಗಳಿಂದ ಆವೃತವಾಗಿದೆ. ಕೇವಲ ಒಂದು ಗಂಟೆಯೊಳಗೆ ಮುಗಿಸಬಹುದಾದ ಸರಳ ರಸ್ತೆ ತೇಪೆ (ಪ್ಯಾಚ್ ವರ್ಕ್) ಕಾರ್ಯವನ್ನು ವರ್ಷದಿಂದ ನಿರ್ಲಕ್ಷಿಸಿರುವುದು ಸಾರ್ವಜನಿಕರ ತೀವ್ರ ನಿರಾಶೆಗೆ ಕಾರಣವಾಗಿದೆ.

ಅಪಘಾತಗಳ ಸರಣಿ

ಪ್ರತಿದಿನ ಈ ರಸ್ತೆಯನ್ನು ಬಳಸುವ ಗ್ರಾಹಕರು, ಪ್ರಯಾಣಿಕರು ಹಾಗೂ ವ್ಯಾಪಾರಸ್ಥರ ಸುರಕ್ಷತೆಯನ್ನು ಪುರಸಭೆ ಕಡೆಗಣಿಸಿದೆ. ಇದು ದ್ವಿಚಕ್ರ ವಾಹನ ಸವಾರರಿಗೆ ಗಂಭೀರ ಅಪಾಯವನ್ನು ಉಂಟುಮಾಡುತ್ತಿದ್ದು, ನಿರಂತರ ಅಪಘಾತಗಳಿಗೆ ಕಾರಣವಾಗುತ್ತಿದೆ. ತಕ್ಷಣವೇ ಈ ಸಮಸ್ಯೆಯನ್ನು ಬಗೆಹರಿಸದಿದ್ದರೆ, ರಸ್ತೆಯ ಹೊಂಡ ಬಿದ್ದು ವರ್ಷ ತುಂಬುತ್ತಿರುವುದನ್ನು ಖಂಡಿಸಿ ಹೊಂಡದ ವಾರ್ಷಿಕೋತ್ಸವವನ್ನು ಆಚರಿಸಬೇಕಾಗುತ್ತದೆ ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.

ಸಂಚಾರ ಸಂಕಷ್ಟ


ಕೃಷ್ಣ ಕಟ್ಟೆಯ ಬಳಿ, ಹಳೇ ಮಾರುಕಟ್ಟೆ ಹಾಗೂ ಸದ್ಯ ನಿರ್ಮಾಣವಾಗುತ್ತಿರುವ ಹೊಸ ಮಾರುಕಟ್ಟೆ ಕಟ್ಟಡದ ಪರಿಸರದಲ್ಲಿ ಈ ತೊಂದರೆ ತೀರಾ ಹಳೆಯದಾಗಿದೆ. ಮಳೆ ಬಂದಾಗ ಈ ಜಾಗ ಸಂಪೂರ್ಣ ಹೊಳೆಯಂತಾಗುತ್ತದೆ. ನಾಲ್ಕು ದಿಕ್ಕಿನಿಂದಲೂ ನೀರು ಹರಿದು ಬರುವುದರಿಂದ ಸಾರ್ವಜನಿಕರು ರಸ್ತೆ ದಾಟಲು ಹರಸಾಹಸ ಪಡಬೇಕಾಗುತ್ತದೆ. ಅದಕ್ಕೆ ಸರಿಯಾಗಿ ಮಾರುಕಟ್ಟೆ ಕಟ್ಟಡದ ಎದುರಲ್ಲಿ ಸಾಲಾಗಿ ವಾಹನಗಳನ್ನು ಪಾರ್ಕಿಂಗ್ ಮಾಡಿ ತೆರಳುವುದು ಸಂಚಾರ ದಟ್ಟಣೆಯನ್ನು ಮತ್ತಷ್ಟು ಹೆಚ್ಚಿಸುತ್ತಿದೆ. ವಾಹನಗಳು ವೇಗವಾಗಿ ಚಲಿಸುವಾಗ ರಸ್ತೆಯ ಕೆಸರು ನೀರು ಪಾದಚಾರಿಗಳ ಮೇಲೆ ಹಾರುತ್ತಿದ್ದು, ಸಾರ್ವಜನಿಕ ಸಂಚಾರ ದುಸ್ತರವಾಗಿದೆ.

ಸಂಪೂರ್ಣ ವೈಫಲ್ಯ

ನಗರದ ಪ್ರಮುಖ ರಸ್ತೆಗಳಲ್ಲಿ ಮಳೆ ನೀರು ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದಿರುವುದೇ ಈ ಎಲ್ಲ ಅವಾಂತರಗಳಿಗೆ ಕಾರಣ ಎಂದು ಸ್ಥಳೀಯರು ದೂರಿದ್ದಾರೆ. ವಿಜಯನಗರದ ಮಳೆ ನೀರು ಎಡಭಾಗದಿಂದ ಬಲಭಾಗಕ್ಕೆ ಹರಿಯುತ್ತಿದ್ದು, ಮೆಸ್ಕಾಂ ಜಂಕ್ಷನ್‌ವರೆಗೆ ಬಲಭಾಗದಲ್ಲಿ ಯಾವುದೇ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲ. ಪ್ರತಿ ವರ್ಷ ಮಳೆಯ ದಿನಗಳಲ್ಲಿ ಇದೇ ಪರಿಸ್ಥಿತಿ ಮರುಕಳಿಸುತ್ತಿದೆ. ಇನ್ನೊಂದೆಡೆ, ದೊಡ್ಡಮನೆ ರಸ್ತೆಯಲ್ಲಿ ಇದುವರೆಗೆ ಯಾವುದೇ ಕಾಮಗಾರಿ ಆರಂಭವಾಗಿಲ್ಲ. ನೂತನವಾಗಿ ನಿರ್ಮಿಸಲಾದ ಚರಂಡಿಯಲ್ಲಿ ನೀರು ಹರಿಯುವ ಬದಲು ರಸ್ತೆಯಲ್ಲೇ ಹರಿಯುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಹೆದ್ದಾರಿಯಲ್ಲೂ ಕೆಸರು ನೀರು


ಮಂಗಳವಾರ ಸುರಿದ ಭಾರಿ ಮಳೆಯಿಂದಾಗಿ ಮೂಡುಬಿದಿರೆಯ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಲ್ಲಲ್ಲಿ ಕೆಂಪು ಕೆಸರು ನೀರು ತುಂಬಿಕೊಂಡು ಸಮಸ್ಯೆಯಾಗಿದೆ. ರಸ್ತೆಯ ನೀರು ಹತ್ತಿರದ ಅಂಗಡಿ ಹಾಗೂ ಮನೆಗಳೊಳಗೆ ನುಗ್ಗುವ ಭೀತಿ ಎದುರಾಗಿದ್ದು, ನಿವಾಸಿಗಳು ಆತಂಕದಲ್ಲಿದ್ದಾರೆ. ಮಳೆಗಾಲ ಮತ್ತಷ್ಟು ತೀವ್ರಗೊಳ್ಳುವ ಮುನ್ನವೇ ಮೂಡುಬಿದಿರೆ ಪುರಸಭೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ರಸ್ತೆ ದುರಸ್ತಿ ಮತ್ತು ಚರಂಡಿ ಸ್ವಚ್ಛತಾ ಕಾರ್ಯವನ್ನು ಯುದ್ಧೋಪಾದಿಯಲ್ಲಿ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಮೂಡುಬಿದಿರೆ ಪೇಟೆಯ ವಿವಿದೆಡೆ ಮಳೆಗೆ ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ಮುಖ್ಯವಾಗಿ ಹಳೇ ಬಸ್ ನಿಲ್ದಾಣದಿಂದ ತೊಡಗಿ ಕೃಷ್ಣಕಟ್ಟೆಯವರೆಗೂ 8-9 ವಷರ್ಗಳಿಂದಲೂ ನಿರ್ಮಾಣಹಂತದಲ್ಲಿರುವ ಬಹುಮಹಡಿಗಳ ಪುರಸಭಾ ಮಾರುಕಟ್ಟೆ ಸಂಕೀರ್ಣದ ಬುಡದಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ಮಳೆಗಾಲದುದ್ದಕ್ಕೂ ನೀರು ನಿಲ್ಲುವ ಸ್ಥಿತಿ ಇದೆ. ಈ ಸಂಕೀರ್ಣವು ಶೀಘ್ರವಾಗಿ ಸಾರ್ವಜನಿಕ ಮುಕ್ತವಾಗಿ ತೆರೆದುಕೊಳ್ಳಲಿ ಹಾಗೂ ಮಳೆ ನೀರು ಸರಾಗವಾಗಿ ಹೊರಗೆ ಹರಿದುಹೋಗುವ ವ್ಯವಸ್ಥೆ ತುರ್ತಾಗಿ ಆಗಲಿ ಎಂಬುದು ನಮ್ಮ ಆಗ್ರಹ.
-ಅಕ್ಷಯ್ ಜೈನ್, ನಮ್ಮ ಮೂಡುಬಿದಿರೆ ಫೋರಂ