ಹೆಂಗವಳ್ಳಿಯಲ್ಲಿ ಮರವೊಂದು ರಸ್ತೆಗೆ ಅಪಾಯಕಾರಿ ರೀತಿಯಲ್ಲಿ ವಾಲಿರುವುದು. 
ಉಡುಪಿ

ರಸ್ತೆ ಸಂಚಾರ ಮರಣಮೃದಂಗ!

ಇಂದಿರಾ ಎನ್ ಕೆ

ರಾಘವೇಂದ್ರ ಪೈ ಗಂಗೊಳ್ಳಿ ಕುಂದಾಪುರ

ಕುಂದಾಪುರ ಹಾಗೂ ಬೈಂದೂರು ತಾಲೂಕಿನ ನಗರ ಭಾಗದಿಂದ ಹಳ್ಳಿ ಭಾಗಕ್ಕೆ ಶಾಲಾ- ಕಾಲೇಜು ಮಕ್ಕಳು ತೆರಳುವ ಕಾಡು ರಸ್ತೆಗಳಲ್ಲಿ ಹಲವೆಡೆ ಅಪಾಯಕಾರಿ ಮರಗಳು ರಸ್ತೆಗೆ ವಾಲಿಕೊಂಡಿದ್ದು, ರಸ್ತೆಯಲ್ಲಿ ಸಂಚರಿಸುವವರಿಗೆ ಮರಣಮೃದಂಗ ಬಾರಿಸುವಂತಿದೆ. ಆದಷ್ಟು ಬೇಗ ಅವುಗಳನ್ನು ಅಥವಾ ಗೆಲ್ಲುಗಳನ್ನು ತೆರವು ವಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.
ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ಬರಿವಾರುವಿನ ಸಮೀಪದ ಕಲ್ಲೆಟ್ಟಿ ಎಂಬಲ್ಲಿ ಜುಲೈ 22ರಂದು ಶಾಲೆಯಿಂದ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದ ಬಸ್ ಮೇಲೆ ಬೃಹದಾಕಾರದ ಮರ ಬಿದ್ದು ಯುಕೆಜಿಯ ಮಗು ಮೃತಪಟ್ಟ ದಾರುಣ ಘಟನೆ ನಡೆದಿತ್ತು. ಇಂತಹ ಟನೆಗಳು ನಡೆಯದಂತೆ ಎಲ್ಲ ಕಡೆಗಳಲ್ಲಿ ಎಚ್ಚರ ವಹಿಸಬೇಕಾಗಿದೆ. ಅದಕ್ಕಾಗಿ ಕುಂದಾಪುರ ಹಾಗೂ ಬೈಂದೂರು ತಾಲೂಕಿನಲ್ಲೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂಬುದು ಮಕ್ಕಳ ಪಾಲಕರ ಆಗ್ರಹವಾಗಿದೆ.
ಹಾಲಾಡಿ- ಕೋಟೇಶ್ವರ ರಸ್ತೆ, ಹಾಲಾಡಿ- ಅವಾಸೆಬೈಲು ರಸ್ತೆ, ಅವಾಸೆಬೈಲು- ಮಡಾಮಕ್ಕಿ, ಶೇಡಿಮನೆ ರಸ್ತೆ, ಉಳ್ಳೂರು- ಸಿದ್ದಾಪುರ ರಸ್ತೆ, ಹೊಸಂಗಡಿ- ಸಿದ್ದಾಪುರ, ಸಿದ್ದಾಪುರ- ಹಳ್ಳಿಹೊಳೆ ರಸ್ತೆ, ತಲ್ಲೂರು- ನೇರಳಕಟ್ಟೆ-ಆಜ್ರಿ- ಸಿದ್ದಾಪುರ ರಸ್ತೆ, ಹೆಮ್ಮಕ್ಕಿ- ಕೆರಾಡಿ ರಸ್ತೆ, ಜಡ್ಕಲ್- ಮುದೂರು- ಹಳ್ಳಿಹೊಳೆ ರಸ್ತೆ, ಕೊಲ್ಲೂರು- ಹೆವ್ಮಾಡಿ ರಸ್ತೆ, ಆಲೂರು- ಮುಳ್ಳಿಕಟ್ಟೆ ರಸ್ತೆ, ಅರೆಹೊಳೆ ಕ್ರಾಸ್- ಕಾಲ್ತೋಡು- ಗೋಳಿಹೊಳೆ ರಸ್ತೆಗಳ ಸಹಿತ ಹಲವೆಡೆ ರಸ್ತೆಗೆ ಮರಗಳು ವಾಲಿಕೊಂಡಿದ್ದು, ಅನಾಹುತ ಸಂಭವಿಸುವ ಮುನ್ನ ಆಡಳಿತ ವ್ಯವಸ್ಥೆ ಎಚ್ಚೆತ್ತುಕೊಳ್ಳಬೇಕಾಗಿದೆ ಎಂಬುದು ನಾಗರಿಕರ ಬೇಡಿಕೆಯಾಗಿದೆ.

ಮುನ್ನೆಚ್ಚರಿಕಾ ಕ್ರಮ ಅಗತ್ಯ

ಅಪಾಯ ಎದುರಾಗುವ ಮುನ್ನವೇ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ದೊಡ್ಡ ಅನಾಹುತ ಸಂಭವಿಸಿದ ಮೇಲೆ ಪರಿಹಾರ ನೀಡುವುದಕ್ಕಿಂತ ಮುನ್ನೆಚ್ಚರಿಕಾ ಕ್ರಮಕೈಗೊಳ್ಳುವುದು ಅಗತ್ಯ. ಅರಣ್ಯ ಇಲಾಖೆ, ಲೋಕೋಪಯೋಗಿ ಇಲಾಖೆ ಹಾಗೂ ಸ್ಥಳೀಯ ಆಡಳಿತ ಕೂಡಲೇ ಸ್ಥಳ ಪರಿಶೀಲನೆ ನಡೆಸಬೇಕಿದೆ. ಸಾರ್ವಜನಿಕರ ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕಾಗಿ ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳ ಕೊಂಬೆಗಳನ್ನು ಕತ್ತರಿಸಬೇಕಿದೆ. ತೀವ್ರ ಅಪಾಯದಲ್ಲಿರುವ ಮರಗಳನ್ನು ತೆರವುಗೊಳಿಸಲು ತುರ್ತು ಕ್ರಮ ಕೈಗೊಳ್ಳಬೇಕಿದೆ ಎಂಬುವುದು ನಾಗರಿಕರ ಆಗ್ರಹ.

ವಾಹನ ಸವಾರರಿಗೂ ಆತಂಕ

ಭಾರಿ ಮಳೆ ಮತ್ತು ಬಿರುಗಾಳಿಯ ಸಮಯದಲ್ಲಿ ಮರಗಳು, ಬೃಹದಾಕಾರದ ಕೊಂಬೆಗಳು ಏಕಾಏಕಿ ರಸ್ತೆಗೆ ಉರುಳಿ ಬೀಳುವ ಭೀತಿ ಎದುರಾಗಿದೆ. ಬಿದ್ದ ಉದಾಹರಣೆಗಳೂ ಸಾಕಷ್ಟಿವೆ. ರಸ್ತೆ ಕಡೆಗೆ ಅಪಾಯಕಾರಿಯಾಗಿ ವಾಲಿರುವ ಮರಗಳಿಂದಾಗಿ ಪ್ರತಿ ದಿನ ನೂರಾರು ವಾಹನ ಸವಾರರು ಆತಂಕದಿಂದಲೇ ಸಂಚರಿಸಬೇಕಾದ ಪರಿಸ್ಥಿತಿ ನಿರ್ವಾಣವಾಗಿದೆ.

ಪ್ರಾಣಹಾನಿ ಸಂಭವಿಸುವ ಸಾಧ್ಯತೆ

ಬಸ್, ಲಾರಿಗಳಂತಹ ಎತ್ತರದ ವಾಹನಗಳು ಸಾಗುವಾಗ ಈ ಮರದ ಕೊಂಬೆಗಳಿಗೆ ತಾಗಿ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ. ರಸ್ತೆ ಪಕ್ಕದಲ್ಲಿರುವ ವಿದ್ಯುತ್ ಕಂಬ ಮತ್ತು ತಂತಿಗಳ ಮೇಲೆಯೇ ಹಲವು ಮರಗಳು ವಾಲಿವೆ. ಬಿರುಗಾಳಿಯ ವೇಳೆ ಇವು ತುಂಡಾಗಿ ವಿದ್ಯುತ್ ಜಾಲದ ಮೇಲೆ ಬಿದ್ದಲ್ಲಿ ಅವಡಗಳು ಸಂಭವಿಸುವುದು ಕಟ್ಟಿಟ್ಟ ಬತ್ತಿ. ತಂತಿಗಳು ರಸ್ತೆಗೆ ಬಿದ್ದರೆ ಪ್ರಾಣಹಾನಿ ಸಂಭವಿಸುವ ಸಾಧ್ಯತೆಯೂ ದಟ್ಟವಾಗಿದೆ ಎನ್ನುತ್ತಾರೆ ವಾಹನ ಸವಾರರು.

ವಿದ್ಯಾರ್ಥಿಗಳ ಸುರಕ್ಷೆ ದೃಷ್ಟಿಯಿಂದ ಶಾಲಾ ವಾಹನಗಳು ಸಂಚರಿಸುವ ರಸ್ತೆ ಬದಿಯಲ್ಲಿರುವ ಹಾಗೂ ರಸ್ತೆಯ ಕಡೆಗೆ ಅಪಾಯಕಾರಿಯಾಗಿ ವಾಲಿರುವ ಮರಗಳನ್ನು ತುರ್ತಾಗಿ ತೆರವುಗೊಳಿಸಬೇಕಾಗಿದೆ. ಮಳೆಗಾಲದಲ್ಲಿ ಈ ಮರಗಳ ಕೊಂಬೆಗಳು ಅಥವಾ ಮರಗಳು ರಸ್ತೆಗೆ ಬೀಳುವ ಸಾಧ್ಯತೆ ಇರುವುದರಿಂದ ಶಾಲಾ ವಾಹನಗಳಲ್ಲಿ ಸಂಚರಿಸುವ ವಿದ್ಯಾರ್ಥಿಗಳ ಜೀವಕ್ಕೆ ಅಪಾಯ ಉಂಟಾಗುವ ಸಂಭವವಿದೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳ ಮೂಲಕ ಸ್ಥಳ ಪರಿಶೀಲನೆ ನಡೆಸಿ ಅಪಾಯಕಾರಿಯಾಗಿರುವ ಮರಗಳನ್ನು ಶ್ರೀ ಕಡಿಯಲು ಅಥವಾ ಗೆಲ್ಲುಗಳನ್ನು ತೆರವುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು.

— ಗಣೇಶ ನೇರಳಕಟ್ಟೆ